ಬೆಳ್ತಂಗಡಿ : ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಕಾರಿಗೆ ದುಷ್ಕರ್ಮಿಗಳು ಅಡ್ಡಗಟ್ಟಿ ತಲ್ವಾರ್ ಝಳಪಿಸಿದ ಘಟನೆ ಮಂಗಳೂರು ನಗರ ಹೊರವಲಯದ ಫರಂಗಿಪೇಟೆ ಎಂಬಲ್ಲಿ ಗುರುವಾರ ರಾತ್ರಿ ನಡೆದಿದೆ.
ಬೆಂಗಳೂರಿನಿಂದ ಮಂಗಳೂರಿಗೆ ಆಗಮಿಸಿ, ಬೆಳ್ತಂಗಡಿಗೆ ತೆರಳುತ್ತಿದ್ದ ಶಾಸಕ ಹರೀಶ್ ಪೂಂಜಾ ಅವರು ತನ್ನ ಕಾರು ಬಿಟ್ಟು ಸಂಬಂಧಿಯೋರ್ವರ ಕಾರಿನಲ್ಲಿದ್ದರು. ಆಗ ಪಡೀಲ್ನಿಂದ ಕಾರು ಬೆನ್ನಟ್ಟಿದ್ದ ದುಷ್ಕರ್ಮಿಗಳ ತಂಡ, ಫರಂಗಿಪೇಟೆಯಲ್ಲಿ ಕಾರು ಸೈಡ್ ಹಾಕುತ್ತಿದ್ದಂತೆಯೇ ಅವ್ಯಾಚ್ಯವಾಗಿ ಬೈದು ತಲ್ವಾರ್ ಝಳಪಿಸಿ ಪರಾರಿಯಾಗಿದ್ದಾರೆ ಎಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಗೆ ಶಾಸಕ ಪೂಂಜಾ ಕಾರು ಚಾಲಕ ನವೀನ್ ದೂರು ನೀಡಿದ್ದಾರೆ. ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.