ಕಲಾವಿದನ ಬಾಳಿಗೆ ಬೆಳಕಾದ ಉದ್ಯಮಿ ಶಶಿಧರ್ ಶೆಟ್ಟಿ:ಯಕ್ಷಲೋಕದಲ್ಲಿ ಸಂಚಲನ ಮೂಡಿಸಿದ್ದ ಮನೋಜ್ ವೇಣೂರುರವರಿಗೆ 2 ಲಕ್ಷ ರೂ ಆರ್ಥಿಕ ಸಹಾಯ  

ಉಜಿರೆ: ಬಡ ಕುಟುಂಬದ ಮನೆಯೊಂದರಲ್ಲಿ ಹುಟ್ಟಿ, ಅಂಗವೈಕಲ್ಯಕ್ಕೆ ಸೆಡ್ಡು ಹೊಡೆದ ಯಕ್ಷಕಲಾವಿದನ ಬದುಕಿಗೆ, ಯಕ್ಷಧ್ರುವ ಪಟ್ಲ ಫೌಂಡೇಶನ್ (ರಿ.) ಮಂಗಳೂರು ಬೆಳ್ತಂಗಡಿ ಘಟಕದ ಗೌರವಾಧ್ಯಕ್ಷರು ಹಾಗೂ ಉದ್ಯಮಿಗಳಾದ ಶಶಿಧರ್ ಶೆಟ್ಟಿ ನವಶಕ್ತಿ ಗುರುವಾಯನಕೆರೆಯವರು ಬೆಳಕಾಗಿದ್ದಾರೆ.

ಕೃತಕ ಕಾಲಿನ ಮೂಲಕ ಯಕ್ಷಗಾನದಲ್ಲಿ ಹೆಜ್ಜೆ ಹಾಕಿ ಯಕ್ಷಗಾನ ಕ್ಷೇತ್ರದಲ್ಲಿ ಸಂಚಲನ ಮೂಡಿಸಿದ್ದ ಮನೋಜ್ ವೇಣೂರು ಇವರ ಮನೆ ವ್ಯವಸ್ಥೆ ಸರಿಯಾಗಿಲ್ಲದೆ ಎರಡು ಕೋಣೆಗಳ ಚಿಕ್ಕ ಶೀಟ್ ನ ಮನೆ ಮಾಡಿ ವಾಸ ಮಾಡುತಿದ್ದಾರೆ. ಪದವಿ ಓದುತ್ತಲೆ ಯಕ್ಷಗಾನದಲ್ಲಿ ಕಲಾವಿದನಾಗಿರುವ ಮನೋಜ್ ವೇಣೂರು ಕುಟುಂಬಕ್ಕೆ ಮನೆಗೆ ಬೇಕಾದ ವ್ಯವಸ್ಥೆ ಕಲ್ಪಿಸಲು ಉದ್ಯಮಿ ಶಶಿಧರ್ ಶೆಟ್ಟಿ 2 ಲಕ್ಷರೂ ಆರ್ಥಿಕ ನೆರವನ್ನು ಉಜಿರೆಯ ಜನಾರ್ಧನ ಸ್ವಾಮೀ ದೇವಸ್ಥಾನದ ರಥಬೀದಿಯಲ್ಲಿ ನಡೆದ ಯಕ್ಷಸಂಭ್ರಮದ ಸಭಾ ಕಾರ್ಯಕ್ರಮದಲ್ಲಿ ನೀಡಿದ್ದಾರೆ.

ಚಿಕ್ಕ ವಯಸ್ಸಿನಲ್ಲಿ ಬೆನ್ನಿನಲ್ಲಿ ಕಾಣಿಸಿಕೊಂಡ ಒಂದು ನೋವು ಇವರು ಬದುಕನ್ನು ಕಷ್ಟದ ಹಾದಿಗೆ ದೂಡಿತು. ಬೆನ್ನಿನ ನೋವನ್ನು ಆಪರೇಷನ್ ಮಾಡುವ ವೇಳೆ ಕಾಲಿನ ನರಗಳಿಗೆ ಸಮಸ್ಯೆಯಾಯಿತು. ಇದರಿಂದ ಇವರ ಕಾಲಿನಲ್ಲಿ ಬೊಬ್ಬೆಗಳು ಬರೋದಿಕ್ಕೆ ಆರಂಭವಾಗಿ, ಅದು ಗಾಯವಾಗಿ ವಾಸಿಯಾಗುತ್ತಿರಲಿಲ್ಲ. ಹೀಗಾಗಿ ವೈದ್ಯರು ಮನೋಜ್ ನ ಪ್ರಾಣಕ್ಕೆ ಅಪಾಯವಿದೆ ಎಂದು ಕಾಲನ್ನು ಆಪರೇಷನ್ ಮಾಡಿ ಮೊಣಕಾಲಿನಿಂದ ಬೇರ್ಪಡಿಸಿಬಿಟ್ಟರು. ಆಪರೇಷನ್ ಬಳಿಕ ಮನೋಜ್ 6 ತಿಂಗಳು ಮನೆಯಲ್ಲಿದ್ದರು. ಈ ವೇಳೆ ಲಯನ್ಸ್ ಕ್ಲಬ್ ನಾರಾವಿ ತಂಡ ಹಾಗೂ ಸುಮತಿ ಹೆಗ್ಡೆಯವರು ಮನೋಜ್ ರವರಿಗೆ ಕೃತಕ ಕಾಲನ್ನು ನೀಡಿದ್ರು.

ಮನೋಜ್ ಗೆ ನಡೆಯೋಕೆ ಆಗದಿರೋ ಈ ಸಂದರ್ಭದಲ್ಲಿ ಇವರು ಸುಧಾ ಚಂದ್ರನ್ ರವರ ಕಥೆಯನ್ನು ಓದಿದ್ರು. ಅಪಘಾತದಲ್ಲಿ ಕಾಲು ಕಳೆದುಕೊಂಡರು ಭರತನಾಟ್ಯದಲ್ಲಿ ಸಾಧನೆ ಮಾಡಿದ ಸುಧಾ ಚಂದ್ರನ್ ಅವರ ಬದುಕು ಮನೋಜ್ ಗೆ ಸ್ಪೂರ್ತಿಯಾಯಿತು. ಮತ್ತೆ ಮನೋಜ್ ಕೃತಕ ಕಾಲಿನಿಂದ ಯಕ್ಷಗಾನದ ಹಾಡಿಗೆ ಮನೆಯಲ್ಲಿಯೇ ಹೆಜ್ಜೆ ಹಾಕೋದಿಕ್ಕೆ ಆರಂಭಿಸಿದ್ರು. ಬಳಿಕ ಯಕ್ಷ ನಿಧಿ ಮೂಡಬಿದಿರೆ ಮಕ್ಕಳ ಮೇಳ ಇದರಲ್ಲಿ ಕಲಾವಿದನಾದ್ರು.

ಬಣ್ಣದ ವೇಷ ಅಂದ್ರೆ ಪಂಚ ಪ್ರಾಣ ಅನ್ನೋ ಮನೋಜ್ ವೇಣೂರು ಬಣ್ಣದ ವೇಷದಲ್ಲಿ ಸತೀಶ್ ನಯನಾಡುರವರ ಹಾಗೆ ಆಗಬೇಕು ಎನ್ನುತ್ತಾರೆ. ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿಯವರ ಭಾಗವತಿಕೆಯನ್ನು ಬಹಳ ಇಷ್ಟಪಡುವ ಇವರು ಪಾವಂಜೆ ಮೇಳಕ್ಕೆ ಸೇರಬೇಕು ಅಂತ ನಿರ್ಧರಿಸಿದ್ರು. ಹೀಗಾಗಿ ಈ ವರ್ಷದಿಂದ ಪಾವಂಜೆ ಮೇಳದಲ್ಲಿ ಬಣ್ಣಹಚ್ಚುತ್ತಿದ್ದಾರೆ. ಇದಿಷ್ಟೇ ಅಲ್ಲದೆ ಭಾಗವತಿಕೆಯಲ್ಲಿ ಪಟ್ಲ ಸತೀಶ್ ಶೆಟ್ಟಿಯವರಂತೆ ಆಲಾಪನೆಯನ್ನೂ ಹಾಡಲು ಕಲಿಯುತ್ತಿದ್ದಾರೆ. ಮಹಿಷಾಸುರನ ವೇಷದಲ್ಲಿ ಕುಣಿಯಬೇಕು ಎಂಬುದು ಇವರ ಬಹುದೊಡ್ಡ ಕನಸು.

ಇವರ ಕನಸುಗಳಿಗೆ ಇನ್ನಷ್ಟು ಪ್ರೋತ್ಸಾಹ ನೀಡುತ್ತಾ, ವ್ಯವಸ್ಥಿತ ಮನೆ ಕಲ್ಪಿಸಲು ಮುಂದಾಗಿರುವ ಉದ್ಯಮಿ ಶಶಿಧರ್ ಶೆಟ್ಟಿಯವರು ಮನೋಜ್ ಕುಟುಂಬಕ್ಕೆ ಆರ್ಥಿಕ ನೆರವು ನೀಡಿದ್ದಾರೆ. ಈ ಮೂಲಕ ಯಕ್ಷಕಲಾವಿದನೊಬ್ಬನ ಕನಸುಗಳಿಗೆ ಬಲ ತುಂಬಿದ್ದಾರೆ.

error: Content is protected !!