ನಾರಾಯಣ ಗುರುಗಳ ಹೆಸರಲ್ಲಿ ಸಮಾಜ ಒಡೆಯುವ ಕೆಲಸ: ದಾರಿ ತಪ್ಪಿಸುವವರ ವಿರುದ್ಧ ಬಿಲ್ಲವ ಸಮಾಜ ಸಂಘಟಿತರಾಗಬೇಕು: ನಾರಾಯಣ ಗುರು ಜಯಂತಿ ಕಾರ್ಯಕ್ರಮದಲ್ಲಿ ಸತ್ಯಜಿತ್ ಸುರತ್ಕಲ್ ಹೇಳಿಕೆ:

 

 

ಬೆಳ್ತಂಗಡಿ : ನಾರಾಯಣ ಗುರುಗಳು ಈ ಭಾರತೀಯ ಸಮಾಜದ ಪರಿಪೂರ್ಣ ಸಮಾಜ ಸುಧಾರಕರು. ಆದರೆ ಇಂದು ಅವರ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಕೆಲಸವಾಗುತ್ತಿದೆ. ಸಮಾಜವನ್ನು ದಾರಿ ತಪ್ಪಿಸುವವರ ವಿರುದ್ಧ ಬಿಲ್ಲವ ಸಮಾಜ ಸಂಘಟಿತರಾಗಬೇಕು’ ಎಂದು ಶ್ರೀ ನಾರಾಯಣ ಗುರು ವಿಚಾರ ವೇದಿಕೆ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಹೇಳಿದರು.ಅವರು ಶನಿವಾರ ಬೆಳ್ತಂಗಡಿ ಶ್ರೀ ಗುರುನಾರಾಯಣ ಸಭಾ ಭವನದಲ್ಲಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘ ಬೆಳ್ತಂಗಡಿ, ಯುವ ಬಿಲ್ಲವ ವೇದಿಕೆ ಮತ್ತು ಬಿಲ್ಲವ ಮಹಿಳಾ ವೇದಿಕೆ, ಬೆಳ್ತಂಗಡಿ ಇವುಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಬ್ರಹ್ಮ ಶ್ರೀ ನಾರಾಯಣ ಗುರುಗಳ 168 ನೇ ಗುರು ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

 

‘ನಾರಾಯಣ ಗುರುಗಳು ಇಂದು ಬಿಲ್ಲವ ಸಮಾಜದ ಆರಾದ್ಯ ಸ್ವರೂಪಿ. ನಾರಾಯಣ ಗುರುಗಳ ಜಯಂತಿಯನ್ನು ಸರ್ಕಾರ ಆಚರಿಸುತ್ತಿರುವ ಸಂದರ್ಭದಲ್ಲಿ ಬಿಲ್ಲವ ಸಮಾಜವನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕಾರ್ಯವನ್ನು ಮಾಡಬೇಕು. ಜಯಂತಿ ಆಚರಣೆಯನ್ನು ಕುದ್ರೋಳಿ ಕ್ಷೇತ್ರ ಬಿಟ್ಟು ಬೇರೆಡೆ ಆಯ್ದುಕೊಂಡದ್ದು ಸರಿಯಲ್ಲ. ಸ್ವಾರ್ಥಕ್ಕಾಗಿ ಗುರು ಜಯಂತಿ ನಡೆಯುತ್ತಿದೆಯೇ ಎಂಬ ಅನುಮಾನ ಮೂಡುತ್ತಿದೆ’ ಎಂದರು.ಸಮಾರಂಭ ಉದ್ಘಾಟಿಸಿ ಮಾತನಾಡಿದ ಸಂಘದ ಗೌರವಾಧ್ಯಕ್ಷ ಕೆ. ವಸಂತ ಬಂಗೇರ ಮಾತನಾಡಿ, ‘ನಾರಾಯಣ ಗುರುಗಳು ಶಿಕ್ಷಣ ಮತ್ತು ಸಂಘಟನೆಗೆ ಒತ್ತು ನೀಡಿದವರು. ಅವರಿಂದಾಗಿ ಹಿಂದುಳಿದ ಜಾತಿಗಳು ಇಂದು ತಲೆ ಎತ್ತಿ ಬದುಕುವಂತಾಗಿದೆ. ಕೇರಳ ಶಿಕ್ಷಣದಲ್ಲಿ ಮೇಲ್ಪಂಕ್ತಿ ಸ್ಥಾನ ಅಲಂಕರಿಸಲು ನಾರಾಯಣ ಗುರುಗಳು ಕಾರಣ. ನಾರಾಯಣ ಗುರುಗಳ ಅಪಾರ ಅನುಯಾಯಿಗಳು ಇರುವ ಕರ್ನಾಟಕ ರಾಜ್ಯದಲ್ಲಿ ರಾಜ್ಯ ಸರ್ಕಾರ ನಾರಾಯಣ ಗುರು ನಿಗಮ ಆರಂಭಿಸಿ 500 ಕೋಟಿಯನ್ನು ಅದಕ್ಕೆ ಮೀಸಲಿಡಬೇಕು’ ಎಂದರು.ಸಂಘದ ಅಧ್ಯಕ್ಷ ಚಿದಾನಂದ ಪೂಜಾರಿ ಎಲ್ದಕ್ಕ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗದ ವಿಧಾನ ಪರಿಷತ್ ಸದಸ್ಯ ಮಾಜಿ ಶಾಸಕ ಕೆ. ಪ್ರಭಾಕರ ಬಂಗೇರ, ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಡಾ.ಸವಿತಾ ಮಾತನಾಡಿ ಶುಭ ಹಾರೈಸಿದರು.ವೇದಿಕೆಯಲ್ಲಿ ಸಂಘದ ಕೋಶಾಧಿಕಾರಿ ಅಭಿನಂದನ್ ಹರೀಶ್ ಕುಮಾರ್, ಯುವ ಬಿಲ್ಲವ ವೇದಿಕೆ ಅಧ್ಯಕ್ಷ ನಿತೀಶ್ ಹೆಚ್ ಇದ್ದರು.ಇದೇ ಸಂದರ್ಭದಲ್ಲಿ ಚಂದ್ರಹಾಸ ಬಳಂಜ, ಅನೀಶ್ ಪೂಜಾರಿ ವೇಣೂರು, ಸ್ಮಿತೇಶ್ ಎಸ್ ಬಾರ್ಯ ಇವರ ಸಂಪಾದಕತ್ವದ ಯುವವಾಹಿನಿ ಬೆಳ್ತಂಗಡಿ ಘಟಕ ಹೊರ ತಂದ ‘ಬ್ರಹ್ಮ ಶ್ರೀ ನಾರಾಯಣ ಗುರು ಜೀವನ – ಸಾಧನೆ – ಸಂದೇಶ’ ಎಂಬ ಪುಸ್ತಕವನ್ನು ಶ್ರೀ ಗುರುದೇವ ವಿವಿದೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಪದ್ಮನಾಭ ಮಾಣಿಂಜ ಬಿಡುಗಡೆ ಮಾಡಿದರು.ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಸೈನಿಕರಾದಮಹೇಶ್ ಕುಮಾರ್, ರೋಹಿತಾಶ್ವ, ಶಿವದಾಸನ್, ಅನಿರುದ್ದನ್,ಯತೀಂದ್ರ ಇವರನ್ನು ಗೌರವಿಸಲಾಯಿತು. ಬಿಲ್ಲವ ಸಮಾಜದ ಗ್ರಾಮ ಪಂಚಾಯಿತಿ ಸದಸ್ಯರುಗಳಿಗೆ ಅಭಿನಂದನೆ, 73 ವಿದ್ಯಾರ್ಥಿಗಳ ದತ್ತು ಸ್ವೀಕಾರ, ವಿದ್ಯಾರ್ಥಿ ವೇತನ ವಿತರಣೆ ನಡೆಯಿತು.ಸಂಘದ ಕಾರ್ಯದರ್ಶಿ ಜಯವಿಕ್ರಮ್ ಸ್ವಾಗತಿಸಿದರು. ನಿರ್ದೇಶಕ ಲಕ್ಷ್ಮಣ ಪೂಜಾರಿ ಸನ್ಮಾನಿತರನ್ನು ಪರಿಚಯಿಸಿದರು. ಬಿಲ್ಲವ ಮಹಿಳಾ ವೇದಿಕೆ ಅಧ್ಯಕ್ಷೆ ಸುಜಿತಾ ವಿ ಬಂಗೇರ ವಂದಿಸಿದರು. ಚಂದ್ರಹಾಸ ಬಳಂಜ, ಸಮೀಕ್ಷಾ ಬಾರ್ಲೋಡಿ ಕಾರ್ಯಕ್ರಮ ನಿರೂಪಿಸಿದರು.

error: Content is protected !!