ಜನಸೇವೆಯೆಂಬ ಪದಕ್ಕೆ ಅನ್ವರ್ಥನಾಮ ವಸಂತ ಬಂಗೇರ : ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಂದ ವಸಂತ ವಿನ್ಯಾಸ ಪುಸ್ತಕ ಬಿಡುಗಡೆ :

 

 

ಬೆಳ್ತಂಗಡಿ:  ಸಿಟ್ಟು, ಅನುಕಂಪ ಹಾಗೂ ಕರುಣಾಮಯಿ ಬಂಗೇರರು. ರಾಜಕರಣದಲ್ಲಿ ಜನಸೇವೆಯೆಂಬ ಪದಕ್ಕೆ ಅನ್ವರ್ಥನಾಮ ವಸಂತ ಬಂಗೇರ ಎಂದು ವಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬೆಳ್ತಂಗಡಿ ಶ್ರೀ ಗುರುದೇವ ಪದವಿಪೂರ್ವ ಕಾಲೇಜು ಆವರಣದಲ್ಲಿ ಡಿ.17 ರಂದು ಜೈ ಪ್ರಕಾಶನ ವತಿಯಿಂದ ಹೊರತಂದ ಮಾಜಿ ಶಾಸಕ ಕೆ.ವಸಂತ ಬಂಗೇರ ಅವರ ವಸಂತ ವಿನ್ಯಾಸ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.

 

 

 

 

ವಸಂತ ಬಂಗೇರರ ವ್ಯಕ್ತಿತ್ವ ಸಮಾಜಕ್ಕೆ ಪರಿಚಯವಾಗಬೇಕು, ಅವರೊಬ್ಬ ವಿಶಿಷ್ಟ ನಾಯಕ ಎನ್ನುವುದನ್ನು ಪುಸ್ತಕದಲ್ಲಿ ಬಿತ್ತರಿಸಲಾಗಿದೆ.
ನಮ್ಮ ಧರ್ಮದ ಬಗ್ಗೆ ನಿಷ್ಠೆ ಇರಬೇಕು. ಪರ ಧರ್ಮದ ಬಗ್ಗೆ ಸಹಿಷ್ಣುತೆ ಬೇಕು. 1983 ರಲ್ಲಿ ನಾನು ಬಂಗೇರರು ಜತೆಗೇ ವಿಧಾನಸಭೆಯನ್ನು ಪ್ರವೇಶಿಸಿದವರು. ಅಂದಿನ ಸಮಯದ ರಾಜಕೀಯ ಒಡನಾಟವನ್ನು ತೆರೆದಿಟ್ಟ ಅವರು ಬೆಳ್ತಂಗಡಿಯಲ್ಲಿ ಬಂಗೇರು ಶಾಸಕನಾಗಿದ್ದಾಗ ಉಲ್ಬಣಿಸಿದ ಮಂಗನಕಾಯಿಲೆ ವಿಚಾರದಲ್ಲಿ ಅವರ ನಡೆ ಹಾಗೂ ನಾನು ಕಂಡಂತ ವಸಂತ ಬಂಗೇರ ಹೇಗಿದ್ದಾರೋ ಹಾಗೇ ಪುಸ್ತಕದಲ್ಲೂ ಲೇಖಕ ಚೊಕ್ಕಾಡಿಯವರು ಅಚ್ಚೊತ್ತಿದ್ದಾರೆ ಎಂದು ಪುಸ್ತಕದ ಬಗ್ಗೆ ವಿವರಿಸಿದರು.

ಕಡೂರು ಮಾಜಿ ಶಾಸಕ ವೈ.ಎಸ್.ವಿ.ದತ್ತ ಪುಸ್ತಕ ಪರಿಚಯಿಸಿ ಮಾತನಾಡಿ, ಚೊಕ್ಕಾಡಿ ವಸ್ತುನಿಷ್ಠ ಬರಹಗಾರ. ಅವರ ಬರಹದಿಂದ ಬಂದ ವಸಂತ ಬಂಗೇರ ಅವರ ವ್ಯಕ್ತಿ ಚಿತ್ರಣ ಅಂತಃಕರಣದ ಪ್ರದರ್ಶನವಾಗಿದೆ. ವೈಚಾರಿಕತೆ ಸ್ಪಷ್ಟ ರಾಜಕರಣ ಮಾಡುತ್ತಾ ಬಂದಿರುವ ಸಿದ್ದರಾಮಯ್ಯನವರಿಂದ ಪುಸ್ತಕ ಬಿಡುಗಡೆ ಅರ್ಥಪೂರ್ಣ ಎಂದು ಹೇಳಿದರು.

ಮಾಜಿ ಶಾಸಕ ಕೆ.ವಸಂತ ಬಂಗೇರ ಅವರು ಮಾತನಾಡಿ, 1960ರಲ್ಲಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ರಾಜಕೀಯ ಪ್ರವೇಶಿಸಿ 55 ನೇ ವರ್ಷದ ರಾಜಕೀಯ ಸೇವೆ ನನ್ನದಾಗಿದೆ. 1982-83 ರಲ್ಲಿ ರಾಮಕೃಷ್ಣ ಹೆಗ್ಡೆ ಮುಖ್ಯಮಂತ್ರಿಗಳಾಗಿದ್ದಾಗ, ಪಿ.ಜಿ.ಆರ್.ಸಿಂಧ್ಯಾ ಆರೋಗ್ಯ ಸಚಿವರಾಗಿದ್ದರು. ಮಂಗನಕಾಯಿಲೆ 10 ಸಾವಿರ ಮಂದಿಗೆ ವ್ಯಾಪಿಸಿತ್ತು. ಅಂದಿನ ದಿನ ಒಂದು ವರ್ಷದಲ್ಲಿ ನೆರವಾದ ಕ್ಷಣವನ್ನು ಸ್ಮರಿಸಿದರು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಬೆಳ್ತಂಗಡಿ ಕ್ಷೇತ್ರಕ್ಕೆ 2,000 ಸಾವಿರ ಕೋ.ರೂ. ಅನುದಾನ ಬಿಡುಗಡೆ ನೀಡಿದ್ದರು. ಆದರೆ ಈಗಿನ ಶಾಸಕರು ಎಲ್ಲವನ್ನು ನಾನೇ ಮಾಡಿದೇನೆ ಎಂದು ಬೀಗುತ್ತಿರುವುದು ಕಂಡು ಬೇಸರವಾಗಿದೆ ಎಂದು ವಿಷಯ ಪ್ರಸ್ತಾಪಿಸಿದರು.

ಮಾಜಿ ಶಾಸಕ ಕೆ.ವಸಂತ ಬಂಗೇರ ದಂಪತಿ ಹಾಗೂ ಲೇಖಕ ಅರವಿಂದ ಚೊಕ್ಕಾಡಿ ದಂಪತಿಯನ್ನು ಸಿದ್ದರಾಮಯ್ಯನವರು ಗೌರವಿಸಿದರು.

ಶ್ರೀ ಗುರುದೇವ ಪದವಿಪೂರ್ವ ಕಾಲೇಜಿನ ಸಾಧಕ ಕರಾಟೆ ವಿದ್ಯಾರ್ಥಿಗಳಾದ ಯುವರಾಜ್, ಶಾಹಿರ್ ಅನಾಜ್, ಶೇಕ್ ಅಲ್ಫಾನ್ ಹುಸೇನ್ ಹಾಗೂ ದೈಹಿಕ ಶಿಕ್ಷಕರನ್ನು ಅಭಿನಂದಿಸಲಾಯಿತು.

ವಿಧಾನ ಪರಿಷತ್ ಸದಸ್ಯ ಕೆ.ಹರೀಶ್ ಕುಮಾರ್, ಶಾಸಕ ಯು.ಟಿ.ಖಾದರ್, ಮಾಜಿ ಸಚಿವರಾದ ಗಂಗಾಧರ ಗೌಡ, ರಮಾನಾಥ ರೈ, ಮಾಜಿ ಶಾಸಕ ಮೊಯಿದಿನ್ ಬಾವ ಸಹಿತ ಜಿಲ್ಲೆಯ ಮಾಜಿ ಶಾಸಕರು ಉಪಸ್ಥಿತರಿದ್ದರು.

ಪುಸ್ತಕದ ಲೇಖಕ ಅರವಿಂದ ಚೊಕ್ಕಾಡಿ ಪ್ರಾಸ್ತಾವಿಸಿದರು. ಪುಸ್ತಕ ಅನಾವರಣ ಸ್ವಾಗತ ಸಮಿತಿ ಅಧ್ಯಕ್ಷ ಪದ್ಮನಾಭ ಮಾಣಿಂಜ ಸ್ವಾಗತಿಸಿದರು.
ದೇವಿಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.
ಮಂಜುಳಾ ಡಿ.ಪ್ರಸಾದ್ ಪ್ರಾರ್ಥಿಸಿದರು.

ಮುಂದಿನ ಬಾರಿಗೂ ಬಂಗೇರರಿಗಿದೆ ಅವಕಾಶ

ಮಂತ್ರಿಯಾಗುವ ಎಲ್ಲ ಅರ್ಹತೆಗಳು ಬಂಗೇರರಿಗಿತ್ತು. ಬಂಗೇರರು ಆರೋಗ್ಯವಾಗಿದ್ದರೆ ಮತ್ತೆ ಚುನಾವಣೆಗೆ ನಿಲ್ಲಬೇಕು ಎಂಬ ಹಂಬಲ ನಮ್ಮದು. ಆಯ್ಕೆ ಅವರಿಗೆ ಬಿಟ್ಟಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು. ಇದೇ ವೇಳೆ ಬಿಜೆಪಿ ವಿರುದ್ಧ ಮಾರ್ಮಿಕವಾಗಿ ಗುಡುಗಿದ ಅವರು ಸಂವಿಧಾನ ಬದಲಾಯಿಸುತ್ತೇವೆ ಎಂದು ಹೇಳುತ್ತಾ, ಸಂವಿಧಾನದ ಪರ ಮಾತಾಡುತ್ತಾ ದ್ವಂದ್ವ ನಿಲುವಿನ ರಾಜಕೀಯವಿಬಾರದು. ಸಂವಿಧಾನದ ಮೇಲೆ ಗೌರವ ಇಲ್ಲದವರು ರಾಜಕೀಯ ಮಾಡಲೇ ಬಾರದು ಎಂದು ಪ್ರತಿಕ್ರಿಯಿಸಿದರು.

error: Content is protected !!