ಭಾರತ ಹಾಗೂ ಜಗತ್ತನ್ನು ಬೆಸೆಯುವ ಕೆಲಸ ಪ್ರಧಾನಿ ಮೋದಿಯಿಂದಾಗುತ್ತಿದೆ: ಶಾಸಕ ಹರೀಶ್ ಪೂಂಜ ಬಿಜೆಪಿ ಬೆಳ್ತಂಗಡಿ ಮಂಡಲ: ವಿಶೇಷ ಕಾರ್ಯಕಾರಿಣಿ ಸಭೆ

 

 

 

ಬೆಳ್ತಂಗಡಿ: ಭಾರತ ಅಭಿವೃದ್ದಿ ಪಥದತ್ತ ಸಾಗುತ್ತಿದ್ದು, 15 ಲಕ್ಷ ಉದ್ಯೋಗ ಸೃಷ್ಠಿ, ರಾಷ್ಟ್ರೀಯ ಹೆದ್ದಾರಿಗಳ ಕಾಮಗಾರಿ ಸೇರಿದಂತೆ ಅನೇಕ ಜನಪರ ಯೋಜನೆಗಳು ಅನುಷ್ಠಾನಗೊಳ್ಳುತ್ತಿದೆ. ಕೇಂದ್ರ ಹಾಗೂ ರಾಜ್ಯ ಸರಕಾರದ ಅನುದಾನದಿಂದ ಬೆಳ್ತಂಗಡಿ ತಾಲೂಕಿನಲ್ಲೂ ಅಭಿವೃದ್ಧಿ ಕಾಮಗಾರಿಗಳಾಗಿವೆ ಎಂದು ಶಾಸಕ ಹರೀಶ್ ಪೂಂಜ ಹೇಳಿದರು.

ಅವರು ಶನಿವಾರ ಬೆಳ್ತಂಗಡಿ ಶ್ರೀ ಮಂಜುನಾಥ ಸ್ವಾಮಿ ಕಲಾಭವನದಲ್ಲಿ ಬಿಜೆಪಿ ಬೆಳ್ತಂಗಡಿ ಮಂಡಲದ ವಿಶೇಷ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ, ಮಾತನಾಡಿದರು.

ಭಾರತ ಹಾಗೂ ಜಗತ್ತನ್ನು ಬೆಸೆಯುವ ಕೆಲಸವನ್ನು ಪ್ರಧಾನಿ ಮೋದಿಯವರು ಮಾಡುತ್ತಿದ್ದಾರೆ. ಇವರ ಆಡಳಿತ್ಮಾಕ ವೈಖರಿಯನ್ನು ಮೆಚ್ಚಿಕೊಂಡ ರಷ್ಯಾದ ಪ್ರಧಾನಿಯವರು ಮೋದಿಯವರನ್ನು ಶ್ರೇಷ್ಠ ವ್ಯಕ್ತಿಯೆಂದು ಹೇಳಿರುವುದು ನಮ್ಮ ಪ್ರಧಾನಿಯ ಆಡಳಿತವೇ ಸಾಕ್ಷಿಯಾಗಿದೆ ಎಂದರು.

 

 

 

 

ಬೆಳ್ತಂಗಡಿ ತಾಲೂಕಿನಲ್ಲಿ
ಎಷ್ಟೋ ವರ್ಷಗಳಿಂದ ಹದಗೆಟ್ಟಿದ್ದ ಗ್ರಾಮೀಣ ಭಾಗದ ಎಲ್ಲಾ ರಸ್ತೆಗಳಿಗೂ ಮುಕ್ತಿ ನೀಡಲಾಗಿದೆ. ಗ್ರಾಮ ಗ್ರಾಮಗಳಿಗೆ ಸಂಪರ್ಕ ರಸ್ತೆಗಳ ಅಭಿವೃದ್ಧಿ, ಕಿಂಡಿ ಅಣೆಕಟ್ಟುಗಳ ನಿರ್ಮಾಣ, ರಸ್ತೆಗಳು, ಸೇತುವೆಗಳು, ಸೇರಿದಂತೆ ಇನ್ನಿತರ ಮೂಲಭೂತ ಸೌಕರ್ಯಗಳ ಕಾಮಗಾರಿಗಳಾಗಿದೆ.
ಜಲಮಿಶನ್ ಕುಡಿಯುವ ನೀರಿನ ಬಹುಗ್ರಾಮ ಯೋಜನೆಗೆ 170 ಕೋ.ರೂ. ಬಿಡುಗಡೆಯಾಗಿದೆ. 12 ಕೋ.ರೂ.‌ ವೆಚ್ಚದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ಬೆಳ್ತಂಗಡಿಯಲ್ಲಿ ತಲೆ ಎತ್ತಲಿದೆ. ಪ್ರವಾಸಿ ಬಂಗಲೆಯ ಕಾಮಗಾರಿ, ಏತ ನೀರಾವರಿ ಯೋಜನೆ ಪ್ರಗತಿಯಲ್ಲಿದೆ ಎಂದರು.

ದೇಶದಿಂದ ಹಿಡಿದು ಬೆಳ್ತಂಗಡಿ ತನಕ ಕಾಂಗ್ರೆಸ್ಸಿಗರಿಗೆ ಹತಾಶೆಯಾಗಿದ್ದು, ನೆಲೆ ಇಲ್ಲದಂತಾಗಿದೆ. ಅವರಿಗೆ ಬೆಳ್ತಂಗಡಿಯ ಗ್ರಾಮೀಣ ಭಾಗದ ರಸ್ತೆಗಳಲ್ಲಿ ಗುಂಡಿಗಳು ಕಾಣಿಸುತ್ತಿಲ್ಲ. ಅದರ ಬದಲಾಗಿ 6 ಕಿ.ಮೀ. ರಾಷ್ಟೀಯ ಹೆದ್ದಾರಿಯ ರಸ್ತೆ ಅವರಿಗೆ ಕಾಣಿಸುತ್ತಿದೆ. ಇದೀಗ ರಾ.ಹೆದ್ದಾರಿಗೆ ಅನುದಾನ ಬಿಡುಗಡೆಯಾಗಿದ್ದು, ಶೀಘ್ರ
ಕಾಮಗಾರಿ ಆರಂಭವಾಗಲಿದೆ.

ಬಿಜೆಪಿ ಬೆಳ್ತಂಗಡಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು.

ಬಿಜೆಪಿ ವಿಭಾಗ ಸಂಘಟನಾ ಕಾರ್ಯದರ್ಶಿ ಪ್ರಸಾದ್ ಕುಮಾರ್, ಕಿಯೋನಿಕ್ಸ್ ಮಾಜಿ ಅಧ್ಯಕ್ಷ, ಬಿಜೆಪಿ ಬೆಳ್ತಂಗಡಿ ಮಂಡಲ ಪ್ರಭಾರಿ ಹರಿಕೃಷ್ಣ ಬಂಟ್ವಾಳ, ಜಿಲ್ಲಾ ಕಾರ್ಯದರ್ಶಿ ಕಸ್ತೂರಿ ಪಂಜ, ಜಿಲ್ಲಾ ಉಪಾಧ್ಯಕ್ಷ ಕೊರಗಪ್ಪ ನಾಯ್ಕ್, ಬೆಳ್ತಂಗಡಿ ಮಂಡಲ ಪ್ರ. ಕಾರ್ಯದರ್ಶಿ ಗಣೇಶ್ ಗೌಡ, ಉಪಾಧ್ಯಕ್ಷ ಸೀತಾರಾಮ ಬೆಳಾಲು, ಕಾರ್ಯದರ್ಶಿ ಸಿಲ್ವೆಸ್ಟರ್ ಡಿಸೋಜ,
ಮಂಡಲ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ ಸ್ವಾಗತಿಸಿದರು. ಪ್ರ.ಕಾರ್ಯದರ್ಶಿ ಶ್ರೀನಿವಾಸ ರಾವ್ ಹಾಗೂ ಸಹಕಾರಿ ಭಾರತಿ ಅಧ್ಯಕ್ಷ ರಾಜೇಶ್ ಪೆಂರ್ಬುಡ ಕಾರ್ಯಕ್ರಮ ನಿರ್ವಹಿಸಿದರು.

ವಿಶೇಷ ಕಾರ್ಯಕಾರಿಣಿ ಸಭೆಯಲ್ಲಿ ಕೈಗೊಂಡ ನಿರ್ಣಯಗಳು:

ಇತ್ತೀಚಿಗೆ ಶಾಸಕರ‌ ಮೇಲೆ ನಡೆದ ಹಲ್ಲೆಗೆ ಯತ್ನದ ಕುರಿತು ಖಂಡನಾ ನಿರ್ಣಯ
* ಎಸ್ಸಿ ಎಸ್ಟಿ ಗಳಿಗೆ ಮೀಸಲಾತಿ ಹೆಚ್ಚುವರಿ ಮಾಡಿದ ರಾಜ್ಯ ಸರಕಾರಕ್ಕೆ ಅಭಿನಂದನೆ
* ಅಡಿಕೆ ಮತ್ತು ಕಾಳು ಮೆಣಸು ಆಮದು ಮಾಡುವ ಕ್ರಮವನ್ನು ತಡೆ ಹಿಡಿಯುವಂತೆ ಕೇಂದ್ರ ಸರಕಾರಕ್ಕೆ ಮನವಿ
* ಬೆಳ್ತಂಗಡಿ ತಾಲೂಕಿನಲ್ಲಿ ಕಸ್ತೂರಿ ರಂಗನ್ ವರದಿಯನ್ನು ಅನುಷ್ಠಾನ ಮಾಡದಂತೆ ಪುನರ್ ಪರಿಶೀಲನೆಗೆ ಮನವಿ
* ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಅನುಮೋದನೆ ನೀಡಿದ ಕೇಂದ್ರ ಸರಕಾರಕ್ಕೆ ಅಭಿನಂದನೆ

error: Content is protected !!