ಬೆಳ್ತಂಗಡಿ: ಲಾಯಿಲ ಗ್ರಾಮದಲ್ಲಿ ಕಳೆದ ಕೆಲವು ಸಮಯಗಳಿಂದ ಚಿರತೆ ದಾಳಿಯಿಂದಾಗಿ ಸಾಕು ಪ್ರಾಣಿಗಳು ಬಲಿಯಾಗುತಿದ್ದು ಸ್ಥಳೀಯರು ಆತಂಕ ಪಡುವಂತಾಗಿತ್ತು.
ಚಿರತೆಯ ಹೆಜ್ಜೆ ಗುರುತು
ಈ ಬಗ್ಗೆ ಅರಣ್ಯ ಇಲಾಖೆಗೆ ಸಾರ್ವಜನಿಕರು ದೂರು ನೀಡಿದ್ದು ಅಧಿಕಾರಿಗಳು ಶುಕ್ರವಾರ ದಾಳಿ ನಡೆದ ಕೆಲವು ಕಡೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರಲ್ಲದೇ ಸ್ಥಳೀಯರು ತಮ್ಮ ಸಾಕುಪ್ರಾಣಿಗಳನ್ನು ಹಾಗೂ ಕಾಡಿನಂಚಿನ ರಸ್ತೆಯಲ್ಲಿ ಸಂಚಾರಿಸುವಾಗ ಎಚ್ಚರಿಕೆಯಿಂದ ಇರುವಂತೆ ಧ್ವನಿವರ್ಧಕದ ಮೂಲಕ ಮಾಹಿತಿ ನೀಡಿದರು.
ಕಳೆದ ಕೆಲವು ದಿನಗಳಿಂದ ಚಿರತೆ ಹಾವಳಿಯಿಂದ ಸ್ಥಳೀಯರಿಗೆ ತೊಂದರೆಯಾಗುತಿದ್ದು ತಮ್ಮ ಸಾಕು ಪ್ರಾಣಿಗಳನ್ನು ಕಳೆದುಕೊಂಡು ಕಂಗೆಟ್ಟಿದ್ದಾರೆ. ಈ ಬಗ್ಗೆ ಕ್ರಮ ಕೈಗೊಂಡು ಚಿರತೆ ಹಿಡಿಯುವ ಕಾರ್ಯಚರಣೆ ಮಾಡುವ ಮೂಲಕ ತೊಂದರೆಗೊಳಗಾದ ಸ್ಥಳೀಯರ ಆತಂಕ ದೂರ ಮಾಡಬೇಕಾಗಿ ಅರಣ್ಯ ಇಲಾಖೆಯ ಸಿಬ್ಬಂದಿಗಳಲ್ಲಿ ಗ್ರಾಮ ಪಂಚಾಯತ್ ಸದಸ್ಯ ಪ್ರಸಾದ್ ಶೆಟ್ಟಿ ಎಣಿಂಜೆ ಮನವಿ ಮಾಡಿದರು.
ಪರಿಶೀಲನೆ ಸಂದರ್ಭದಲ್ಲಿ ಕೆಲವು ಕಡೆಗಳಲ್ಲಿ ಮನೆ ಅಂಗಳ ತೋಟದಲ್ಲಿ ಚಿರತೆಯ ಹೆಜ್ಜೆ ಗುರುತುಗಳು ಕಂಡುಬಂದಿದ್ದು ಮುಂದಿನ ದಿನಗಳಲ್ಲಿ ಚಿರತೆಯ ಚಲನವಲನಗಳನ್ನು ಗಮನಿಸಿ ಮೇಲಾಧಿಕಾರಿಗಳ ಸೂಚನೆ ಮೇರೆಗೆ ಕಾರ್ಯಾಚರಣೆಯ ಮೂಲಕ ಸೆರೆ ಹಿಡಿಯುವ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಕಳೆದ ಕೆಲವು ದಿನಗಳಿಂದ ಲಾಯಿಲ ಗ್ರಾಮದ ಹಂದೆವೂರು ಬೈಲು , ಲಾಯಿಲ ಬೈಲು, ಗಾಣದ ಕೊಟ್ಟಿಗೆ ಸೇರಿದಂತೆ ಸುತ್ತಮುತ್ತಲಿನಿಂದ ಸುಮಾರು 15 ಕ್ಕಿಂತಲೂ ಅಧಿಕ ನಾಯಿಗಳನ್ನು ರಾತ್ರಿ ಸಮಯದಲ್ಲಿ ಚಿರತೆ ದಾಳಿ ನಡೆಸಿ ಕೊಂಡೊಯ್ಯುತಿದ್ದು ಸ್ಥಳೀಯರು ತಮ್ಮ ಸಾಕು ಪ್ರಾಣಿಗಳನ್ನು ರಕ್ಷಿಸಿಕೊಳ್ಳುವ ಬಗ್ಗೆ ಚಿಂತಾಕ್ರಾಂತರಾಗಿದ್ದರು. ಸಂಬಂಧಪಟ್ಟ ಅರಣ್ಯ ಇಲಾಖೆಯವರು ಬಂದು ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರಿಂದ ನಿಟ್ಟುಸಿರು ಬಿಡುವಂತಾಗಿದೆ.