ಬೆಳ್ತಂಗಡಿ: ‘ಅಖಿಲ ಕರ್ನಾಟಕ ರಾಜಕೇಸರಿ ಟ್ರಸ್ಟ್ (ರಿ) ಬೆಳ್ತಂಗಡಿ ತಾಲೂಕು ಇದರ ದಶಮಾನೋತ್ಸವದ ಸವಿ ನೆನಪಿಗಾಗಿ ರಾಜಕೇಸರಿ ಸಂಘಟನೆಯ ಸಂಸ್ಥಾಪಕ ದೀಪಕ್ ಜಿ ಬೆಳ್ತಂಗಡಿ ಇವರ 525 ನೇ ಸೇವಾ ಯೋಜನೆ ಪ್ರಯುಕ್ತ 34 ನೇ ಮನೆ ಹಸ್ತಾಂತರ ಕಾರ್ಯಕ್ರಮ, ವೀಲ್ ಚೇರ್ ಮತ್ತು ಟೈಲರ್ ಮಿಷನ್ ಹಸ್ತಾಂತರ ಕಾರ್ಯಕ್ರಮ ಸೆ. 24 ರಂದು ಬೆಳ್ತಂಗಡಿ ಸಂತೆಕಟ್ಟೆ ಬಳಿಯ ಮಂಜುನಾಥ ಸ್ವಾಮಿ ಕಲಾ ಭವನದಲ್ಲಿ ನಡೆಯಲಿದೆ ಎಂದು ಸಂಘಟನೆಯ ಸಂಸ್ಥಾಪಕ ದೀಪಕ್ ಜಿ ಬೆಳ್ತಂಗಡಿ ಹೇಳಿದರು.
ಅವರು ಮಂಗಳವಾರ ಬೆಳ್ತಂಗಡಿ ಸುವರ್ಣ ಆರ್ಕೆಡ್ ನಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ ಸಂಘಟನೆಯು ಸತತ 10 ವರ್ಷಗಳಿಂದ ಸೇವಾ ಕಾರ್ಯಗಳನ್ನು ಮಾಡುತ್ತಾ ಬಂದಿದ್ದು ಈಗಾಗಲೇ 1.90 ಕೋಟಿ ಮೊತ್ತವನ್ನು ವಿನಿಯೋಗಿಸಲಾಗಿದೆ. ತುರ್ತು ಸಂದರ್ಭದಲ್ಲಿ 10,033 ಜನರಿಗೆ ರಕ್ತದಾನ ನೀದಿದ್ದು, ಹಲವಾರು ರಕ್ತದಾನ ಶಿಬಿರ, ಆರೋಗ್ಯ ತಪಾಸಣಾ ಶಿಬಿರವನ್ನು ನಡೆಸಲಾಗಿದೆ. ಸಮಾಜದಲ್ಲಿನ ಕಡು ಬಡವರಿಗೆ, ಅಶಕ್ತರಿಗೆ ನೆರವು ನೀಡುವುದೇ ಸಂಘಟನೆಯ ಉದ್ದೇಶವಾಗಿದೆ ಎಂದರು.
ದಶಮಾನೋತ್ಸವ ಸಂಭ್ರಮ ಕಾರ್ಯಕ್ರಮದಲ್ಲಿ ಅವಧೂತ ಶ್ರೀ ವಿನಯ ಗುರೂಜಿ ಗೌರಿಗದ್ದೆ, ಶ್ರೀ ಕ್ಷೇತ್ರ ಮಂತ್ರದೇವತೆ ಸಾನಿಧ್ಯ ಕಟ್ಟೆಮಾರ್ (ಅಮ್ಟೂರು) ಇದರ ಆಡಳಿತ ಮೊಕ್ತೇಸರ ಮನೋಜ್ ಕಟ್ಟೆಮಾರ್ ಉಪಸ್ಥಿತಿಯಲ್ಲಿ ಶಾಸಕ ಹರೀಶ್ ಪೂಂಜಾ ಅಧ್ಯಕ್ಷತೆಯಲ್ಲಿ ಸಂಜೆ 7.30 ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದೆ. ಮಂಗಳೂರಿನ ಸಾನಿಧ್ಯ ಸಮೂಹ ಸಂಸ್ಥೆಯ ಆಡಳಿತ ಅಧಿಕಾರಿ ಡಾ. ವಸಂತ್ ಕುಮಾರ್ ಶೆಟ್ಟಿ ಉದ್ಘಾಟಿಸಲಿದ್ದು, ಶ್ರೀ ಕ್ಷೇತ್ರ ಗೆಜ್ಜೆಗಿರಿ ಆಡಳಿತ ಸಮಿತಿ ಅಧ್ಯಕ್ಷ ಜಯಂತ್ ನಡುಬೈಲು, ಬೆಳ್ತಂಗಡಿ ಸುವರ್ಣ ಪ್ರತಿಷ್ಠಾನದ ಅಧ್ಯಕ್ಷ ಸಂಪತ್ ಬಿ ಸುವರ್ಣ, ವೈದ್ಯಕೀಯ ಪ್ರಕೋಷ್ಠದ ತಾಲೂಕು ಸಂಚಾಲಕ ಡಾ.ಎಂ.ಎಂ. ದಯಾಕರ್, ಉಜಿರೆ ಬೆನಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಗೋಪಾಲಕೃಷ್ಣ, ಚಲನಚಿತ್ರ ನಟ ವಿನಿತ್ ಕುಮಾರ್, ನಟಿ ದುನಿಯಾ ರಶ್ಮಿ, ರಾಜ ಕೇಸರಿ ತಾಲ್ಲೂಕು ಸಂಘಟನೆ ಅಧ್ಯಕ್ಷ ನಾಗೇಶ್ ಬಿ, ತಹಶೀಲ್ದಾರ್ ಪೃಥ್ವಿ ಸಾನಿಕಂ, ವೃತ್ತ ನಿರೀಕ್ಷಕ ಶಿವಕುಮಾರ್, ನಗರ ಪಂಚಾಯಿತಿ ಮುಖ್ಯಾಧಿಕಾರಿ ರಾಜೇಶ್ ಕೋಟ್ಯಾನ್, ಹೇಮಂತ್ ಶೆಟ್ಟಿ, ಸತ್ಯಜಿತ್ ಸುರತ್ಕಲ್, ಸುರೇಶ್ ಮುಂಬೈ, ಸೀತಾರಾಂ ಶೆಟ್ಟಿ, ಪತ್ರಕರ್ತ ಮನೋಹರ್ ಬಳಂಜ, ಡಾ. ಚಂದ್ರಕಾಂತ್ ಮುಂತಾದವರು ಭಾಗವಹಿಸಲಿದ್ದಾರೆ.
ಸಂಜೆ 5.30 ರಿಂದ ಶ್ರೀ ಚಿಂತಾಮಣಿ ಡ್ಯಾನ್ಸ್ ಗ್ರೂಪ್ ಕಡೆ ಶಿವಾಲಯ ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ, ರಾಜೀವ್ ಬಿ.ಹೆಚ್. ಹಾಗೂ ಮನೋಜ್ ಸವಣಾಲು ಇವರಿಂದ ಜಾದು ಪ್ರದರ್ಶನ, ರಾತ್ರಿ 8.30 ರಿಂದ ಪಿಂಗಾರ ಕಲಾವಿದರ್ ಬೆದ್ರ ಇವರಿಂದ ನಂಬುಂಡ ನಂಬುಲೆ ಎಂಬ ತುಳು ಹಾಸ್ಯಮಯ ನಾಟಕ ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಗೌರವ ಸಲಹೆಗಾರ ಗುರುಪ್ರಸಾದ್ ಕೋಟ್ಯಾನ್, ಸಂಚಾಲಕ ಶಶಿಕಾಂತ ಹಿಂದು, ಸಾಮಾಜಿಕ ಜಾಲತಾಣದ ಮುಖ್ಯಸ್ಥ ರಾಮಣ್ಣ, ಸದಸ್ಯ ಅಮೃತ್ ಇದ್ದರು.