ಬೆಳ್ತಂಗಡಿ: ಮಳೆ ಇಲ್ಲದಿದ್ದರೂ ಏಕಾಏಕಿ ಚಾರ್ಮಾಡಿ ಮೃತ್ಯುಂಜಯ ನದಿಯಲ್ಲಿ ಭಾರೀ ಪ್ರಮಾಣದಲ್ಲಿ ನೀರು ಉಕ್ಕಿ ಹರಿದ ಪರಿಣಾಮ ಸ್ಥಳೀಯವಾಗಿ ಆತಂಕದ ಪರಿಸ್ಥಿತಿ ನಿರ್ಮಾಣವಾಯಿತು.
ಮೃತ್ಯುಂಜಯ ನದಿಯಲ್ಲಿ ಭಾರೀ ಪ್ರಮಾಣದಲ್ಲಿ ಮಂಗಳವಾರ ಸಂಜೆಯ ವೇಳೆಗೆ ನೀರು ಹರಿದು ಬಂದಿದ್ದು ಮಳೆ ಇಲ್ಲದಿದ್ದರೂ ಇಷ್ಟೊಂದು ನೀರು ಬಂದದ್ದನ್ನು ನೋಡಿ ಜನತೆಗೆ ಆತಂಕವಾಗಿದೆ.
ಪರ್ಲಾಣಿ, ಕೊಳಂಬೆ, ಅರಣಪಾದೆಗಳ ಸುತ್ತಮುತ್ತ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದ್ದು ತೋಟಗಳಿಗೆ ನೀರು ನುಗ್ಗಿದೆ ಎಂದು ತಿಳಿದುಬಂದಿದೆ.
ಚಾರ್ಮಾಡಿ ಘಾಟ್ ಪ್ರದೇಶದಲ್ಲಿ ವಿಪರೀತ ಮಳೆಯಾಗಿದ್ದು ಈ ಕಾರಣದಿಂದಾಗಿ ನೀರಿನ ಮಟ್ಟ ಏರಿಕೆಯಾಗಿರಬಹುದು ಎಂದು ಅಂದಾಜಿಸಲಾಗಿದೆ.
2019ರ ಆಗಸ್ಟ್ 9 ರಂದು ತಾಲೂಕಿನಲ್ಲಿ ಭಾರೀ ಪ್ರಮಾಣದ ಮಳೆ ಸುರಿದು ನೆರೆ ಉಂಟಾಗಿ, ಅಪಾರ ಪ್ರಮಾಣದ ನಷ್ಟ ಉಂಟಾಗಿತ್ತು. ನೆರೆ ಗಮನಿಸಿದ ಸಾರ್ವಜನಿಕರು ಹಿಂದಿನ ನೆರೆಯ ಕಹಿ ಘಟನೆಯನ್ನು ನೆನಪಿಸಿಕೊಂಡು ಮಾತಾಡಿಕೊಳ್ಳುತ್ತಿದ್ದುದು ಕಂಡುಬಂತು.