ದಾನಿಗಳ ನೆರವಿನೊಂದಿಗೆ ಸೂರು ನಿರ್ಮಾಣ: ಬಡ ಕುಟುಂಬಕ್ಕೆ ನೆರವಾದ ಲಾಯಿಲ ಗ್ರಾ.ಪಂ ಸದಸ್ಯೆ: ಜನಪ್ರತಿನಿಧಿಯ ಸ್ಪಂದನೆಗೆ ಜನತೆಯ ಮೆಚ್ಚುಗೆ

 

 

 

ಬೆಳ್ತಂಗಡಿ: ಚುನಾವಣೆ ಸಂದರ್ಭಗಳಲ್ಲಿ ಮನೆ ಮನೆಗೆ ಭೇಟಿ ನೀಡಿ ನಮ್ಮನ್ನು ಚುನಾವಣೆಯಲ್ಲಿ ಗೆಲ್ಲಿಸಿಕೊಟ್ಟಲ್ಲಿ ನಿಮ್ಮ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತೇನೆ ಬಡವರ ಸೇವೆ ಮಾಡುತ್ತೆನೆ ಎಂಬ ದೊಡ್ಡ ಭರವಸೆಗಳ ಪ್ರಣಾಳಿಕೆಯ ಕರಪತ್ರವನ್ನು ಹಂಚಿ ಗೆದ್ದ ನಂತರ ಜನರ ಬಳಿಗೆ ಹೋಗದೇ ನೀಡಿದ ಭರವಸೆಗಳು ಕೇವಲ ಕರಪತ್ರಕ್ಕೆ ಮಾತ್ರ ಸೀಮಿತಗೊಳಿಸುವ ಜನಪ್ರತಿನಿಧಿಗಳು ಒಂದೆಡೆಯಾದರೆ ಮತದಾನ ಮಾಡಿದ ಮತದಾರರಿಗೆ ಏನಾದರೊಂದು ರೀತಿಯಲ್ಲಿ ಸಹಾಯ ಹಸ್ತ ಚಾಚಬೇಕು ಅವರ ಕಷ್ಟಕ್ಕೆ ಸ್ಪಂದಿಸಬೇಕು ಅವರ ನಿರೀಕ್ಷೆಗಳನ್ನು ಹುಸಿಗೊಳಿಸಬಾರದು ಎಂಬ ಚಿಂತನೆಯನ್ನು ಮಾಡುವ ಸಮಾಜಮುಖಿ ಯೋಚನೆಗಳನ್ನು ಮಾಡುವ ಜನಪ್ರತಿನಿಧಿಗಳೂ  ಇದ್ದಾರೆ.

 

 

 

ಇದಕ್ಕೆ ಪೂರಕವಾಗಿ ಲಾಯಿಲ ಗ್ರಾಮ ಪಂಚಾಯಿತಿಯ  ಸದಸ್ಯೆಯೊಬ್ಬರು ತನ್ನ ವಾರ್ಡಿನಲ್ಲಿ ಅಶಕ್ತ ಕುಟುಂಬವೊಂದಕ್ಕೆ ದಾನಿಗಳ ಸಹಕಾರದಲ್ಲಿ ಮನೆ ನಿರ್ಮಿಸಿಕೊಟ್ಟು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಲಾಯಿಲ ಗ್ರಾಮದ ಗುರಿಂಗಾನ ಎಂಬಲ್ಲಿ  ಕಡುಬಡತನದಲ್ಲಿರುವ  ಮೀನಾಕ್ಷಿ ಎಂಬವರು ತನ್ನ ಗಂಡನನ್ನು ಕಳೆದುಕೊಂಡು ಮನೆ ಇಲ್ಲದೇ ಬಾಡಿಗೆ ಮನೆಯಲ್ಲಿದ್ದು ಕೂಲಿ ಕೆಲಸ ಮಾಡಿ  ತನ್ನ ಮೂರು ಮಕ್ಕಳ ವಿದ್ಯಾಭ್ಯಾಸ ಮತ್ತು ಜೀವನ ನಡೆಸುತ್ತಿರುವ ಬಗ್ಗೆ  ತಿಳಿದ ಲಾಯಿಲ ಗ್ರಾಮ ಪಂಚಾಯತ್ ಸದಸ್ಯೆ ರಜನಿ ಚಂದ್ರಪಾಲ್ ಅವರು ಬಡ ಕುಟುಂಬಕ್ಕೆ ಮನೆ ನಿರ್ಮಾಣದ ಸಂಕಲ್ಪ ಮಾಡಿ ಹಲವಾರೂ ದಾನಿಗಳ ಸಹಕಾರದಲ್ಲಿ  ಮನೆ ನಿರ್ಮಾಣ ಮಾಡಿಸಿದ್ದಾರೆ. ಶಾಸಕ ಹರೀಶ್ ಪೂಂಜ ಸೇರಿದಂತೆ ದಾನಿಗಳ ಸಹಕಾರದಲ್ಲಿ ಮನೆ ನಿರ್ಮಿಸಿಕೊಡಲು ತುಂಬಾ ಶ್ರಮ‌ಪಟ್ಟು ಮನೆ ನಿರ್ಮಾಣಗೊಂಡು ಗೃಹಪ್ರವೇಶ ನಡೆದಿದೆ.‌ಇವರ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದ್ದು ಮನೆ ನಿರ್ಮಿಸುವಲ್ಲಿ ಮುತುವರ್ಜಿ ವಹಿಸಿದ ಗ್ರಾ.ಪಂ ಸದಸ್ಯರಿಗೆ ಹಾಗೂ ಸಹಕಾರ ನೀಡಿದ ಎಲ್ಲಾ ದಾನಿಗಳಿಗೆ ಮೀನಾಕ್ಷಿ ಕುಟುಂಬದವರು ಧನ್ಯವಾದ ತಿಳಿಸಿದ್ದಾರೆ.

error: Content is protected !!