ಹಿರಿಯ ಅಂಬೇಡ್ಕರ್ ವಾದಿ,ಚಿಂತಕ ಪಿ.ಡೀಕಯ್ಯ ನಿಧನ:

 

 

 

ಬೆಳ್ತಂಗಡಿ: ಸಾಮಾಜಿಕ ಹೋರಾಟಗಾರ, ಚಿಂತಕ ಪಿ ಡೀಕಯ್ಯ (64)  ನಿಧನಹೊಂದಿದ್ದಾರೆ.ಮೆದುಳಿನಲ್ಲಿ ತೀವ್ರ ರಕ್ತಸ್ರಾವವಾಗಿ  ಜುಲೈ06 ರಂದು  ಮಣಿಪಾಲದ ಕೆ ಎಂ ಸಿ ಆಸ್ಪತ್ರೆಗೆ ದಾಖಲಾಗಿದ್ದ ಅವರು, ಜುಲೈ 08 ರಂದು  ರಾತ್ರಿ  ನಿಧನಹೊಂದಿದ್ದಾರೆ.ಕುಟುಂಬದ ಸದಸ್ಯರ ಆಶಯದಂತೆ ಡೀಕಯ್ಯ ಅವರ ಅಂಗಾಂಗಗಳನ್ನು ನಿಯಮಾನುಸಾರ ದಾನಮಾಡಲಾಯಿತು.

ಈ ಹಿಂದೆ ಬಿ ಎಸ್ ಎನ್ ಎಲ್ ನಲ್ಲಿ ಉದ್ಯೋಗಿಯಾಗಿ ಸೇವೆ ಸಲ್ಲಿಸುತ್ತಿದ್ದ ಅವರು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು ನಾಲ್ಕು ದಶಕಗಳ ಹಿಂದೆ, ಎಂಬತ್ತರ ದಶಕದಲ್ಲಿ, ದಲಿತ ಚಳುವಳಿ ಕಟ್ಟಿ ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.1996ರಲ್ಲಿ ಕವಯತ್ರಿ ಅತ್ರಾಡಿ ಅಮೃತಾ ಶೆಟ್ಟಿ ಅವರನ್ನು ಭೌದ್ಧ ಸಂಪ್ರದಾಯದಂತೆ ವಿವಾಹವಾಗಿದ್ದ ಅವರು, ಸಮಾಜ ಪರಿವರ್ತನ ಚಳುವಳಿಯಲ್ಲಿ ಸಕ್ರಿಯ ರಾಗಿದ್ದರು.ಮೃತರ ಅಂತ್ಯ ಸಂಸ್ಕಾರ  ಜುಲೈ 09 ಇಂದು  ಮಧ್ಯಾಹ್ನ ನಂತರ   ಅವರ ಜನ್ಮ ಸ್ಥಳವಾದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಪೊಯ್ಯ (ಪದ್ಮುಂಜಾ) ದಲ್ಲಿ ನಡೆಯಲಿದೆ.ಡೀಕಯ್ಯ ಅವರ ನಿಧನಕ್ಕೆ ಹಿರಿಯ ಚಿಂತಕರಾದ ಪ್ರೊ. ವಲೇರಿಯನ್ ರಾಡ್ರಿಗಸ್, ಪ್ರೊ. ಪುರುಷೋತ್ತಮ ಬಿಳಿಮಲೆ, ಕೊಳ್ಳೇಗಾಲ ಶಾಸಕ ಎನ್ ಮಹೇಶ್, ಆರ್ ಪಿ ಐ ಮತ್ತು ಸಮತಾ ಸೈನಿಕ ದಳದ ರಾಜ್ಯಾಧ್ಯಕ್ಷ ಡಾ. ಎಂ ವೆಂಕಟಸ್ವಾಮಿ, ಬಿ ಎಸ್ ಪಿ ರಾಜ್ಯ ಉಸ್ತುವಾರಿ ಎಂ ಗೋಪಿನಾಥ್, ಡಿ ವೈ ಎಫ್ ಐ ರಾಜ್ಯಧ್ಯಕ್ಷ ಮುನೀರ್ ಕಾಟಿಪಳ್ಳ, ಕಾರ್ಮಿಕ ಮುಖಂಡ ಬಿ ಎಂ ಭಟ್, ರೈತ ಮುಖಂಡ ಯಾದವ ಶೆಟ್ಟಿ, ಸುಳ್ಯ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ಚನಿಯ ಕಲ್ತಡ್ಕ, ಬ್ಯಾರಿ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಬಿ ಎಂ ಹನೀಫ್ ಸೇರಿದಂತೆ ಹಲವಾರು ಚಿಂತಕರು ಮತ್ತು ಸಾಮಾಜಿಕ ಕಾರ್ಯಕರ್ತರು ಸಂತಾಪ ಸೂಚಿಸಿದ್ದಾರೆ.

error: Content is protected !!