ಕಾಡು ಕೋಣಗಳ‌ ದಾಳಿಯಿಂದ ವ್ಯಕ್ತಿಗೆ ಗಾಯ ಬೆಳಾಲು, ಪೆರಿಯಡ್ಕ ಬಳಿ ಘಟನೆ ಸಂಜೆ‌ 7 ಗಂಟೆ ವೇಳೆಗೆ‌ ಲೋಕೇಶ್ ಮೇಲೆ‌ ದಾಳಿ ಗಾಯಗೊಂಡ ಲೋಕೇಶ್ ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ‌ಚಿಕಿತ್ಸೆ ಆಗಾಗ ಸ್ಥಳೀಯವಾಗಿ ಕಾಡುಕೋಣ ಲಗ್ಗೆ, ಆತಂಕದಲ್ಲಿ‌ ಸ್ಥಳೀಯರು

 

 

 

ಬೆಳ್ತಂಗಡಿ: ವ್ಯಕ್ತಿಯೊಬ್ಬರ ಮೇಲೆ ಕಾಡು ಕೋಣಗಳ ಹಿಂಡೊಂದು ದಾಳಿ ನಡೆಸಿದ ಘಟನೆ ಬೆಳಾಲು ಗ್ರಾಮದ ಪೆರಿಯಡ್ಕ ಎಂಬಲ್ಲಿ ನಡೆದಿದೆ. ಉಜಿರೆಯಿಂದ ಕೆಲಸ ಮುಗಿಸಿಕೊಂಡು ಆಗಸ್ಟ್ 23 ರಂದು ಸಂಜೆ 7 ಗಂಟೆ ಸುಮಾರಿಗೆ ಲೋಕೇಶ್ ಎಂಬವರು ತನ್ನ ದ್ವಿಚಕ್ರ ವಾಹನದಲ್ಲಿ ಮನೆಗೆ ತೆರಳುತ್ತಿರುವಾಗ ಪೆರಿಯಡ್ಕ ಎಂಬಲ್ಲಿ ಕಾಡು ಕೋಣವೊಂದು ಅಡ್ಡ ಬಂದಿದ್ದು ತಕ್ಷಣ ತನ್ನ ದ್ವಿಚಕ್ರ ವಾಹನವನ್ನು ನಿಲ್ಲಿಸಿದಾಗ ಸುಮಾರು 10 ಸಂಖ್ಯೆಯಲ್ಲಿದ್ದ ಕಾಡು ಕೋಣಗಳ ಹಿಂಡು ಇವರ ವಾಹನದ ಹಿಂದೆ ಬರುತಿತ್ತು. ಇದನ್ನು ಗಮನಿಸಿದ ಅವರು ಮುಂದೆ ಹೋಗಲು ಪ್ರಯತ್ನಿಸಿದಾಗ ಕಾಡುಕೋಣವೊಂದು ಇವರಿಗೆ ದಾಳಿ ನಡೆಸಿದೆ.

 

 

ವಾಹನ ಸಹಿತ ಅವರು ಸ್ವಲ್ಪ ದೂರ ಎಸೆಯಲ್ಪಟ್ಟು ಬಿದ್ದಿದ್ದಾರೆ. ನಂತರ ಮತ್ತೊಂದು ಕಾಡು ಕೋಣವೂ ದಾಳಿಗೆ ಮುಂದಾದಾಗ ಅದೃಷ್ಟವಶಾತ್ ತಪ್ಪಿಸಿಕೊಂಡರೆನ್ನಲಾಗಿದೆ. ಕಾಡು ಕೋಣ ದಾಳಿಯಿಂದ ಕಾಲು ಹಾಗೂ ಬೆನ್ನಿಗೆ ಗಾಯಗಳಾಗಿದ್ದು ಅವರನ್ನು ಉಜಿರೆಯ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗಿದೆ.

 

 

 

ಹೆಲ್ಮೆಟ್ ಇದುದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.ಕಳೆದ ಕೆಲವು ವರುಷಗಳಿಂದ ಈ ಭಾಗದಲ್ಲಿ ಕಾಡು ಕೋಣಗಳ ಹಾವಳಿಯಿಂದಾಗಿ ಕೃಷಿ ಹಾಳಾಗುತಿದ್ದು ಸಂಬಂಧಪಟ್ಟ ಅರಣ್ಯ ಇಲಾಖೆಗೆ ಮಾಹಿತಿ ನೀಡಿದಾಗ ಪಟಾಕಿ ಅಥವಾ ಶಬ್ದ ಮಾಡಿ ಓಡಿಸುವಂತೆ ಉಡಾಫೆ ಉತ್ತರ ನೀಡಿದ್ದಾರೆ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.

 

 

 

 

 

ಅದಲ್ಲದೆ ಕಳೆದ ನಾಲ್ಕು ವರುಷಗಳ ಹಿಂದೆ ವೃದ್ಧೆಯೊಬ್ಬರು ಕಾಡು ಕೋಣ ದಾಳಿಯಿಂದ ಎರಡು ತಿಂಗಳು ಚಿಕಿತ್ಸೆ ಪಡೆದು ಸಾವನ್ನಪ್ಪಿದ್ದಾರೆ. ಕಳೆದ ಕೆಲವು ದಿನಗಳ ಹಿಂದೆ ಇದೇ ರೀತಿ ವ್ಯಕ್ತಿಯೊಬ್ಬರಿಗೂ ಕಾಡು ಕೋಣ ದಾಳಿ ನಡೆಸಿದ್ದು ಅವರು ಕೈ ಮುರಿತಕ್ಕೊಳಗಾಗಿದ್ದಾರೆ. ಹಗಲು ಹೊತ್ತಿನಲ್ಲೂ ಆತ್ತಿತ್ತ ಓಡಾಡುವ ಕಾಡು ಕೋಣಗಳಿಂದಾಗಿ ಸ್ಥಳೀಯ ಶಾಲೆಗೆ ತಮ್ಮ ಮಕ್ಕಳನ್ನು ಕಳುಹಿಸಲೂ ಪೋಷಕರು ಹೆದರುವಂತಾಗಿದೆ.

 

 

ಬೈಕಿನಲ್ಲಿ ಅಥವಾ ಆಚೀಚೆ ಹೋಗಲು ಹೆದರಿಕೆಯಾಗುತ್ತಿದೆ. ಈಗಾಗಲೇ ನಾವು ಅರಣ್ಯ ಇಲಾಖೆಗೆ ಸ್ಥಳೀಯ ಪಂಚಾಯಿತಿಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಈ ರೀತಿ ನಿರ್ಲಕ್ಷ್ಯ ವಹಿಸಿದರೆ ನಮ್ಮ ಸ್ಥಿತಿ ಏನಾಗಬೇಕು ಎಂಬ ಆತಂಕವಾಗಿದೆ.ಅದ್ದರಿಂದ ಪ್ರಾಣ ಹಾನಿ ಸಂಭವಿಸುವ ಮೊದಲು ಏನಾದರೂ ಕ್ರಮ ಕೈಗೊಳ್ಳಬೇಕು ಎಂದು ತಮ್ಮ ನೋವನ್ನು ಸ್ಥಳೀಯರು ಹೊರಹಾಕುತಿದ್ದಾರೆ.

 

 

 

ಇನ್ನಾದರೂ ಸಂಬಂಧಪಟ್ಟ ಅರಣ್ಯ ಇಲಾಖೆಯು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಆತಂಕದಲ್ಲಿ ಇರುವ ಸ್ಥಳೀಯರ ಭಯವನ್ನು ಹೋಗಲಾಡಿಸುವ ಬಗ್ಗೆ ಯೋಚಿಸಬೇಕಾಗಿದೆ. ಅದಲ್ಲದೇ ಜನಪ್ರತಿನಿಧಿಗಳೂ ಈ ಬಗ್ಗೆ ಗಮನಿಸಬೇಕಾಗಿದೆ.

error: Content is protected !!