ಬೆಳಾಲು ವೃದ್ಧೆಯನ್ನು ಕೊಲೆಗೈದು ಚಿನ್ನಾಭರಣ ದರೋಡೆ: ಮನೆಗೆ ಬರುತ್ತಿದ್ದ ಸಂಬಂಧಿಕನಿಂದಲೇ ನಡೆದ ಘೋರ ಕೃತ್ಯ: ಆರೋಪಿಯನ್ನು ಬಂಧಿಸಿದ ಪೊಲೀಸರು:

 

 

 

ಬೆಳ್ತಂಗಡಿ :  ವೃದ್ಧೆಯನ್ನು ಹೊಡೆದು ಕೊಲೆ ಮಾಡಿ ಚಿನ್ನಾಭರಣ ಸಹಿತ ನಗದು ದರೋಡೆಗೈದ ಘಟನೆ ಬೆಳಾಲು ಸಮೀಪ ನಡೆದಿದೆ. ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳಾಲು ಸಮೀಪದ ಕೆರೆಕೋಡಿ ಎಂಬಲ್ಲಿ ಜು 23 ಮಧ್ಯಾಹ್ನ  ಅಕ್ಕು (85) ಎಂಬ ವೃದ್ಧೆಗೆ ಹೊಡೆದು ಕೊಲೆ ಮಾಡಿ ಚಿನ್ನಾಭರಣ ಸಹಿತ ನಗದನ್ನು ದರೋಡೆ ಮಾಡಲಾಗಿದೆ.

 

ಅಕ್ಕು ಅವರು ಮಗ ಡೀಕಯ್ಯ, ಸೊಸೆ ಲಲಿತಾ, ಮಗಳು ದೇವಕಿ ಹಾಗೂ ಮೊಮ್ಮಗಳೊಂದಿಗೆ ವಾಸವಿದ್ದು, ಮಗ , ಮಗಳು ಮತ್ತು ಸೊಸೆ ಕೂಲಿ ಕೆಲಸಕ್ಕೆ ಹೋಗಿದ್ದರು. ಮೊಮ್ಮಗಳು ಮಧ್ಯಾಹ್ನ ಶಾಲೆ ಬಿಟ್ಟು ಮನೆಗೆ ಬಂದು ಅಜ್ಜಿಯನ್ನು ಕರೆದಾಗ, ಅಜ್ಜಿ ಮನೆಯಲ್ಲಿ ಇರಲಿಲ್ಲ.

 

 

 

ನಂತರ ಹೊರಗಡೆ ಬಂದು ನೋಡಿದಾಗ ಅಜ್ಜಿ ಅಕ್ಕು ಅವರು ತಮ್ಮ ಮನೆಯ ಸಮೀಪದ ಹಟ್ಟಿಯ ಹಿಂದೆ ಬಿದ್ದಿರುವುದು ಗಮನಿಸಿ ತಕ್ಷಣ ಅಲ್ಲೆ ಸ್ವಲ್ಪ ದೂರದಲ್ಲಿದ್ದ ಮನೆಯವರಿಗೆ ವಿಚಾರ ತಿಳಿಸಿದಾಗ. ಅವರು ಮತ್ತು ಕೂಲಿ ಕೆಲಸಕ್ಕೆ ಹೋಗಿದ್ದ ಮನೆಯವರು ಬಂದು ನೋಡಿದಾಗ ಅಕ್ಕು ಅವರು ಚಿಂತಾಜನಕ ಸ್ಥಿತಿಯಲ್ಲಿ ಒದ್ದಾಡುತಿದ್ದರು. ತಕ್ಷಣ ಆಸ್ಪತ್ರೆಗೆ ಕೊಂಡು ಹೋಗಲು ವಾಹನಕ್ಕೆ ತಿಳಿಸಿದರೂ ವಾಹನ ಬರುವಷ್ಟರಲ್ಲಿ ಅವರು ಮೃತಪಟ್ಟಿದ್ದಾರೆ. ಸರಿಯಾಗಿ ಗಮನಿಸಿದಾಗ ಅವರ ಕಿವಿಯಲ್ಲಿದ್ದ ಚಿನ್ನಾಭರಣ ಕಿತ್ತುಕೊಂಡು ಮನೆಯಲ್ಲಿದ್ದ ನಗದನ್ನು ಯಾರೋ ದರೋಡೆಗೈದಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು ಅವರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.

 

 

ಆರೋಪಿ ಬಂಧನ

ವೃದ್ಧೆಯನ್ನು ಕೊಲೆಗೈದು ಚಿನ್ನಾಭರಣ ದೋಚಿದ ಆರೋಪಿ ಅಶೋಕ ಎಂಬವನನ್ನು ಪೊಲೀಸರು ಬಂಧಿಸಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.ಶನಿವಾರ ಮಧ್ಯಾಹ್ನ ಘಟನೆಯ ನಂತರ ರಸ್ತೆಯಲ್ಲಿ ನಡೆದುಕೊಂಡು ಬೆಳಾಲಿಗೆ ಹೋಗುವುದನ್ನು ವ್ಯಕ್ತಿಯೊಬ್ಬರು ನೋಡಿದ್ದಾರೆ. ಈ ಬಗ್ಗೆ ಸಂಶಯಗೊಂಡ ಅವರು ಮನೆಯವರಿಗೆ ಈ ಬಗ್ಗೆ  ಮಾಹಿತಿ ನೀಡಿದಾಗ ಅವರು ಪೋನ್ ಮಾಡಿ ಎಲ್ಲಿದ್ದಿ ಎಂದು ವಿಚಾರಿಸಿದಾಗ ನಾರಾವಿಯಲ್ಲಿ ಇದ್ದೇನೆ ಎಂಬ ಸುಳ್ಳು ಮಾಹಿತಿಯನ್ನು ನೀಡಿದ್ದಾನೆ. ಇದರಿಂದ ಇನ್ನಷ್ಟು ಅನುಮಾನಗೊಂಡ ಮನೆಯವರು ಪೊಲೀಸರಿಗೆ ವಿಚಾರವನ್ನು ತಿಳಿಸಿದಾಗ ಅವರು ಪೋನ್ ಲೊಕೇಶನ್ ಪರೀಕ್ಷಿಸಿದಾಗ ಸಮೀಪದಲ್ಲೇ ಸುತ್ತಾಡಿದ ಮಾಹಿತಿ ಲಭ್ಯವಾಗಿದೆ. ಈ ಮೂಲಕ ಸೋಮಂತಡ್ಕ ಸಮೀಪ ಅವನನ್ನು ವಶಕ್ಕೆ ಪಡೆದುಕೊಂಡಿರುವ ಮಾಹಿತಿ ಲಭ್ಯವಾಗಿದೆ.

ವೃದ್ಧೆಯ ಸಂಬಂಧಿಯಾಗಿದ್ದ
,ಆತ ಆಗಾಗ ಮನೆಗೆ ಬಂದು ಹೋಗುತ್ತಿದ್ದ. ಐಸ್ ಕ್ರೀಮ್ ವಾಹನ ಒಂದರಲ್ಲಿ ಕೆಲಸ ಮಾಡುತ್ತಿದ್ದ ಈತ ಕುಡಿತದ ಚಟವನ್ನೂ ಹೊಂದಿದ್ದ ಎಂದು ತಿಳಿದು ಬಂದಿದೆ.
ಮನೆಯವರ ಚಲನವಲನದ ಬಗ್ಗೆ ಅರಿವಿದ್ದ ಈತ ಮನೆಯವರು ಕೆಲಸಕ್ಕೆ ಹಾಗೂ ಮಕ್ಕಳು ಶಾಲೆಗೆ ಹೋಗಿದ್ದ ಸಮಯ ಕೃತ್ಯ ಎಸಗಿ ನಡೆದುಕೊಂಡು ಬೆಳಾಲಿಗೆ ಹೋಗಿ ಅಲ್ಲಿಂದ ಮನೆಗೆ ಕಡೆ ಹೋಗಿದ್ದಾನೆ ಎಂದು ತಿಳಿದು ಬಂದಿದ್ದು ಅವನನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತಿದ್ದಾರೆ.

error: Content is protected !!