ವರದಿ:ಪ್ರಸಾದ್ ಶೆಟ್ಟಿ ಎಣಿಂಜೆ
ಬೆಳ್ತಂಗಡಿ : ಬೃಹತ್ ಗಾತ್ರದ ಎರಡು ಕಾಳಿಂಗ ಸರ್ಪಗಳನ್ನು ಸುರಕ್ಷಿತವಾಗಿ ಹಿಡಿಯುವ ಮೂಲಕ ಒಟ್ಟು 200 ಕಾಳಿಂಗ ಸರ್ಪಗಳನ್ನು ಸ್ನೇಕ್ ಅಶೋಕ್ ರಕ್ಷಣೆ ಮಾಡಿ ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ.
ಬೆಳ್ತಂಗಡಿ ತಾಲೂಕಿನ ಕರಂಬಾರು ಗ್ರಾಮದ ಉಷಾ ಎಂಬವರ ಮನೆಗೆ ಸುಮಾರು 14 ಅಡಿ ಉದ್ದದ ಕಾಳಿಂಗ ಸರ್ಪ ಬಂದಿದ್ದು ಅವರು ತಕ್ಷಣ ವೇಣೂರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ ಆಳದಂಗಡಿ ಅರಣ್ಯಾಧಿಕಾರಿ ಸುರೇಶ್ ಗೌಡ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಬಂದು ಬೆಳ್ತಂಗಡಿ ಸ್ನೇಕ್ ಅಶೋಕ್ ಲಾಯಿಲ ಇವರಿಗೆ ಮಾಹಿತಿ ನೀಡಿ ಸ್ಥಳಕ್ಕೆ ಕರೆಸಿ ಸುರಕ್ಷಿತವಾಗಿ ಹಿಡಿದು ಚಾರ್ಮಾಡಿ ಘಾಟ್ ಪ್ರದೇಶದ ಕಾಡಿಗೆ ಬಿಡಲು ಅರಣ್ಯ ಇಲಾಖೆ ವಾಹನದಲ್ಲಿ ಹೋಗುತ್ತಿದ್ದಾಗ ಲಾಯಿಲ ಗ್ರಾಮದ ಕಾಶಿಬೆಟ್ಟು ಪ್ರಗತಿನಗರದ ವೆಂಕಪ್ಪ ಎಂಬವರ ಮನೆಗೆ ಹೋಗುವ ರಸ್ತೆಯ ಪಕ್ಕದಲ್ಲಿ ಹೆಬ್ಬಾವನ್ನು ನುಂಗಿದ್ದ ಸುಮಾರು 12 ಅಡಿ ಉದ್ದದ ಕಾಳಿಂಗ ಸರ್ಪ ಇರುವ ಬಗ್ಗೆ ಬಂದ್ದ ಮಾಹಿತಿಯಂತೆ ಸ್ನೇಕ್ ಅಶೋಕ್ ಅವರು ಕಾಶಿಬೆಟ್ಟಿಗೆ ತೆರಳಿ ಕಾಳಿಂಗ ಸರ್ಪವನ್ನು ಹಿಡಿದು ಎರಡು ಕಾಳಿಂಗ ಸರ್ಪವನ್ನು ಚಾರ್ಮಾಡಿ ಘಾಟ್ ಪ್ರದೇಶಕ್ಕೆ ಬಿಟ್ಟಿದ್ದಾರೆ.
ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ನಿನ್ನಿಕಲ್ಲು ಆನಂದ ಪೂಜಾರಿ ಮತ್ತು ಕುಸುಮ ದಂಪತಿಯ ಎರಡನೇ ಮಗನಾದ ಅಶೋಕ್ ಲಾಯಿಲ ಪಿಯುಸಿ ವರೆಗೆ ಉಜಿರೆ ಎಸ್.ಡಿ.ಎಂ ಕಾಲೇಜಿನಲ್ಲಿ ವಿಧ್ಯಾಭ್ಯಾಸ ಮಾಡಿದ ಬಳಿಕ ಉಜಿರೆಯಲ್ಲಿ ಎರಡು ವರ್ಷಗಳ ಕಾಲ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು ನಂತರ ಪ್ರಸಿದ್ಧ ಉರಗ ಪ್ರೇಮಿ ಉಜಿರೆ ಸ್ನೇಕ್ ಜೋಯ್ ಜೊತೆ ಶಿಷ್ಯನಾಗಿ 2010 ರಿಂದ ಹಾವಿನ ರಕ್ಷಣೆಯಲ್ಲಿ ತೊಡಗಿಸಿಕೊಂಡರು. ಇವರಿಗೆ 2018 ರಲ್ಲಿ ಲಾಯಿಲ ರಾಘವೇಂದ್ರ ನಗರದ ಮನೆಯೊಂದರಲ್ಲಿ ನಾಗರಹಾವು ರಕ್ಷಿಸುವ ವೇಳೆ ಕಾಲಿಗೆ ಹಾವು ಕಚ್ಚಿ ಆಸ್ಪತ್ರೆ ದಾಖಲಾಗಿ ಗುಣಮುಖರಾದ ನಂತರ ಹಾವಿನ ರಕ್ಷಣೆಯಲ್ಲಿ ತೊಡಗಿಕೊಂಡರು. ಕಳೆದ 12 ವರ್ಷಗಳಿಂದ ಸುಮಾರು 8 ಸಾವಿರಕ್ಕಿಂತಲೂ ಅಧಿಕ ವಿವಿಧ ರೀತಿ ಹಾವುಗಳನ್ನು ರಕ್ಷಣೆ ಮಾಡಿದ್ದಾರೆ.ಇವರ ಮಾನವೀಯ ಸೇವೆಗಳನ್ನು ಗುರುತಿಸಿ ಹಲವು ಸಂಘ ಸಂಸ್ಥೆಗಳಿಂದ ಸನ್ಮಾನ ,ಪ್ರಶಸ್ತಿಗಳು ಲಭಿಸಿದ್ದು , ಶಾಲಾ ಕಾಲೇಜುಗಳಿಗೆ ಹಾವಿನ ಬಗ್ಗೆ ಮಾಹಿತಿಗಳನ್ನೂ ನೀಡುತ್ತಾರೆ.