ಬೆಳ್ತಂಗಡಿ: ಶಾಸಕ ಹರೀಶ್ ಪೂಂಜಾ ಅವರ ಕಾರನ್ನು ಅಡ್ಡಗಟ್ಟಿ ಬೆದರಿಕೆ ಹಾಕಿದ ಪ್ರಕರಣದ ತನಿಖೆಯನ್ನು ಸರ್ಕಾರವು ಸಿಐಡಿಗೆ ವರ್ಗಾಯಿಸಿದೆ. ಪ್ರಕರಣದ ಕಡತಗಳನ್ನು ಬಂಟ್ವಾಳ ಪೊಲೀಸರು ಸಿಐಡಿ ವಿಭಾಗಕ್ಕೆ ವರ್ಗಾವಣೆ ಮಾಡಿದ್ದಾರೆ.
ಆ 13 ಗುರುವಾರ ರಾತ್ರಿ ಸುಮಾರು 11.15ಕ್ಕೆ ಕೆಲ ದುಷ್ಕರ್ಮಿಗಳು ಶಾಸಕ ಹರೀಶ್ ಪೂಂಜಾರವರ ಕಾರನ್ನು ಅಡ್ಡಗಟ್ಟಿದ್ದರು. ಶಾಸಕರ ಕಾರು ಚಾಲಕನ ದೂರಿನಂತೆ ಫರಂಗಿಪೇಟೆ ಎಂಬಲ್ಲಿ ಘಟನೆ ನಡೆದಿರುವ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು, ಆರೋಪಿ ಫಳ್ನೀರ್ ನಿವಾಸಿ ರಿಯಾಜ್ (38) ಎಂಬಾತನನ್ನು ವಶಕ್ಕೆ ಪಡೆದುಕೊಂಡಿದ್ದರು. ಜೊತೆಗೆ ಘಟನೆಗೆ ಸಂಬಂಧಿಸಿದ ವಾಹನವನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು.ಶನಿವಾರ ಮತ್ತಷ್ಟು ತನಿಖೆಯನ್ನು ನಡೆಸಿದ ಪೊಲೀಸರು ಆರೋಪಿಯ ಮನೆಯಲ್ಲಿ ಹುಡುಕಾಟ ನಡೆಸಿ, ಎರಡು ಮೊಬೈಲ್, ಸ್ಪಾನರ್, ರಾಡ್ನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಸ್ಪಾನರ್ ಅನ್ನು ಬಳಸಿ ಆರೋಪಿ ದೂರುದಾರರನ್ನು ಬೆದರಿಸಿದ್ದಾಗಿ ತನಿಖೆಯಿಂದ ತಿಳಿದುಬಂದಿದ್ದು, ಹೆಚ್ಚಿನ ತನಿಖೆ ಸಾಗಿದೆ ಎಂದು ಎಸ್ಪಿ ಋಷಿಕೇಶ್ ಸೋನಾವಣೆ ತಿಳಿಸಿದ್ದರು.
ಈ ನಡುವೆ ಆರೋಪಿ ಜಾಮೀನಿನ ಮೇಲೆ ಹೊರಗೆ ಬಂದಿದ್ದು, ಈ ಬಗ್ಗೆ ಸಂಘಟನೆಗಳು ಕೂಲಂಕುಷ ತನಿಖೆ ನಡೆಸುವಂತೆ ಒತ್ತಾಯಿಸಿದ್ದರು. ಹಾಗಾಗಿ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿಗೆ ಹಸ್ತಾಂತರಿಸಿದ್ದು, ಇಂದಿನಿಂದಲೇ ತನಿಖೆ ಆರಂಭವಾಗಿದೆ.