ಉಜಿರೆ: 75 ವರ್ಷಗಳ ಹಿಂದಿನ ಕಿತ್ತು ತಿನ್ನುವ ಬಡತನ ದಬ್ಬಾಳಿಕೆಯ ಆಡಳಿತದ ಅವಧಿಯಲ್ಲಿ ನಮ್ಮ ಸ್ವಾತಂತ್ರ್ಯ ಹೋರಾಟಗಾರರು ದೇಶದ ಜನರನ್ನು ಒಗ್ಗೂಡಿಸಿ ಶಾಂತಿಯುತ, ಮಾನವೀಯ ನೆಲೆಯ ಹೋರಾಟದ ಮೂಲಕ ದೇಶವನ್ನು ಬ್ರಿಟಿಷರ ಕಪಿಮುಷ್ಠಿಯಿಂದ ಬಿಡುಗಡೆಗೊಳಿಸಿದ್ದರಿಂದ ದೇಶದಲ್ಲಿ ಬಹುದೊಡ್ಡ ಬದಲಾವಣೆ ಹಾಗೂ ಅವಕಾಶಗಳು ಸೃಷ್ಟಿಯಾಗಿವೆ. ಭಾರತದ ಯಶಸ್ಸು, ತೇಜಸ್ಸು ಸ್ವಾತಂತ್ರ್ಯ ಶತಮಾನೋತ್ಸವಕ್ಕೆ ಇನ್ನಷ್ಟು ಎತ್ತರಕ್ಕೆ ಏರಲಿ. ಇದಕ್ಕೆ ವಿದ್ಯಾರ್ಥಿಗಳು ಹೆಚ್ಚಿನ ಪ್ರಯತ್ನದೊಂದಿಗೆ ಮುಂದುವರೆಯಬೇಕು ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಹಾಗೂ ರಾಜ್ಯಸಭಾ ಸದಸ್ಯರಾದ ಡಾ.ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಸ್ವಾತಂತ್ಯ್ರ ಅಮೃತ ಮಹೋತ್ಸವ ಧ್ವಜಾರೋಹಣವನ್ನು ಉಜಿರೆಯ ಶ್ರೀ ಡಿ. ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ನೆರವೇರಿಸಿ ಸಂದೇಶ ನೀಡಿದರು.
ದೇಶದಲ್ಲಿ ಸ್ತ್ರೀ ಪುರುಷರಿಗೆ ಸಮಾನ ಅವಕಾಶಗಳು ನಿರ್ಮಾಣವಾಗುತ್ತಿರುವುದು ಶ್ಲಾಘನೀಯ ವಿಚಾರ. ನ್ಯಾಯ, ನೀತಿಗಳನ್ನು ಒಗ್ಗೂಡಿಸಿ ದೇಶದ ಪ್ರಗತಿಗೆ ಎಲ್ಲರೂ ಕೈಜೋಡಿಸಬೇಕು. ಶ್ರೇಷ್ಠವಾಗಿರುವ ಭಾರತವನ್ನು ವಿಶ್ವಮಾನವ ಸಂಕಲ್ಪದೊಂದಿಗೆ ಮುನ್ನಡೆಸುವ ಮೂಲಕ ಸಮಗ್ರ ಭಾರತದ ನಿರ್ಮಾಣಕ್ಕೆ ನಮ್ಮಲ್ಲಿರುವ ಸಾಕಷ್ಟು ಅವಕಾಶಗಳನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು.
ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಡಿ.ಹರ್ಷೇಂದ್ರ ಕುಮಾರ್, ಡಾ.ಸತೀಶ್ಚಂದ್ರ ಎಸ್., ಸುಪ್ರಿಯಾ ಹರ್ಷೇಂದ್ರ ಕುಮಾರ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಎಲ್.ಎಚ್. ಮಂಜುನಾಥ್, ಶ್ರೀ ಧ.ಮಂ.ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು,ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಉಪನ್ಯಾಸಕ ಸುನಿಲ್ ಪಂಡಿತ್ ಕಾರ್ಯಕ್ರಮ ನಿರೂಪಿಸಿದರು. ಧ್ವಜವಂದನೆ ಕಾರ್ಯಕ್ರಮದಲ್ಲಿ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.