ಮಂಗಳೂರು: ಕುಡಿದ ಅಮಲಿನಲ್ಲಿದ್ದ ವ್ಯಕ್ತಿಯೊಬ್ಬ ಪತ್ನಿಯೊಂದಿಗೆ ಜಗಳವಾಡಿ ಕೊಲೆಗೈದಿರುವ ಘಟನೆ ನಗರದ ತೆಂಕ ಎಕ್ಕಾರು ಗ್ರಾಮದಲ್ಲಿ ನಡೆದಿದೆ.
ದುರ್ಗೇಶ್ ಎಂಬಾತ ಕುಡಿದ ಮತ್ತಿನಲ್ಲಿ ತನ್ನ ಹೆಂಡತಿ ಸರಿತಾಳೊಂದಿಗೆ ಜಗಳವಾಡಿದ್ದಾನೆ. ಜಗಳ ತಾರಕಕ್ಕೇರಿ ಮರದ ರೀಪಿನಿಂದ ಹೊಡೆದು ಪತ್ನಿಯನ್ನು ಕೊಲೆ ಮಾಡಿದ್ದಾನೆ. ತಾಯಿಯ ಹತ್ಯೆ ಕಂಡು ಮಗ ರಾಹುಲ್ ಹೆದರಿ ತನ್ನ ಅಜ್ಜಿ ಮನೆಗೆ ಓಡಿ ಹೋಗಿದ್ದಾನೆ.ಸ್ವತಃ ಆರೋಪಿಯೇ ಇಂದು ಬೆಳಗ್ಗೆ ತನ್ನ ಅಣ್ಣ ಮಧುಗೆ ಕರೆ ಮಾಡಿ ಸರಿತಾ ಮೃತಪಟ್ಟಿರುವುದಾಗಿ ತಿಳಿಸಿದ್ದಾನೆ. ಮಧು ಸ್ಥಳಕ್ಕೆ ಬಂದು ನೋಡಿದಾಗ ದುರ್ಗೇಶನೇ ಸರಿತಾಳನ್ನು ಕೊಲೆ ಮಾಡಿರುವುದು ತಿಳಿದುಬಂದಿದೆ. ಈ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.