ನಡಿಗೆ’ಯಲ್ಲಿ ಬಯಲಾಯ್ತು ‘ಕೈ’ ಪಕ್ಷದೊಳಗಿನ ಬಿರುಕು: ‘ಮನೆಯೊಂದು ನಾಲ್ಕು ಬಾಗಿಲು…?, ಹಿರಿಯ ಕಾರ್ಯಕರ್ತರು ಬಿಚ್ಚಿಟ್ಟ ಗುಂಪುಗಾರಿಕೆ ರಹಸ್ಯ: ಸಮಸ್ಯೆಗೆ ಸ್ಪಂದಿಸುವ ಮುಖಂಡರಿಲ್ಲದೆ ಕಾರ್ಯಕರ್ತರು ಅತಂತ್ರ!: ‘ಏಕ’ ನಾಯಕತ್ವವಿಲ್ಲದೆ ಬಲ ಕಳೆದುಕೊಳ್ಳುತ್ತಿದೆಯೇ ಕೈ?

 

 

ಬೆಳ್ತಂಗಡಿ: ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಕಾಂಗ್ರೆಸ್ ಆಗಸ್ಟ್ 22ರಂದು ‘ಸ್ವಾತಂತ್ರ್ಯ ನಡಿಗೆ’ಯನ್ನು ಗುರುವಾಯನಕೆರೆಯಿಂದ ಬೆಳ್ತಂಗಡಿಗೆ ಹಮ್ಮಿಕೊಂಡಿದ್ದು ಇದೀಗ ಚರ್ಚೆಯ ವಿಷಯವಾಗಿದೆ.
ಬೆಳ್ತಂಗಡಿ ಕಾಂಗ್ರೆಸ್ ನ ಮುಖಂಡರು ಜೊತೆಯಾಗಿ‌ ಕಾಣಿಸಿಕೊಂಡು ತಕ್ಕಮಟ್ಟಿಗೆ ಯಶಸ್ವಿಯಾಗಿ ‌ನಡಿಗೆ ನಡೆಸಿದರೂ, ಒಳ ರಾಜಕೀಯ ಗುಂಪುಗಾರಿಕೆ ಕಂಡು ಬಂದಿದೆ ಎಂಬುದು ಅವರದೇ ಪಕ್ಷದೊಳಗಿನ ಹಿರಿಯ ಕಾರ್ಯಕರ್ತರ ಅಭಿಪ್ರಾಯ ಕೇಳಿಬಂದಿದೆ.

 

 

ಇದೇ ಹಿನ್ನೆಲೆಯಲ್ಲಿ ‘ ‘ಸ್ವಾತಂತ್ರ್ಯ ನಡಿಗೆ’ಯಲ್ಲಿ ಪ್ರಮುಖ ಮುಖಂಡರ ಗುಂಪುಗಾರಿಕೆ ಕಂಡುಬಂದಿದೆ. ಈ ಗುಂಪುಗಳು ವಿಲೀನವಾಗದಿದ್ದಲ್ಲಿ, ಬೆಳ್ತಂಗಡಿಯಲ್ಲಿ ಅಧಿಕಾರದ ಆಸೆಯೂ ಪಡುವಂತಿಲ್ಲ ಎಂಬ ಅಭಿಪ್ರಾಯ ಕೇಳಿ ಬರುತ್ತಿದೆ.

 

ಕೆಲವೇ ತಿಂಗಳುಗಳಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಆಪ್, ಬಿ.ಜೆ.ಪಿ. ಸೇರಿದಂತೆ ವಿವಿಧ ಪಕ್ಷಗಳು ತಮ್ಮ ಪೂರ್ವ ತಯಾರಿಗಳನ್ನು ರಾಜ್ಯದ ವಿವಿಧೆಡೆ ನಡೆಸುತ್ತಿದೆ. ಆದರೆ ಬೆಳ್ತಂಗಡಿಯಲ್ಲಿ ಕಾಂಗ್ರೆಸ್ ಅನುಭವಿ ರಾಜಕಾರಣಿಗಳ ದಂಡನ್ನೇ ಹೊಂದಿದ್ದರೂ ಸೂಕ್ತ ನಾಯಕತ್ವ ಕೊರತೆಯಿಂದ ಇರುವ ಅವಕಾಶಗಳನ್ನೂ ಕೈಚೆಲ್ಲುತ್ತಿದೆ.

 

 

 

ಬಹುನಾಯಕತ್ವ ಇದ್ದಲ್ಲಿ ಭವಿಷ್ಯದ ಪಾಡೇನು…?

ಒಬ್ಬ ಮುಖಂಡನಿಲ್ಲದೆ ಚುನಾವಣಾ ಪೂರ್ವತಯಾರಿಯ ಸುಳಿವೂ ಲಭಿಸುತ್ತಿಲ್ಲ ಎಂಬ ಗೊಂದಲ ಕಾರ್ಯಕರ್ತರದ್ದಾಗಿದೆ.
ಪ್ರಮುಖ ಮುಖಂಡರು ತಾಲೂಕಿನಲ್ಲಿದ್ದರೂ ಕಾರ್ಯಕರ್ತರ ವಿಶ್ವಾಸ ಗಳಿಸುವ ಮುಖಂಡರ ಅಗತ್ಯತೆ ತಾಲೂಕಿಗೆ ಬೇಕಿದೆ.

 

 

‘ಕೈ’ ಪಕ್ಷ ನಾಯಕನಿಲ್ಲದೆ ಹಳಿ ತಪ್ಪಿದ ರೈಲಿನಂತಾಗಿದ್ದು, ಎಲ್ಲರೂ “ನಾನೇ ಮುಂದಿನ ಅಭ್ಯರ್ಥಿ” ಎಂಬ ರೀತಿಯಲ್ಲಿ ಗುಂಪು ಮಾಡಿಕೊಂಡಿರುವುದು ನಿಷ್ಠಾವಂತ ಕಾರ್ಯಕರ್ತರಿಗೆ ತಲೆನೋವಾಗಿ ಪರಿಣಮಿಸಿದೆ. ಪಾದಯಾತ್ರೆಯಲ್ಲಿ ಬೆಳ್ತಂಗಡಿಯ ಗುಂಪು ರಾಜಕೀಯ ಗೋಚರಿಸಿದೆ. ನೈಜ ನಾಯಕತ್ವದ ಬಗ್ಗೆ ಚಿಂತನೆ ನಡೆಸದಿದ್ದರೆ ತಾಲೂಕಿನಲ್ಲಿ ಕಾಂಗ್ರೆಸ್ ನ ಅವನತಿಗೆ ಮುನ್ನುಡಿ ‌ಬರೆದಂತೆ ಆಗಲಿದೆ ಎಂಬುದು ಅದೇ ಪಕ್ಷದ ಹಿರಿಯ ‌ಕಾರ್ಯಕರ್ತರ ಮಾತಾಗಿದೆ‌.
ಹಲವು ವಿಚಾರಗಳು ಇದ್ದರೂ ಸರಕಾರದ ವೈಫಲ್ಯವನ್ನು ಜನರ ಎದುರಿಗೆ ಪರಿಣಾಮಕಾರಿಯಾಗಿ ತಿಳಿಸಬೇಕಾದ ಮುಖಂಡರೇ ತನ್ನೊಳಗಿನ ವೈರತ್ವವನ್ನು ತಮ್ಮ ದೌರ್ಬಲ್ಯವನ್ನು ಬಹಿರಂಗವಾಗಿ ಪಾದಯಾತ್ರೆಯಲ್ಲಿ ಬಿಚ್ಚಿಟ್ಟಿದ್ದಾರೆ ಎನ್ನಲಾಗಿದೆ. ಇದರಿಂದ ಪೇಚಿಗೆ ಸಿಲುಕಿರುವ ಕಾರ್ಯಕರ್ತರು ಯಾರ ಬಣಕ್ಕೆ ಬೆಂಬಲ ನೀಡಬೇಕು ಎಂಬ ಗೊಂದಲವನ್ನು ಅವರಲ್ಲಿ ಮೂಡಿಸಿದೆ.

 

 

 

‘ಪ್ರಜಾಪ್ರಕಾಶ’ ತಂಡದೊಂದಿಗೆ ಕಾಂಗ್ರೆಸ್ಸಿನ ಹಿರಿಯ ಕಾರ್ಯಕರ್ತರೊಬ್ಬರು ಮಾಹಿತಿ ನೀಡಿದ್ದು, “ಬೆಳ್ತಂಗಡಿ‌ ತಾಲೂಕಿನ ರಾಜಕೀಯದಲ್ಲಿ ಕಾಂಗ್ರೆಸ್ ತನ್ನ ಹಿಡಿತ ಸಾಧಿಸುವಲ್ಲಿ ಪದೇ ಪದೇ ಎಡವುತ್ತಿದೆ. ನಿಷ್ಠಾವಂತ ಕಾಂಗ್ರೆಸ್  ನಾಯಕ ಹರೀಶ್ ಕುಮಾರ್ ಅವರು ಪಕ್ಷ ನಿಷ್ಠರಾಗಿದ್ದರೂ, ತಾಲೂಕಿನ ಜನತೆಯ ಮನ್ನಣೆ ಗಳಿಸುವಲ್ಲಿ ವಿಫಲರಾಗಿದ್ದಾರೆ.

 

 

ಹಾಲಿ ಶಾಸಕರ ಕಾರ್ಯವೈಖರಿ ಬಗ್ಗೆ ಇತ್ತೀಚೆಗೆ ಮೃದುವಾಗಿ ಟೀಕಿಸಿರುವುದು, ಜನರ ನಡುವೆ ಬೆರೆಯದೆ, ಕೆಲ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗಿದ್ದು, ಜನ ಅವರಿಂದ ದೂರ ಉಳಿದಿದ್ದಾರೆ”. “ಇನ್ನು ಪಕ್ಷಾಂತರ ನಡೆಸಿದರೂ ತಮ್ಮದೇ ಅಭಿಮಾನಿ ಬಳಗ ಹೊಂದಿರುವ ಮಾಜಿ ಶಾಸಕ ವಸಂತ ಬಂಗೇರ ಅವರು ಹೊಸ ನಾಯಕನನ್ನು ಸೃಷ್ಟಿಸುವಲ್ಲಿ ವಿಫಲರಾಗಿದ್ದಾರೆ ಎಂಬುದು ಕಟು ಸತ್ಯ. ತಾನು ಅಂತಿಮ ಅನ್ನೋ ಹಮ್ಮು ಅವರಿಂದ ತಾಲ್ಲೂಕು ಜನತೆ ಉಪಕಾರ ಪಡೆದಿದ್ದರೂ ಸಹ ದೂರ ಹೋಗುವಂತೆ ಆಗಿದೆ… ಅವರ ಅತಿಯಾದ ಕೋಪ ಹಾಗೂ ಕೆಲ ವಿಚಾರಗಳನ್ನು ‌ವಿಸ್ತೃತವಾಗಿ ಅಧ್ಯಯನ ನಡೆಸದೆ ಹೇಳಿಕೆ ನೀಡುತ್ತಿರುವುದರಿಂದ ಅವರ ಮಾತು ಗಂಭೀರತೆ ಕಳೆದುಕೊಳ್ಳುತ್ತಿದೆ‌. ಜೊತೆಗೆ ಅವರ ಹೇಳಿಕೆಗಳಿಗೆ ಕಾಂಗ್ರೆಸ್ ನಾಯಕರೂ ಧ್ವನಿಗೂಡಿಸದಿರುವುದು ಅವರ ಶಕ್ತಿಯನ್ನು ಕುಗ್ಗಿಸುತ್ತಿದೆ. ಪ್ರಾಮಾಣಿಕ ನಡೆ, ನುಡಿ ಇಲ್ಲಿ ಗೌಣವಾಗುತ್ತಿದೆ”. ಇನ್ನೊಬ್ಬ ಹಿರಿಯ ಮುಖಂಡ ಮಾಜಿ ಸಚಿವ ಗಂಗಾಧರ ಗೌಡ, ಹಾಗೂ ಅವರ ಪುತ್ರ ಯುವನಾಯಕ ರಂಜನ್ ಗೌಡ‌ ಅವರು ಉದ್ಯಮದ ಕಡೆಗೆ ಹೆಚ್ಚು ಒಲವು ತೋರುತಿದ್ದು ಕೆಲ ಕಾರ್ಯಕ್ರಮಗಳ ಸಂದರ್ಭಗಳಲ್ಲಿ ಮಾತ್ರ ಕಾರ್ಯಕರ್ತರಿಗೆ ಲಭ್ಯವಾಗುತಿದ್ದಾರೆ. ಆದ್ದರಿಂದಾಗಿ ಜನ ಅವರಿಂದ‌ ಏನನ್ನೂ ನಿರೀಕ್ಷೆ ಮಾಡುತ್ತಿಲ್ಲ”. “ಕಳೆದ ವರ್ಷದಿಂದ ತಾಲೂಕಿನಲ್ಲಿ ಇದ್ದು, ತಮ್ಮ ಫೌಂಡೇಶನ್ ಹೆಸರಿನಿಂದ ಗುರುತಿಸಿಕೊಂಡಿರುವವರು ರಕ್ಷಿತ್ ಶಿವರಾಮ್. ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ‌ ಪ್ರಧಾನ ಕಾರ್ಯದರ್ಶಿಯಾಗಿದ್ದರೂ ತಾಲೂಕಿನಲ್ಲಿ ಸಮಾಜಮುಖಿ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿದ್ದಾರೆ. ಪಾದಯಾತ್ರೆ ವೇಳೆ ಅವರ ಅಭಿಮಾನಿಗಳ ಹೆಸರಿನಲ್ಲಿ ಬಂಗೇರ ಅವರ ಪಕ್ಕದಲ್ಲಿ ನಿಂತ ಬ್ಯಾನರ್ ಹಾಕಿಸಿರುವುದೂ ತಾಲೂಕಿನ ಕೆಲ ಕೈ ನಾಯಕರ ಕಣ್ಣು ಕೆಂಪಗಾಗಿಸಿದೆ. ಇವರ ಅಭಿಮಾನಿ ಬಳಗ ಸಾಮಾಜಿಕ ಜಾಲತಾಣಗಳಲ್ಲಿ ಪರೋಕ್ಷ ಪ್ರಚಾರ, ಜನಸೆಳೆಯುವ ತಂತ್ರವನ್ನೂ ನಡೆಸುತ್ತಿದ್ದಾರೆ. ಇತ್ತ ಅಭಿವೃದ್ಧಿ ಕೆಲಸಗಳ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾದ ತಾಲೂಕಿನ ಶಾಸಕ ಹರೀಶ್ ಪೂಂಜಾರಿಗೆ ಠಕ್ಕರ್ ಕೊಡುವ ಸಾಮರ್ಥ್ಯ ಇವರಿಗೆ ಇದೆ ಎನ್ನಲಾಗುತ್ತಿದ್ದರೂ ಬಗಲಿನಲ್ಲಿಯೇ ದುಷ್ಮನ್ ಗಳು ಇದ್ದು, ಅವರನ್ನು ಎದುರಿಸುವುದೇ ದೊಡ್ಡ ಸವಾಲಿನ ಕೆಲಸವಾಗಿದೆ”. “ಒಟ್ಟಿನಲ್ಲಿ ಒಗ್ಗಟ್ಟಿಲ್ಲದೆ ಕಾಂಗ್ರೆಸ್ ಪಕ್ಷ ಅಧಿಕಾರದ ಆಸೆಯಿಂದ ತಾಲೂಕಿನಲ್ಲಿ ಅಸ್ತಿತ್ವಕ್ಕೆ ಕೊಡಲಿ ಇಟ್ಟುಕೊಳ್ಳುತ್ತಿದೆ” ಎಂಬುದು ಹಿರಿಯ ಮುಖಂಡರ ಮಾತು.
ಆಡಳಿತ ಪಕ್ಷದ ಹುಳುಕುಗಳನ್ನು ಜನತೆಗೆ ತಿಳಿಸುವಲ್ಲಿ ಮುಖಂಡರು ವಿಫಲವಾಗಿದ್ದು, ತಾವೂ ಮುಂದೆ ಸಾಗದೆ, ಇತರರನ್ನೂ ಮುಂದೆ ಸಾಗಲು ಬಿಡದೆ ಇರುವುದು ಬಿ.ಜೆ.ಪಿ. ಪಕ್ಷಕ್ಕೆ ವರದಾನವಾಗಲಿದೆ ಎಂಬುದು ಕಾಂಗ್ರೆಸ್ ಪಕ್ಷದ ಹಿರಿಯ ಕಾರ್ಯಕರ್ತರ ಮಾತಾಗಿದೆ.
‘ಮನೆಯೊಂದು ನಾಲ್ಕು ಬಾಗಿಲು’ ಎಂಬಂತಾಗಿರುವ ಕೈ ಪಕ್ಷ ತನ್ನೊಳಗಿನ ಬಿನ್ನಮತ ನಿವಾರಿಸಿಕೊಂಡು ಚುನಾವಣೆ ‌ವೇಳೆಗೆ ತನ್ನ ಎದುರಾಳಿ ಪಕ್ಷಕ್ಕೆ ಸ್ಪರ್ಧಾತ್ಮಕ ಸ್ಪರ್ಧೆಯನ್ನಾದರೂ ನೀಡಲಿದೆಯೇ ಎಂಬುದು ಯಕ್ಷ ಪ್ರಶ್ನೆಯಾಗಿದೆ.

error: Content is protected !!