ಪ್ರತಿಭಾ ಸಾಗರ… ಪ್ರೇಮ್ ಸಾಗರ್…!

ಮಾತಿಗೂ ಸೈ, ನಟನೆಗೂ ಸೈ, ನಾಯಕತ್ವ, ಯಕ್ಷಗಾನ, ಕರಾಟೆ, ಹಾವಿನ ರಕ್ಷಣೆ ಹೀಗೆ ಎಲ್ಲದರಲ್ಲೂ ತನ್ನ ಚತುರತೆಯನ್ನು ಪ್ರದರ್ಶಿಸುವ ಸಕಲಕಲಾವಲ್ಲಭ ಬೆಳ್ತಂಗಡಿಯ ಪ್ರೇಮ್ ಸಾಗರ್. ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜ್ ಬೆಳ್ತಂಗಡಿಯ ವಿದ್ಯಾರ್ಥಿಯಾಗಿರುವ ಇವರು ಊರಲ್ಲೂ ಫೇಮಸ್ , ಕಾಲೇಜ್ ನಲ್ಲೂ ಫೇಮಸ್.

ಪೇಮ್ ಸಾಗರ್ ಬೆಳ್ತಂಗಡಿ ಲೈಲಾ ಗ್ರಾಮದ ಸತೀಶ್ ಕುಮಾರ್ ಹಾಗೂ ಗೀತಾರವರ ಪುತ್ರ. ಸಣ್ಣ ವಯಸ್ಸಿನಲ್ಲಿ ಯಕ್ಷಗಾನದ ಅಭಿರುಚಿ ಪಡೆದ ಇವರು ಬಳಿಕ ಯಕ್ಷಗಾನದ ಪಾತ್ರದಾರಿಯಾದರು. ಇವರ ಅಜ್ಜ ಕಟೀಲು ಮೇಳದಲ್ಲಿ ಮುಖ್ಯಪಾತ್ರದಾರಿಯಾಗಿದ್ದರು. ಚಿಕ್ಕಪ್ಪ ಸುಕೇಶ್ ಕೂಡ ಯಕ್ಷಗಾನ ಕಲಾವಿದರು. ಅಜ್ಜ ಹಾಗೂ ಚಿಕಪ್ಪನ ಸ್ಪೂರ್ತಿಯಿಂದ ಇವರು ಯಕ್ಷಗಾನದಲ್ಲಿ ಬಹಳಷ್ಟು ಆಸಕ್ತಿ ಪಡೆದಿದ್ದಾರೆ. ಹೀಗಾಗಿ ಚಿಕ್ಕ ವಯಸ್ಸಿನಿಂದಲೇ ಯಕ್ಷಗಾನ ಪ್ರದರ್ಶನದಲ್ಲಿ ಭಾಗವಹಿಸಲು ಆರಂಭಿಸಿದ್ದರು. ಬೆಳ್ತಂಗಡಿಯ ಜೆಸಿಐ ಕಾರ್ಯಕ್ರಮದಲ್ಲಿ, ಬೆಂಗಳೂರಿನಲ್ಲೂ ಯಕ್ಷಗಾನ ಪ್ರತಿಭೆಯನ್ನು ಅನಾವರಣಗೊಳಿಸಿದ್ದಾರೆ. ಇಲ್ಲಿ ತನಕ ಸುಮಾರು 100ಕ್ಕೂ ಅಧಿಕ ಪ್ರದರ್ಶನ ನೀಡಿದ್ದಾರೆ. ಸ್ಯಾಕ್ಸೋಫೋನ್ ವಾದನ ಸೇರಿದಂತೆ ಇನ್ನೂ ಕೆಲವು ಸಂಗೀತ ಪರಿಕರಗಳನ್ನು ನುಡಿಸುವ ಪ್ರತಿಭಾನ್ವಿತ ಇವರು. ಚರ್ಚಾ ಸ್ಪರ್ಧೆ, ಭಾಷಣಗಳಲ್ಲಿ ಪಟ-ಪಟ ಮಾತನಾಡೋ ಮಾತಿನ ಮಲ್ಲ. ಕಿರುಚಿತ್ರದಲ್ಲಿ, ಆಲ್ಬಂ ಸಾಂಗ್‌ಗಳಲ್ಲಿ ನಟಿಸುವ ಹೀರೋ ಪ್ರೇಮ್ ಸಾಗರ್.

ರಾಷ್ಟ್ರ ಮಟ್ಟದಲ್ಲಿ  ಬೆಳ್ಳಿ ಪದಕ ಹಾಗೂ ಕಂಚಿನ ಪದಕ ಪಡೆದ ಕರಾಟೆಪಟು ಇವರು. ರಾಜ್ಯಮಟ್ಟದಲ್ಲಿ 2 ಬಾರಿ ಚಿನ್ನದ ಪದಕ, ಒಂದು ಬಾರಿ ಬೆಳ್ಳಿ ಹಾಗೂ 1 ಬಾರಿ ಕಂಚಿನ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ ನಡೆದ 72ನೇ ಗಣರಾಜ್ಯೋತ್ಸವದ ಐತಿಹಾಸಿಕ ಪರೇಡ್‌ನಲ್ಲಿ ಇವರು ಭಾಗವಹಿಸಿ ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿಯಾಗಿದ್ದು ತಾಲೂಕಿಗೆ ಹೆಮ್ಮೆಯ ವಿಷಯ. 75ನೇ ಸ್ವಾತಂತ್ರ್ಯ ಅಮೃತ‌ ಮಹೋತ್ಸವದ ಸಂದರ್ಭದಲ್ಲಿ ಬೆಳ್ತಂಗಡಿಯ ಟ್ರೀ ಪಾರ್ಕ್ ನಲ್ಲಿ 75 ಬಗೆಯ ಗಿಡಗಳನ್ನು ನೆಡುವ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸೇವಾ ಯೋಜನೆಯ ನಾಯಕನಾಗಿರುವ ಪ್ರೇಮ್ ಸಾಗರ್ ರವರಿಗೂ ಒಂದು ಗಿಡ ನೆಡುವ ಅವಕಾಶ ದೊರೆತ್ತಿತ್ತು.

 


ಕಾಲೇಜ್ ಜೀವನದಲ್ಲಿ ರಾಷ್ಟ್ರೀಯ ಸೇವಾ ಯೋಜನೆಗೆ ಸೇರಿಕೊಂಡ ಇವರು ಉತ್ತಮ ನಾಯಕನಾಗಿ ಹೊರಹೊಮ್ಮಿದ್ದಾರೆ. ಎನ್.ಎಸ್.ಎಸ್ ಮೂಲಕ ಸೇವಾ ಮನೋಭಾವವನ್ನು ಪಡೆದ ಪ್ರೇಮ್ ಸಾಗರ್ ಕೊವೀಡ್ 19 ಸಮಯದಲ್ಲಿ ಕೊರೋನಾ ವಾರಿಯರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಕೊರೋನಾ ಸಮಯದಲ್ಲಿ ಆಹಾರಕ್ಕಾಗಿ ಬೀದಿ ನಾಯಿಗಳು ಅಲೆಯುತ್ತಿದ್ದ ಸಂದರ್ಭದಲ್ಲಿ ಚೆಕ್ ಪೋಸ್ಟ್ ಗೆ ಬಂದ ಅನ್ನವನ್ನು ಸ್ವಲ್ಪ ಉಳಿಸಿಕೊಂಡು ಅದನ್ನು ಬೀದಿ ನಾಯಿಗಳಿಗೆ ಹಾಕಿ ಅವುಗಳ ಹಸಿವು ನೀಗಿಸಿರುವ ಇವರ ಕಾರ್ಯಕ್ಕೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ರಕ್ತದಾನಿಯಾಗಿದ್ದಾರೆ,

ಹಾವುಗಳ ರಕ್ಷಣೆ ಮಾಡೋದ್ರಲ್ಲಿ ಅಂದ್ರೆ ಇವರಿಗೆ ಬಹಳ ಆಸಕ್ತಿ. ಸ್ನೇಕ್ ಜಾಯ್ ಅವರ ಜೊತೆ ಹಾವು ಹಿಡಿಯಲು ಹೋಗುತ್ತಿದ್ದಾಗ ಹಾವಿನ ಭಯ ದೂರವಾಯಿತು. ಬಳಿಕ ಉರಗ ಪ್ರೇಮಿ ಸ್ನೇಕ್ ಅಶೋಕ್ ಕುಮಾರ್ ಜೊತೆ ಹಗಲು, ರಾತ್ರಿ ಹಾವು ಹಿಡಿಯಲು ಹೋಗುತ್ತಿದ್ದೆ. ಈ ವೇಳೆ ಹೆಬ್ಬಾವು, ನಾಗರ ಹಾವುಗಳನ್ನು ಹಿಡಿದಿದ್ದೇನೆ ಎನ್ನುತ್ತಾರೆ ಉರಗ ರಕ್ಷಕ ಪ್ರೇಮ್ ಸಾಗರ್. ಒಮ್ಮೆ ಬೆಳ್ತಂಗಡಿ ತಾಲೂಕಿನ ಪಡ್ಪು ಎಂಬಲ್ಲಿ ಹೆಬ್ಬಾವೊಂದು ಹಂದಿಗೂಡಿಗೆ ನುಗ್ಗಲು ಯತ್ನಿಸಿದ ಸಂದರ್ಭದಲ್ಲಿ ಬಲೆಯಲ್ಲಿ ಸಿಲುಕಿ ಗಾಯಗೊಂಡಿತ್ತು, ಈ ವೇಳೆ ಪ್ರೇಮ್ ಸಾಗರ್ ಹೆಬ್ಬಾವನ್ನು‌ ರಕ್ಷಿಸಿ ಅದರ ಶುಶ್ರೂಷೆ ‌ಮಾಡಿ ಕಾಡಿಗೆ ಬಿಟ್ಟಿದ್ದಾರೆ. ಇವರ ಕಲಾಸೇವೆ ಹಾಗೂ ಸಾಮಾಜಿಕ ಸೇವೆಯನ್ನು ಗುರುತಿಸಿ ಶ್ರೀ ಗುರುನಾರಾಯಣ ಸೇವಾ ಸಂಘ ರಿ ಬೆಳ್ತಂಗಡಿ ಇವರು ಸನ್ಮಾನಿಸಿದ್ದಾರೆ.

ಸಣ್ಣ ವಯಸ್ಸಿನಿಂದ ಇಲ್ಲಿಯವರೆಗೆ ಅನೇಕ ಪ್ರತಿಭೆಗಳನ್ನು ಅನಾವರಣಗೊಳಿಸಿ, ಸಾಮಾಜಿಕ ಸೇವೆಯಲ್ಲೂ ತನ್ನನ್ನು ತೊಡಗಿಸಿಕೊಂಡ ಪ್ರೇಮ್ ಸಾಗರ್ ಅನೇಕ ವಿದ್ಯಾರ್ಥಿಗಳಿಗೆ‌ ಮಾದರಿ.‌

 

error: Content is protected !!