ಬೆಳ್ತಂಗಡಿ: ಶಾಸಕ ಹರೀಶ್ ಪೂಂಜಾ ಕಾರಿಗೆ ದುಷ್ಕರ್ಮಿಗಳು ಅಡ್ಡಗಟ್ಟಿ ತಲ್ವಾರ್ ಝಳಪಿಸಿದ ಘಟನೆ ಮಂಗಳೂರು ನಗರ ಹೊರವಲಯದ ಫರಂಗಿಪೇಟೆ ಎಂಬಲ್ಲಿ ಗುರುವಾರ ರಾತ್ರಿ ನಡೆದಿದೆ. ರಾತ್ರಿ ಸುಮಾರು 11:15ರ ವೇಳೆಗೆ ಮಂಗಳೂರಿನ ಫರಂಗಿಪೇಟೆ ಬಳಿ ಸ್ಕಾರ್ಪಿಯೋದಲ್ಲಿ ಬಂದ ದುಷ್ಕರ್ಮಿಗಳ ತಂಡವೊಂದು ಶಾಸಕರ ಕಾರನ್ನು ತಡೆದು ತಲ್ವಾರ್ ಝಳಪಿಸಿ, ಬೆದರಿಕೆಯೊಡ್ಡಿ ಬಳಿಕ ಪರಾರಿಯಾಗಿದ್ದಾರೆ. ಒಂದು ವೇಳೆ ಶಾಸಕರು ಕಾರಿನಲ್ಲಿದ್ದರೆ ಅಪಾಯ ಸಂಭವಿಸುತ್ತಿತ್ತು ಅದೃಷ್ಟವಶಾತ್ ಬೇರೆ ಕಾರಿನಲ್ಲಿದ್ದುದರಿಂದ ಅಪಾಯದಿಂದ ಪಾರಾಗಿದ್ದಾರೆ.
ಈ ಘಟನೆಗೆ ಸಂಬಂಧಪಟ್ಟಂತೆ ಬಂಟ್ವಾಳ ಗ್ರಾಮಾಂತರ ಪೊಲೀಸರಿಗೆ ಶಾಸಕರ ಕಾರಿನ ಚಾಲಕ ದೂರು ನೀಡಿದ್ದಾರೆ. ಈ ಘಟನೆಯ ಬಳಿಕ ಕರಾವಳಿಯಲ್ಲಿ ಮತ್ತೆ ಆತಂಕವೊಂದು ಎದುರಾಗಿದೆ. ಕರಾವಳಿಯಲ್ಲಿ ಧರ್ಮದ ಕಾರಣಕ್ಕಾಗಿ ಹಲವು ಕೊಲೆಗಳು ನಡೆದಿದ್ದು, ಇತ್ತೀಚೆಗಷ್ಟೇ ಪ್ರವೀಣ್ ನೆಟ್ಟಾರು ಹಾಗೂ ಮಂಗಳೂರಿನ ಫಾಸಿಲ್ ಕೊಲೆ ನಡೆದು ಕರಾವಳಿ ತಣ್ಣಗಾಗುತ್ತಿದೆಯಷ್ಟೇ. ಅದಾಗಲೇ ರಾಜ್ಯದಾದ್ಯಂತ ಪ್ರಚಾರದಲ್ಲಿರುವ ಪ್ರಭಾವಿ ಹಾಗೂ ಯುವ ಶಾಸಕರೊಬ್ಬರನ್ನು ಟಾರ್ಗೆಟ್ ಮಾಡಿ ದುಷ್ಕರ್ಮಿಗಳು ನೇರವಾಗಿ ಕೊಲೆ ಬೆದರಿಕೆ ಹಾಕಿರುವ ಘಟನೆ ಸಾಕಷ್ಟು ಅಪಾಯದ ಮುನ್ಸೂಚನೆಯಾಗಿದೆ. ಇದರಿಂದ ಕರಾವಳಿಯಲ್ಲಿ ಮತ್ತಷ್ಟು ಆತಂಕದ ಸ್ಥಿತಿ ನಿರ್ಮಾಣವಾಗಿದೆ.
ಇಂತಹ ದುಷ್ಕರ್ಮಿಗಳ ಹುಟ್ಟಡಗಿಸಲು ರಕ್ಷಣಾ ಇಲಾಖೆ ಕಠಿಣ ಕ್ರಮ ಕೈಗೊಳ್ಳುವ ಅವಶ್ಯಕತೆ ಇದ್ದು ಜನರ ಭಯ ಹಾಗೂ ಆತಂಕ ದೂರ ಮಾಡಬೇಕಾಗಿದೆ.