ಸೆ.5 ವಿಶ್ವ ಬೆನ್ನುಹುರಿ ಅಪಘಾತ ದಿನಾಚರಣೆ: ಕೊಕ್ಕಡದ ಸೇವಾಧಾಮ ಪುನಶ್ಚೇತನಾ ಕೇಂದ್ರದಲ್ಲಿ ಆಯೋಜನೆ:

 

ಬೆಳ್ತಂಗಡಿ:ಸೇವಾ ಭಾರತಿ ಕನ್ಯಾಡಿ ಇದರ ವಿಭಾಗವಾದ ಕೊಕ್ಕಡದ ಸೇವಾಧಾಮ ಪುನಶ್ಚೇತನ ಕೇಂದ್ರದಲ್ಲಿ ವಿಶ್ವ ಬೆನ್ನು ಹುರಿ ಅಪಘಾತ ದಿನಾಚರಣೆ ಹಾಗೂ ವಾರ್ಷಿಕ ಸಮಾರಂಭ ಸೆ.5ರಂದು ನಡೆಯಲಿದೆ ಎಂದು ಸೇವಾಧಾಮದ ಸಂಚಾಲಕ ಪುರಂದರ ರಾವ್ ಹೇಳಿದರು. ಅವರು ಕನ್ಯಾಡಿ ಸೇವಾ ಭಾರತಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ದಕ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಗೋಪಾಲಕೃಷ್ಣ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಕೆ. ಪುರಂದರ ರಾವ್ ವಹಿಸಿಕೊಳ್ಳಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಕ್ಕಿಂಜೆಯ ಶ್ರೀ ಕೃಷ್ಣ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಮುರಳಿಕೃಷ್ಣ ಇರ್ವತ್ರಾಯ, ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷೆ ಮನೋರಮಾ ಭಟ್, ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎಂ.ಹರೀಶ್ ರಾವ್,ಉದ್ಯಮಿ ಪ್ರಭಾಕರ ಹೆಗ್ಡೆ,ಶ್ರೀ ಮಹಾಗಣಪತಿ ಸೇವಾ ಟ್ರಸ್ಟ್ ನ ಅಧ್ಯಕ್ಷ ಕೆ.ಕೃಷ್ಣ ಭಟ್ ಭಾಗವಹಿಸಲಿದ್ದಾರೆ.
ಸಾಧಕರಿಗೆ ಗೌರವ, ಫಲಾನುಭವಿಗಳಿಗೆ ಗಾಲಿ ಕುರ್ಚಿ ವಿತರಣೆ, ಶೌಚಾಲಯ ಹಾಗೂ ಇನ್ನಿತರ ನಿರ್ಮಾಣಕ್ಕಾಗಿ ಧನ ಸಹಾಯ, ಮೆಡಿಕಲ್ ಕಿಟ್ ಗಳ ವಿತರಣೆ ನಡೆಯಲಿದೆ.
ದಕ, ಉಡುಪಿ,ಉಕ, ಚಿಕ್ಕಮಗಳೂರು, ಕೊಡಗು,ಕಾಸರಗೋಡು ಜಿಲ್ಲೆಗಳಲ್ಲಿ 450 ಮಂದಿ ಬೆನ್ನು ಮೂಳೆ ಮುರಿತ ಕ್ಕೊಳಗಾದವರನ್ನು ಗುರುತಿಸಲಾಗಿದೆ. ಇಂತಹ ಇನ್ನಷ್ಟು ಮಂದಿ ಇದ್ದು ಅವರನ್ನು ಗುರುತಿಸುವ ಕೆಲಸ ಸಂಸ್ಥೆವತಿಯಿಂದ ನಡೆಯುತ್ತಿದೆ. ಸಂಸ್ಥೆಯಿಂದ 137 ಮಂದಿ ಪುನಶ್ಚೇತನ ಪಡೆದುಕೊಂಡಿದ್ದು,15 ಕಡೆಗಳಲ್ಲಿ ಉಚಿತ ವೈದ್ಯಕೀಯ ಶಿಬಿರ ನಡೆಸಲಾಗಿದೆ. 172 ಮಂದಿಗೆ ಗಾಲಿಕುರ್ಚಿ, 40 ಮಂದಿಗೆ ಕ್ಯಾಲಿಪರ್,46 ಮಂದಿಗೆ ವಾಕರ್, 23 ಮನೆಗಳಿಗೆ ಶೌಚಾಲಯ ರಾಂಪ್, ಮೊದಲಾದ ಸೌಕರ್ಯ 72 ಮಂದಿಗೆ ಸ್ವ ಉದ್ಯೋಗ ಅವಕಾಶ, 104 ಮಂದಿಗೆ ವೈದ್ಯಕೀಯ ಸಹಕಾರ 11 ಮಂದಿಗೆ ಶಸ್ತ್ರಚಿಕಿತ್ಸೆಗೆ ಸಹಾಯ, 362 ಮಂದಿಗೆ ವೈದ್ಯಕೀಯ ಕಿಟ್,343 ಮಂದಿಗೆ ದಿನಸಿ ಕಿಟ್ ವಿತರಿಸಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷ ವಿನಾಯಕ ರಾವ್,ಮೋಹನ್ ಎಸ್,ಚರಣ್ ಕುಮಾರ್ ಉಪಸ್ಥಿತರಿದ್ದರು.

error: Content is protected !!