ರಾಜ್ಯಸಭೆ ಅಂದರೆ ಹಿರಿಯರ ಸಭೆ : ರಾಷ್ಟ್ರ ಮಟ್ಟದಲ್ಲಿ ಪಕ್ಷಾತೀತವಾಗಿ ಸೇವೆಯ ಅವಕಾಶ: ಡಾ. ಡಿ. ವೀರೇಂದ್ರ ಹೆಗ್ಗಡೆ: ರಾಜ್ಯಸಭೆಗೆ ನಾಮನಿರ್ದೇಶನಗೊಂಡ ವೀರೇಂದ್ರ ಹೆಗ್ಗಡೆಯವರಿಗೆ ಭವ್ಯ ಸ್ವಾಗತ

 

 

ಬೆಳ್ತಂಗಡಿ : ರಾಜ್ಯಸಭೆ ಅಂದರೆ “ಹಿರಿಯರ ಸಭೆ”. ಶ್ರೀ ಮಂಜುನಾಥ ಸ್ವಾಮಿಯ ವಿಶೇಷ ಅನುಗ್ರಹದಿಂದ ತನಗೆ ರಾಷ್ಟ್ರಮಟ್ಟದಲ್ಲಿ ಪಕ್ಷಾತೀತವಾಗಿ ಸೇವೆ ಮಾಡುವ ಸುವರ್ಣಾವಕಾಶ ದೊರಕಿದೆ. ಇದು ಧರ್ಮಸ್ಥಳಕ್ಕೆ, ತನಗೆ, ಹಾಗೂ ತಮ್ಮ ಪೂರ್ವಜರಿಗೆ ಸಂದ ಗೌರವವಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಹೇಳಿದರು.

 

 

ರಾಜ್ಯಸಭೆಗೆ ನಾಮನಿರ್ದೇಶನಗೊಂಡ ಬಳಿಕ ಪ್ರಥಮವಾಗಿ ಶನಿವಾರ ಧರ್ಮಸ್ಥಳಕ್ಕೆ ಬಂದ ಅವರನ್ನು ಚಾರ್ಮಾಡಿಯಲ್ಲಿ ತಾಲೂಕಿನ ಜನತೆಯ ಪರವಾಗಿ ಶಾಸಕ ಹರೀಶ್ ಪೂಂಜ ಭಕ್ತಿಪೂರ್ವಕ ಸ್ವಾಗತ ಕೋರಿದರು.

 

 

 

ಬಳಿಕ ವಾಹನ ಜಾಥಾದಲ್ಲಿ ಭವ್ಯ ಮೆರವಣಿಗೆಯಲ್ಲಿ ಅವರನ್ನು ಧರ್ಮಸ್ಥಳಕ್ಕೆ ಸ್ವಾಗತಿಸಲಾಯಿತು.
ಹೇಮಾವತಿ ವೀ. ಹೆಗ್ಗಡೆಯವರು ಸಾಂಪ್ರದಾಯಿಕ ವಾಗಿ ಆರತಿ ಬೆಳಗಿ ಬರಮಾಡಿಕೊಂಡರು  ಡಿ. ಹರ್ಷೇಂದ್ರ ಕುಮಾರ್ ಹಾಗೂ ಕುಟುಂಬದವರು, ಸಿಬ್ಬಂದಿ ಮತ್ತು ಅಭಿಮಾನಿಗಳು ಭಕ್ತಿಪೂರ್ವಕವಾಗಿ ಸ್ವಾಗತಿಸಿದರು.

 

 

ಬೀಡಿನಲ್ಲಿ ನಡೆದ ಸರಳ ಸಮಾರಂಭದಲ್ಲಿ ಶಾಸಕ ಹರೀಶ್ ಪೂಂಜ ಸ್ವಾಗತಿಸಿದರು.
ಪ್ರಧಾನಿ ಮೋದಿಯವರು ಧರ್ಮಸ್ಥಳದ ಎಲ್ಲಾ ಸೇವಾ ಕಾರ್ಯಗಳನ್ನು ಸೂಕ್ಷ್ಮವಾಗಿ ಗಮನಿಸಿ ದೂರವಾಣಿ ಮೂಲಕ ಮಾತನಾಡಿ ತನಗೆ ಈ ಅವಕಾಶ ನೀಡಿದ್ದಾರೆ. ತಕ್ಷಣ ನಾನು ಅದನ್ನು ಸ್ವೀಕರಿಸಿದೆ.

 

 

ಪ್ರಸ್ತುತ ರಾಜ್ಯದಲ್ಲಿರುವ ಧರ್ಮಸ್ಥಳದ ಎಲ್ಲಾ ಸೇವಾ ಕಾರ್ಯಗಳನ್ನು ರಾಷ್ಟ್ರಮಟ್ಟದಲ್ಲಿ ವಿಸ್ತರಿಸಲಾಗುವುದು. ತನ್ನ ಆಯುಷ್ಯದ ಪ್ರತಿ ಕ್ಷಣವನ್ನೂ ದೇಶ ಸೇವೆಗಾಗಿ ವಿನಿಯೋಗಿಸುತ್ತೇನೆ. ಎಲ್ಲರೂ ದೇಶದ ಪ್ರಗತಿಗಾಗಿ ಪ್ರಾರ್ಥಿಸಿ, ಶ್ರಮಿಸೋಣ ಎಂದು ಹೆಗ್ಗಡೆಯವರು ಹೇಳಿದರು.

ಹೇಮಾವತಿ ವೀ. ಹೆಗ್ಗಡೆಯವರು, ಡಿ. ಹರ್ಷೇಂದ್ರ ಕುಮಾರ್, ಕಿಯೊನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ, ವಿಧಾನಪರಿಷತ್ ಸದಸ್ಯ ಕೆ. ಪ್ರತಾಪಸಿಂಹ ನಾಯಕ್ ಹಾಗೂ ಇತರರು ಉಪಸ್ಥಿತರಿದ್ದರು.

error: Content is protected !!