ಪುತ್ತೂರು: ವಿಷನ್ ಸಹಾಯನಿಧಿ ಸೇವಾ ಟ್ರಸ್ಟ್ನ ಆಶ್ರಯದಲ್ಲಿ ರೋಟರಿ ಕ್ಯಾಂಪ್ಕೋ ಬ್ಲಡ್ ಸೆಂಟರ್ ಪುತ್ತೂರು, ಧನ್ವಂತರಿ ಕ್ಲಿನಿಕಲ್ ಲ್ಯಾಬೊರೇಟರಿ, ಸಕ್ಷಮ ಪುತ್ತೂರು ಘಟಕದ ಸಹಯೋಗದೊಂದಿಗೆ ಸ್ವಯಂಪ್ರೇರಿತ ರಕ್ತದಾನ ಶಿಬಿರ ಮತ್ತು ನೇತ್ರದಾನ ನೋಂದಣಿ, ಉಚಿತ ಮಧುಮೇಹ ಹಾಗೂ ಅಧಿಕ ರಕ್ತದೊತ್ತಡ ತಪಾಸಣಾ ಶಿಬಿರ ಹಾಗೂ ಊರ ಪರವೂರ ಸಹೃದಯಿ ದಾನಿಗಳ ಸಹಕಾರದಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಅಶಕ್ತರಿಗೆ ನಿರಂತರವಾಗಿ ಆಹಾರ ಸಾಮಗ್ರಿಗಳ ಕಿಟ್ ನೀಡುವ 18ನೇ ಯೋಜನೆ ‘ಒಳಿತು ಮಾಡು ಮನುಷ’ ಕಾರ್ಯಕ್ರಮವು ನವೆಂಬರ್ 30ರಂದು ಪುತ್ತೂರಿನ ‘ರೋಟರಿ ಟ್ರಸ್ಟ್ ಹಾಲ್’ನಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ರೋಯಲ್ ಸೌಹಾರ್ದ ಸಹಕಾರಿ ಸಂಘದ ಸ್ಥಾಪಕರಾದ ದಂಬೆಕ್ಕನ ಸದಾಶಿವ ರೈ ಮಾತನಾಡಿ ಈ ಕಾರ್ಯಕ್ರಮದಲ್ಲಿ ಮಾನವೀಯತೆ ಮತ್ತು ಮನುಷ್ಯತ್ವ ಕಂಡುಬರುತ್ತಿದೆ.ಯಾರು ಕಷ್ಟದಲ್ಲಿ ಇದ್ದಾರೋ ಯಾರು ಕಣ್ಣೀರಲ್ಲಿ ಇದ್ದಾರೋ ಯಾರು ದುಃಖದಲ್ಲಿ ಇದ್ದಾರೋ ಅವರಿಗೆ ಒಂದು ಸಹಾಯ ಹಸ್ತ ಇಲ್ಲಿ ಎದ್ದು ಕಾಣುತ್ತಿದೆೆ. ಇವರ ತಂಡ ಒಳ್ಳೆ ಕೆಲಸವನ್ನು ಮಾಡುತ್ತಿದ್ದಾರೆ. ಅವರೊಟ್ಟಿಗೆ ಯಾರು ಶಕ್ತಿವಂತರಿದ್ದರೋ ಅವರು ಈ ಕಾರ್ಯಕ್ರಮವನ್ನು ಮುಂದುವರಿಸುವುದು ತುಂಬಾ ಅವಶ್ಯಕತೆ ಇದೆ ಎಂದರು.
ಕರ್ನಾಟಕ ಸರಕಾರದ ಸಮಾಜ ಕಲ್ಯಾಣ ಇಲಾಖೆಯ ಮಾಜಿ ಅಧ್ಯಕ್ಷೆ ದಿವ್ಯ ಪ್ರಭಾ ಚಿಲ್ತಾಡ್ಕ ಮಾತನಾಡಿ ನಾವು ಸಮಾಜದಲ್ಲಿ ಒಳ್ಳೆ ಕೆಲಸ ಮಾಡುತ್ತಿದ್ದೇವೆ ಎಂದರೆ ಅದು ದೈವನಿಮಿತ್ತ. ಯಾವುದೇ ಫಲಾಪೇಕ್ಷೆಯಿಲ್ಲದೆ ಸ್ವಾರ್ಥವಿಲ್ಲದೆ, ಪ್ರಚಾರವಿಲ್ಲದೆ ಒಬ್ಬ ಮನುಷ್ಯ ಕಷ್ಟದಲ್ಲಿರುವವರಿಗೆ ಸಹಾಯ ಮಾಡಿದರೆ ಅದರಿಂದ ಸಿಗುವ ಆತ್ಮ ತೃಪ್ತಿಯೇ ದೇವರ ವರವಾಗಿರುತ್ತದೆ. ಆ ಕೆಲಸವನ್ನು ಒಳಿತು ಮಾಡು ಮನುಷ ತಂಡ ಮಾಡುತ್ತಿದೆ. ಸಮಾಜಕ್ಕೆ ಇನ್ನೂ ಒಳ್ಳೆಯ ಕೆಲಸಗಳನ್ನು ಮಾಡಿ. ನಾವು ತಿನ್ನುವ ಅನ್ನದಿಂದ ಒಂದು ತುತ್ತು ಅನ್ನವನ್ನು ಇನ್ನೊಬ್ಬರಿಗೆ ಕೊಡಬೇಕು. ಅದೇ ಮನುಷ್ಯತ್ವದ ಗುಣ ಎಂದರು. ಜೊತೆಗೆ ಪ್ರತಿ ತಿಂಗಳು ನನ್ನ ಕೈಲಾದ ಸಹಾಯವನ್ನು ಮಾಡುತ್ತೇನೆ ಎಂದು ಹೇಳಿದರು.
ಪೆರ್ಲಂಪಡಿಯಾ ಹರಿಪ್ರಸಾದ್ ಮಾತನಾಡಿ ಒಳಿತು ಮಾಡು ಮನುಷ ಬಹಳ ಒಳ್ಳೆಯ ಕಾರ್ಯಕ್ರಮ. ಜನರಿಗೆ ತುಂಬಾ ಸಹಾಯ ಆಗುತ್ತಿದೆ. ದಾನ, ಧರ್ಮ,ಮಾಡುವುದರಿಂದ ನಮ್ಮ ಅವಶ್ಯಕತೆಗೆ ಯಾವುದೇ ಸಮಸ್ಯೆಗಳು ಆಗುವುದಿಲ್ಲ. ಏನು ನಮಗೆ ದೇವರು ಕೊಟ್ಟಿದ್ದಾನೋ ಅದನ್ನು ಅಶಕ್ತರಿಗೆ ದಾನ ಮಾಡಿದರೆ ದೇವರು ಮೆಚ್ಚುವಂತಹ ಕೆಲಸ ಮಾಡಿದಂತೆ. ಎಲ್ಲ ಸಹೃದಯಿಗಳು ಇವರ ಜೊತೆಗೆ ಕೈ ಜೋಡಿಸಿಕೊಂಡು ಸ್ವಲ್ಪ ಮಟ್ಟಿನ ಸಹಾಯ ಮಾಡಿದರೆ ಅಶಕ್ತರಿಗೆ ಅನಾರೋಗ್ಯ ವಂತರಿಗೆ ತುಂಬಾ ಹೆಚ್ಚಿನ ಸಹಾಯವಾಗುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ 52,000 ಸಾವಿರ ಮೊತ್ತದ 52ಆಹಾರ ಕಿಟ್ ವಿತರಣೆ ಮಾಡಲಾಯಿತು. ಹಾಗೂ 40 ಜನರಿಗೆ ಬಿಪಿ, ಶುಗರ್ ತಪಾಸಣೆ ಹಾಗೂ 2 ಜನರು ರಕ್ತದಾನ ಮಾಡಿದರು.
ಈ ಸಂದರ್ಭದಲ್ಲಿ ಟ್ರಸ್ಟ್ನ ಪದಾಧಿಕಾರಿಗಳದ ಕಲಾವಿದ ಕೃಷ್ಣಪ್ಪ ಶಿವನಗರ ಜೆ.ಸಿ, ಚೇತನ್ ಕುಮಾರ್ ಪುತ್ತೂರು, ಶೋಭಾ ಮಡಿವಾಳ ಹಾಗೂ ಸದಸ್ಯರು ಉಪಸ್ಥಿತರಿದ್ದರು. ಶುಭ ಪ್ರಾರ್ಥಿಸಿ, ಮಾಲಿನಿ ಸ್ವಾಗತಿಸಿ. ಶೀಲಾ ಧನ್ಯವಾದ ತಿಳಿಸಿದರು. ಮಮತಾ ಹಾಗೂ ಕು.ಸೌಜನ್ಯಾ ಅರ್ಲಪದವು ಕಾರ್ಯಕ್ರಮವನ್ನೂ ನಿರೂಪಿಸಿದರು.