ಚಿಕ್ಕಮಗಳೂರು: ದತ್ತಪೀಠಕ್ಕೆ ಹಿಂದೂ ಅರ್ಚಕರನ್ನು ನೇಮಕ ಮಾಡಬೇಕೆಂಬ ಬೇಡಿಕೆಗೆ ಸರ್ಕಾರ ಕೊನೆಗೂ ಒಪ್ಪಿಗೆ ನೀಡಿದೆ. ಶನಿವಾರ ಸಂಜೆ ಇಬ್ಬರು ಅರ್ಚಕರನ್ನು ನೇಮಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಹಿಂದೂ-ಮುಸ್ಲಿಮರ ಸೌಹಾರ್ದ ಧಾರ್ಮಿಕ ಕೇಂದ್ರವಾಗಿದ್ದ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಕಳೆದ ಮೂರು ದಶಕಗಳಿಂದ ವಿವಾದದ ಕೇಂದ್ರವಾಗಿದ್ದು, ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ಇತ್ತೀಚೆಗೆ ಸರ್ಕಾರ ನ್ಯಾಯಾಲಯದ ಆದೇಶದನ್ವಯ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ಕೈಗೊಳ್ಳಬೇಕಾದ ಪೂಜಾ ವಿಧಾನಗಳ ಮೇಲ್ವಿಚಾರಣೆಗಾಗಿ 8 ಮಂದಿ ಸದಸ್ಯರನ್ನೊಳಗೊಂಡ ವ್ಯವಸ್ಥಾಪನಾ ಸಮಿತಿಯನ್ನು ರಚಿಸಿತ್ತು. ಈ ಸಮಿತಿ ಇತ್ತೀಚೆಗೆ ಸಭೆ ನಡೆಸಿ ಹಿಂದೂ ಅರ್ಚಕರ ನೇಮಕ ಸಂಬಂಧ ಧಾರ್ಮಿಕ ದತ್ತಿ ಇಲಾಖೆ ಆಯುಕ್ತರಿಗೆ ಪ್ರಸ್ತಾವನೆ ಸಲ್ಲಿಸಿತ್ತು.ದತ್ತಪೀಠಕ್ಕೆ ಅರ್ಚಕರನ್ನು ನೇಮಕ ಮಾಡಿದ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ನಗರದಲ್ಲಿ ಬಿಜೆಪಿ, ಸಂಘ ಪರಿವಾರದ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.
ಜಾಹೀರಾತು
ಇದೀಗ ರಾಜ್ಯ ಸರ್ಕಾರ ದತ್ತಪೀಠದಲ್ಲಿ ಪೂಜಾ ವಿಧಾನಗಳನ್ನು ನೆರವೇರಿಸಲು ಇಬ್ಬರು ಅರ್ಚಕರನ್ನು ನೇಮಿಸಿದೆ. ಶೃಂಗೇರಿಯ ಶ್ರೀಕಾಂತ್ ಹಾಗೂ ಚಿಕ್ಕಬಳ್ಳಾಪುರದ ಸಂದೀಪ್ ನೇಮಕಗೊಂಡ ಅರ್ಚಕರಾಗಿದ್ದಾರೆ. ಸರ್ಕಾರದಿಂದ ಆದೇಶ ಹೊರ ಬೀಳುತ್ತಿದ್ದಂತೆ ಚಿಕ್ಕಮಗಳೂರು ನಗರದಲ್ಲಿ ಬಿಜೆಪಿ, ಸಂಘ ಪರಿವಾರದ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.