ಬೆಳ್ತಂಗಡಿ; ಪೆರಿಯಶಾಂತಿ ಧರ್ಮಸ್ಥಳ ರಸ್ತೆಯ ನಿಡ್ಲೆ ಸಮೀಪದ ಖಾಸಗಿ ಹೋಟೆಲಿನಲ್ಲಿ ನಡೆದ ಕಾರ್ಯಕ್ರಮಕ್ಕಾಗಿ ರಾಜ್ಯ ಹೆದ್ದಾರಿಯಲ್ಲೇ ಅಡ್ಡದಿಡ್ಡಿ ವಾಹನ ನಿಲುಗಡೆ ಮಾಡಿದ್ದರಿಂದ ಗಂಟೆಗಟ್ಟಲೇ ಟ್ರಾಫಿಕ್ ಜಾಮ್ ಆದ ಘಟನೆ ಜುಲೈ 15 ರಂದು ನಡೆದಿದೆ. ಪುಣ್ಯಕ್ಷೇತ್ರ ಧರ್ಮಸ್ಥಳಕ್ಜೆ ಬೆಂಗಳೂರು ಸೇರಿದಂತೆ ನಾನಾ ಭಾಗಗಳಿಂದ ದಿನಂಪ್ರತಿ ಅತೀ ಹೆಚ್ಚು ಯಾತ್ರಾರ್ಥಿಗಳು ಹಾಗೂ ಸಾವಿರಾರೂ ವಾಹನಗಳು ಸಂಚಾರಿಸುವ ಪೆರಿಯ ಶಾಂತಿ ಧರ್ಮಸ್ಥಳ ರಾಜ್ಯ ಹೆದ್ದಾರಿಯ ನಿಡ್ಲೆ ಗ್ರಾಮದ ಕುದ್ರಾಯ ಎಂಬಲ್ಲಿ ಇರುವ ಖಾಸಗಿ ಹೋಟೆಲೊಂದರಲ್ಲಿ ಶುಕ್ರವಾರ ಜು 15 ರಂದು ಕಾರ್ಯಕ್ರಮ ಆಯೋಜಿಸಲಾಗಿತ್ತು.
ಈ ಕಾರ್ಯಕ್ರಮಕ್ಕಾಗಿ ಸರಿಯಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲದೆ ಹೆದ್ದಾರಿಯ ಇಕ್ಕೆಲಗಳಲ್ಲಿ ವಾಹನ ನಿಲುಗಡೆಗೊಳಸಿದ್ದರಿಂದ ವಾಹನ ಸಂಚಾರಕ್ಕೆ ಅಡಚಣೆಯಾಗಿದೆ.ಸರ್ಕಾರಿ ಬಸ್ಸುಗಳು ಸೇರಿದಂತೆ ವಾಹನಗಳು ಸಾಲುಗಟ್ಟಿ ಗಂಟೆಗಟ್ಟಲೇ ನಿಲ್ಲಬೇಕಾಯಿತು. ಅದಲ್ಲದೇ ಭಾರೀ ಮಳೆಯಿಂದ ಅಲ್ಲಲ್ಲಿ ಭೂಕುಸಿತ ,ರಸ್ತೆ ಕುಸಿತ ,ಮರಬೀಳುವಂತಹ ಅನೇಕ ಹಾನಿಗಳು ಸಂಭವಿಸುವ ಆತಂಕದಲ್ಲಿದ್ದ ವಾಹನ ಸವಾರರು ಈ ಟ್ರಾಫಿಕ್ ಜಾಮ್ ನಿಂದ ಮತ್ತಷ್ಟು ತೊಂದರೆ ಅನುಭವಿಸುವಂತಾಯಿತು. ದಿನನಿತ್ಯ ಸಾವಿರಾರು ವಾಹನಗಳು ಓಡಾಡುವ ಇಂತಹ ರಸ್ತೆಗಳಲ್ಲಿ ಕಾರ್ಯಕ್ರಮದ ನೆಪದಲ್ಲಿ ವಾಹನ ನಿಲುಗಡೆಗೊಳಿಸಿ ಸಾರ್ವಜನಿಕರಿಗೆ ತೊಂದರೆ ನೀಡುವುದು ಎಷ್ಟು ಸರಿ ಎಂದು ಸಾರ್ವಜನಿಕರು ಯಾತ್ರಾರ್ಥಿಗಳು ಹೋಟೇಲ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಅದ್ದರಿಂದ ಮುಂದೆ ಇಂತಹ ತೊಂದರೆ ಆಗದಂತೆ ಈ ಬಗ್ಗೆ ಸರಿಯಾದ ಪಾರ್ಕಿಂಗ್ ವ್ಯವಸ್ಥೆಗಳನ್ನು ಮಾಡುವಂತೆ ಅಧಿಕಾರಿಗಳು ಅವರಿಗೆ ನೋಟೀಸ್ ನೀಡಿ ಎಚ್ಚರಿಕೆ ನೀಡಬೇಕು ಎಂಬುವುದು ಸಾರ್ವಜನಿಕರ ಆಗ್ರಹವಾಗಿದೆ.