ಎಸ್ಸಿ/ಎಸ್ಟಿ ಮೀಸಲಾತಿ ಹೆಚ್ಚಳ ಸುಗ್ರೀವಾಜ್ಞೆಗೆ ರಾಜ್ಯಪಾಲರ ಅಂಕಿತ: ರಾಜ್ಯದಲ್ಲಿ ಪರಿಶಿಷ್ಟ ಜಾತಿಗೆ ಶೇ 17ರಷ್ಟು ಮತ್ತು ಪರಿಶಿಷ್ಟ ಪಂಗಡಕ್ಕೆ ಶೇ 7ರಷ್ಟು ಮೀಸಲಾತಿ

 

 

ಬೆಂಗಳೂರು: ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳ ಅಧ್ಯಾದೇಶ 2022ಗೆ ರಾಜ್ಯಪಾಲರು ಅಂಕಿತ ಹಾಕುವ ಮೂಲಕ ಎಸ್ಸಿ-ಎಸ್ಟಿ ಮೀಸಲಾತಿ ಹೆಚ್ಚಳ ಈಗ ಕಾಯ್ದೆಯಾಗಿ ಜಾರಿಯಾಗಿದೆ. ಈ ಮೂಲಕ ಇನ್ನು ಮುಂದೆ ಶೈಕ್ಷಣಿಕ ಸಂಸ್ಥೆಗಳಲ್ಲಿನ ಸ್ಥಾನಗಳಲ್ಲಿ ಮತ್ತು ರಾಜ್ಯಾಧೀನ ಸೇವೆಗಳಲ್ಲಿನ ನೇಮಕಾತಿ ಅಥವಾ ಹುದ್ದೆಗಳಲ್ಲಿ ಮೀಸಲಾತಿಯೂ ರಾಜ್ಯದಲ್ಲಿ ಪರಿಶಿಷ್ಟ ಜಾತಿಗೆ ಶೇ 17ರಷ್ಟು ಮತ್ತು ಪರಿಶಿಷ್ಟ ಪಂಗಡಕ್ಕೆ ಶೇ 7ರಷ್ಟು ಸಿಗಲಿದೆ.

ಕರ್ನಾಟಕ ವಿಧಾನಸಭೆ ಮತ್ತು ಕರ್ನಾಟಕ ವಿಧಾನ ಪರಿಷತ್ತು ಅಧಿವೇಶನ ಇಲ್ಲದಿರುವುದರಿಂದ ಅಧ್ಯಾದೇಶ ಹೊರಡಿಸಲು ಶೀಘ್ರ ಕ್ರಮ ತೆಗೆದುಕೊಳ್ಳಲು ಅವಶ್ಯಗೊಳಿಸುವಂಥ ವಿದ್ಯಮಾನಗಳು ಉಂಟಾಗಿವೆ. ಈ ಬಗ್ಗೆ ಕರ್ನಾಟಕದ ರಾಜ್ಯಪಾಲರಿಗೆ ಮನದಟ್ಟಾಗಿರುವುದರಿಂದ ಸಂವಿಧಾನದ 213ನೇ ಅನುಚ್ಛೇದದ (1)ನೇ ಖಂಡದ ಮೂಲಕ ಪ್ರದತ್ತವಾದ ಅಧಿಕಾರಗಳನ್ನು ಚಲಾಯಿಸಿ, ಕರ್ನಾಟಕದ ರಾಜ್ಯಪಾಲರು ಈ ಸುಗ್ರೀವಾಜ್ಞೆ ಹೊರಡಿಸಿರುತ್ತಾರೆ ಎಂದು ರಾಜ್ಯಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಸುಗ್ರೀವಾಜ್ಞೆಯಲ್ಲಿ ನ್ಯಾ ನಾಗಮೋಹನ್ ದಾಸ್ ಆಯೋಗ ಸಲ್ಲಿಸಿರುವ ವರದಿ ಬಗ್ಗೆ ಸವಿವರವಾಗಿ ಉಲ್ಲೇಖಿಸಲಾಗಿದೆ. ವರದಿಯಲ್ಲಿ ಹೇಳಲಾದ ಕನಿಷ್ಠ ಮಿತಿಯಲ್ಲಿರುವ ಮತ್ತು ಈಗಲೂ ಮುಖ್ಯವಾಹಿನಿಯಿಂದ ಹೊರಗಿರುವ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳಲ್ಲಿನ ಅನೇಕ ಜಾತಿಗಳು ಮತ್ತು ಸಮುದಾಯಗಳು ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆಯ ಸಾಕ್ಷ್ಯವು ಕಂಡುಬಂದಿದೆ.

ಪಶ್ಚಿಮ ಘಟ್ಟಗಳ ಜೊತೆಜೊತೆಗೆ ಒಣಭೂಮಿ ಭಾಗಗಳಲ್ಲಿ ರಾಜ್ಯದ ಉದ್ದಗಲಕ್ಕೂ ಹರಡಿರುವ ಪ್ರದೇಶಗಳಲ್ಲಿ ವಾಸಿಸುವ ದಕ್ಕಲಿಗರು, ಧೋಲಿಬಿಲ್‌, ಮಲೇರು, ಸೋಲಿಗರು ಮುಂತಾದ ಕೆಲವು ಸಮುದಾಯಗಳಲ್ಲಿ ಅಂಥ ಹಿಂದುಳಿದಿರುವಿಕೆಯು ನಿಜವಾಗಿಯೂ ಹೆಚ್ಚಾಗಿದೆ. ಈ ಸಮುದಾಯಗಳು ಮೀಸಲಾತಿಯ ಪ್ರಯೋಜನಗಳನ್ನು ಸಾಕಷ್ಟು ಪಡೆಯಲು ಸಾಧ್ಯವಾಗಿರುವುದಿಲ್ಲ ಎಂದು ಉಲ್ಲೇಖಿಸಲಾಗಿದೆ. ಅವರ ಜನಸಂಖ್ಯೆಗೆ ಹೋಲಿಸಿದಲ್ಲಿ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳಿಗಾಗಿ ಇರುವ ಶೈಕ್ಷಣಿಕ ಸಂಸ್ಥೆಗಳು, ಸರ್ಕಾರಿ ಉದ್ಯೋಗದಲ್ಲಿ ಅವರ ಪ್ರಾತಿನಿಧ್ಯವು ಸಾಕಷ್ಟಿಲ್ಲದಿರುವುದಕ್ಕೆ ಸಾಕ್ಷವಿದೆ. ಇದು ಹಿಂದುಳಿದಿರುವಿಕೆಯಿಂದ ಹೊರಬರಲು ಸಂಕಷ್ಟ ಪಡುತ್ತಿದ್ದಾರೆ . ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳ ಜನಸಂಖ್ಯೆಗೆ ಹೋಲಿಸಿದಲ್ಲಿ ಅವರ ಭೂ ಹಿಡುವಳಿಗಳು ಅಸಮಪ್ರಮಾಣದಲ್ಲಿ ಮತ್ತು ತೀವ್ರವಾಗಿ ಕಡಿಮೆ ಇದೆ ಎಂದು ಉಲ್ಲೇಖಿಸಲಾಗಿದೆ.

ಈ ಅಧ್ಯಯನದ ಆಧಾರದ ಮೇಲೆ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳ ಮೀಸಲಾತಿಗಳನ್ನು ಹೆಚ್ಚಿಸಲು ವಿಶೇಷ ಪ್ರಕರಣವೊಂದನ್ನು ಮಾಡಬೇಕಿದ್ದು, ವಿಸ್ತೃತ ಅಧ್ಯಯನ ಮತ್ತು ವಿಶ್ಲೇಷಣೆಯ ಆಧಾರದಲ್ಲಿ ಅಂಥ ಹೆಚ್ಚಳಕ್ಕಾಗಿ ವಿಶೇಷ ಪ್ರಕರಣವೆಂದು ಪರಿಗಣಿಸಿ ಅನಸೂಚಿತ ಜಾತಿಗಳಿಗೆ ಶೇ 17ರಷ್ಟು ಮತ್ತು ಅನುಸೂಚಿತ ಪಂಗಡಳಿಗೆ ಶೇ 7ರಷ್ಟು ಮೀಸಲಾತಿಯು ಅನುಕ್ರಮವಾಗಿ ಹೆಚ್ಚಾಗಲಿದೆ ಎಂಬ ವರದಿಯ ಅಂಶಗಳನ್ನು ವಿವರಿಸಲಾಗಿದೆ.

error: Content is protected !!