ಬೆಳ್ತಂಗಡಿ: ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಪರಿಸರ ಮತ್ತು ಜೀವಿ ಶಾಸ್ರ್ತ ಸಚಿವ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಬೆಳ್ತಂಗಡಿಗೆ ಭೇಟಿ ನೀಡಿದ್ದು ಇವರನ್ನು ಬಿಜೆಪಿ ಮಂಡಲದ ವತಿಯಿಂದ ಧರ್ಮಸ್ಥಳ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಹರೀಶ್ ಪೂಂಜ ಸಚಿವ ಆನಂದ ಸಿಂಗ್ ರವರಿಗೂ ಧರ್ಮಸ್ಥಳಕ್ಕೂ ಅವಿನಾಭಾವ ಸಂಬಂಧ ಇದೆ .
16 ವರ್ಷಗಳ ಹಿಂದೆ ಇವರು ಧರ್ಮಸ್ಥಳ ಕ್ಷೇತ್ರಕ್ಕೆ ಒಂದು ಆನೆಯನ್ನು ಕೊಟ್ಟಿದ್ದನ್ನು ಈ ಕ್ಷಣದಲ್ಲಿ ನಾವು ನೆನೆಪಿಸಿಕೊಳ್ಳಬಹುದು. ಪ್ರವಾಸೋದ್ಯಮ ಸಚಿವರಾಗಿ ನಾವು ಏನೇ ಬೇಡಿಕೆ ಇಟ್ಟರೂ ಇಲ್ಲ ಎನ್ನುವವರಲ್ಲ. ಈಗ ಸೌತಡ್ಕ ದೇವಸ್ಥಾನದ ಬಗ್ಗೆ ಮನವಿ ನೀಡಿದಾಗಲೂ ಮೂಲ ಭೂತ ದೃಷ್ಟಿಯಿಂದ 25 ಲಕ್ಷ ರೂ. ನೀಡುತ್ತೇವೆ ಎಂದಿದ್ದಾರೆ. ಶಿಶಿಲ ದೇವಸ್ಥಾನಕ್ಕೂ ಒಂದು ಕೋಟಿ ರೂಪಾಯಿ ಕೊಟ್ಟಿದ್ದಾರೆ. ಅಷ್ಟು ಸರಳ ಸಜ್ಜನಿಕೆಯ ವ್ಯಕ್ತಿ ಆನಂದ್ ಸಿಂಗ್. ಸಚಿವ ಸಂಪುಟದಲ್ಲಿದ್ದರೂ ಸಹೋದರರ ರೀತಿಯಲ್ಲಿ ನಮ್ಮ ಜೊತೆಗೆ ಇರುತ್ತಾರೆ ಎಂದರು.ಶಿಶಿಲ ದೇವಸ್ಥಾನದ ಆಡಳಿತ ಮಂಡಳಿಯಿಂದ ಸಚಿವರನ್ನು ಈ ವೇಳೆ ಸನ್ಮಾನಿಸಿ ಗೌರವಿಸಿದರು. ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೊಟ್ಯಾನ್ ಸ್ವಾಗತಿಸಿ ಧರ್ಮಸ್ಥಳ ಗ್ರಾ.ಪಂ ಉಪಾಧ್ಯಕ್ಷ ಶ್ರೀನಿವಾಸ್ ರಾವ್ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಆನಂದ್ ಸಿಂಗ್ ಪುತ್ರ ಸಿದ್ಧಾರ್ಥ್ ಸೇರಿದಂತೆ ಚೆನ್ನಕೇಶವ, ಕೊರಗಪ್ಪ ನಾಯ್ಕ, ಪುಷ್ಪಾವತಿ ಆರ್ ಶೆಟ್ಟಿ, ಗಣೇಶ್ ಗೌಡ,ಧನಲಕ್ಷ್ಮೀ ಜನಾರ್ಧನ್ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.