ಬೆಳ್ತಂಗಡಿ : ಚಿಕ್ಕಂದಿನಿಂದಲೇ ಮಕ್ಕಳ ನೈತಿಕತೆ ಕುಸಿಯದಂತೆ ನೈತಿಕ ಶಿಕ್ಷಣ ನೀಡುವುದು ಅತ್ಯಗತ್ಯ. ಧರ್ಮಸ್ಥಳದ ಶಾಂತಿವನ ಟ್ರಸ್ಟ್ ಹಲವಾರು ವರ್ಷಗಳಿಂದ ಪುಸ್ತಕಗಳನ್ನು ಪ್ರಕಟಿಸಿ, ಮಕ್ಕಳಲ್ಲಿ ನೈತಿಕ ಶಿಕ್ಷಣ ನೀಡುವ ಕೆಲಸ ಮಾಡುತ್ತಿದೆ. ಪರಸ್ಪರ ಪ್ರೀತಿ-ವಿಶ್ವಾಸದಿಂದ, ಕೃತಜ್ಞತೆ ಹಾಗೂ ಗೌರವದಿಂದ ಬದುಕುವ ಸಭ್ಯ, ಸುಸಂಸ್ಕೃತ ನಾಗರಿಕತೆ ದೇಶದ ಅಮೂಲ್ಯ ಮಾನವ ಸಂಪನ್ಮೂಲವಾಗಿದೆ ಎಂದು ಬೆಂಗಳೂರಿನ ಹಿರಿಯ ಸಾಹಿತಿ, ನಟ, ನಿರ್ದೇಶಕ ಎಸ್.ಎನ್. ಸೇತುರಾಮ್ ಹೇಳಿದರು.
ಅವರು ಸೋಮವಾರ ಧರ್ಮಸ್ಥಳದಲ್ಲಿ ಶಾಂತಿವನ ಟ್ರಸ್ಟ್ ಆಶ್ರಯದಲ್ಲಿ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯಲ್ಲಿ ಪ್ರಕಟಿಸಲಾದ 28ನೇ ವರ್ಷದ ಜ್ಞಾನ ವಿಕಾಸ ಮತ್ತು ಜ್ಞಾನ ಪ್ರಕಾಶ ಪುಸ್ತಕಗಳನ್ನು ಲೋಕಾರ್ಪಣೆ ಹಾಗೂ 19ನೇ ವರ್ಷದ ರಾಜ್ಯ ಮಟ್ಟದ ಅಂಚೆ-ಕುಂಚ ವಿಜೇತರಿಗೆ ಪುರಸ್ಕಾರ ಸಮಾರಂಭದಲ್ಲಿ ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದರು.
ಧರ್ಮ ಮತ್ತು ನ್ಯಾಯ, ರೀತಿ ಮತ್ತು ನೀತಿ ವಿಭಿನ್ನವಲ್ಲ. ಎಲ್ಲವೂ ಒಂದೇ ಆಗಿದೆ. ಆದರೆ ಕಾನೂನಿನಲ್ಲಿ ಧರ್ಮ ಮತ್ತು ನ್ಯಾಯ, ರೀತಿ ಮತ್ತು ನೀತಿ ಬೇರೆ ಬೇರೆಯಾಗಿದ್ದು, ಅನೈತಿಕತೆ ಅಪರಾಧ ಅಲ್ಲ ಎಂಬ ಭಾವನೆ ಈಗ ಮೂಡಿ ಬಂದಿದೆ. ಇಂದು ಎಲ್ಲೆಲ್ಲೂ ನೈತಿಕತೆ, ಸತ್ಯ, ಸಭ್ಯತೆ ಕುಸಿದಿದೆ. ಬದುಕುವುದು ನಮ್ಮ ಹಕ್ಕಲ್ಲ. ಎಲ್ಲರೊಂದಿಗೆ ಪ್ರೀತಿ ವಿಶ್ವಾಸದಿಂದ, ಪರಸ್ಪರ ಹೊಂದಿಕೊಂಡು ಗೌರವಪೂರ್ವಕವಾಗಿ ಕೃತಜ್ಞತೆಯೊಂದಿಗೆ ಸಾರ್ಥಕ ಜೀವನ ಮಾಡುವುದು ನಮ್ಮ ಉದ್ದೇಶವಾಗಬೇಕು. ಧರ್ಮಕ್ಷೇತ್ರಗಳಿಗೆ ಕೃತಜ್ಞತೆ ಸಲ್ಲಿಸಬೇಕು. ಇಂತಹ ನೈತಿಕ ಮೌಲ್ಯಾಧಾರಿತ ಪುಸ್ತಕಗಳಿಂದ ಸಭ್ಯ, ಸುಸಂಸ್ಕೃತ ನಾಗರಿಕರು ಮೂಡಿ ಬರಲು ಸಾಧ್ಯ. ಸತ್ಯ, ಧರ್ಮ, ನ್ಯಾಯ, ನೀತಿ ನೆಲೆ ನಿಂತಿರುವ ಪವಿತ್ರ ಕ್ಷೇತ್ರ ಧರ್ಮಸ್ಥಳವಾಗಿದೆ. ಇಲ್ಲಿ ಸ್ವಚ್ಛತೆ, ಶಿಸ್ತು, ಸಂಯಮ, ಅತಿಥಿ ಸತ್ಕಾರ, ಸೇವೆ, ಕರುಣೆ, ಅನುಕಂಪ ಮೊದಲಾದ ಮಾನವೀಯ ಮೌಲ್ಯಗಳು ವಿಶ್ವಮಾನ್ಯವಾಗಿವೆ. ಧರ್ಮಾಧಿಕಾರಿ ಡಾ. ಹೆಗ್ಗಡೆಯವರ ಯೋಜನೆಗಳು ಎಲ್ಲರಿಗೂ ಮಾದರಿಯಾಗಿದೆ ಎಂದರು.
ಅಂಚೆ-ಕುಂಚ ಸ್ಪರ್ಧಾ ವಿಜೇತರಿಗೆ ಪುರಸ್ಕಾರ ನೀಡಿ ಅಭಿನಂದಿಸಿದ ಚಲನಚಿತ್ರ ನಟ ಮಾ. ಆನಂದ್ ಮಾತನಾಡಿ, ಧರ್ಮಸ್ಥಳದಂತಹ ಪವಿತ್ರ ಕ್ಷೇತ್ರಗಳ ದರ್ಶನದಿಂದ ನಮ್ಮ ವರ್ತನೆಯಲ್ಲಿ ಪರಿವರ್ತನೆಯಾಗಬೇಕು. ಈ ವರೆಗೆ ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಂಡು ಮುಂದೆ ಸಾರ್ಥಕ ಜೀವನ ನಡೆಸುವಂತಾಗಬೇಕು. ಯುವಜನತೆ ಸಾಮಾಜಿಕ ಜಾಲತಾಣಗಳನ್ನು ಎಚ್ಚರಿಕೆಯಿಂದ ಬಳಸಬೇಕು. ನಾಡಿನ ಧಾರ್ಮಿಕ ಕ್ಷೇತ್ರಗಳಿಗೆ ಬರುವ ಯಾತ್ರಿಕರು ಸ್ವಚ್ಛತೆಯ ಕಡೆಗೆ ಗಮನ ಹರಿಸಬೇಕು. ಪವಿತ್ರ ನದಿಗಳನ್ನು ಕಲುಷಿತಗೊಳಿಸಬಾರದು. ಮೂಢನಂಬಿಕೆಯ ಹಿನ್ನಲೆಯಲ್ಲಿ ನದಿಗಳಲ್ಲಿ ಬಟ್ಟೆ ವಿಸರ್ಜನೆ ಮಾಡಬಾರದು ಎಂದು ಅವರು ವಿನಂತಿಸಿದರು.
ಅಧ್ಯಕ್ಷತೆ ವಹಿಸಿದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ವಿದ್ಯಾರ್ಥಿಗಳು ಪುಸ್ತಕ ಓದುವ ಹವ್ಯಾಸ ಬೆಳೆಸಿ, ಜ್ಞಾನ ಸಂಗ್ರಹದೊಂದಿಗೆ ವ್ಯಕ್ತಿತ್ವದ ಬೆಳವಣಿಗೆ ಹಾಗೂ ಪ್ರತಿಭಾ ವಿಕಸನ ಮಾಡಿಕೊಳ್ಳಬೇಕು. ಮಕ್ಕಳು ದಾರಿ ತಪ್ಪದಂತೆ, ಮಾದಕ ವಸ್ತುಗಳಿಗೆ ಬಲಿಯಾಗದಂತೆ ಎಚ್ಚರ ವಹಿಸಬೇಕು. ಭವಿಷ್ಯ ನಾಶ ಮಾಡುವ ವಿರುದ್ಧ ನಾವು ಹೋರಾಡಬೇಕು. ಮಕ್ಕಳಿಗೆ ಚಿಕ್ಕಂದಿನಿಂದಲೇ ನೈತಿಕ ಶಿಕ್ಷಣ ನೀಡಬೇಕು ಎಂದ ಅವರು, ಧರ್ಮಸ್ಥಳಕ್ಕೆ ಸಂಬಂಧಿಸಿದಂತೆ ಮಾತು ಬಿಡ ಮಂಜುನಾಥ ಎಂಬ ಮಾತು ಪ್ರಚಲಿತವಿದೆ. ಇಲ್ಲಿ ಮಾತೇ ಮಾಣಿಕ್ಯ. ಸತ್ಯ, ಧರ್ಮ, ನ್ಯಾಯ, ನೀತಿಯೊಂದಿಗೆ ಎಲ್ಲರೂ ಸಾರ್ಥಕ ಜೀವನ ನಡೆಸಬೇಕು ಎಂದು ಅವರು ಸಲಹೆ ನೀಡಿದರು.
ಶಾಂತಿವನ ಟ್ರಸ್ಟ್ ಟ್ರಸ್ಟಿಗಳಾದ ಹೇಮಾವತಿ ವಿ. ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಶಿಕ್ಷಣ ಇಲಾಖೆಯ ಸಹನಿರ್ದೇಶಕ ಎಸ್.ಜಿ. ನಾಗೇಶ್, ಉಪಸ್ಥಿತರಿದ್ದರು.
ನಮ್ಮಮ್ಮ ಸೂಪರ್ ಸ್ಟಾರ್ ಖ್ಯಾತಿಯ ಬಾಲ ಪ್ರತಿಭೆ ವಂಶಿಕ ಅಂಜನೀ ಕಶ್ಯಪ್‌ನೊಂದಿಗೆ ಮಕ್ಕಳ ಸಂವಾದ ನಡೆಯಿತು. ವಿಶೇಷ ಆಕರ್ಷಣೆಯಾಗಿ ಕಲಾವಿದ ಬಂಟ್ವಾಳದ ಮುರಳೀಧರ್ ಆಚಾರ್, ಉಡುಪಿಯ ವಿದುಷಿ ಸಂಗೀತಾ ಬಾಲಚಂದ್ರ ಹಾಗೂ ಪುತ್ತೂರು ನಾಟ್ಯರಂಗದ ವಿದುಷಿ ಮಂಜುಳಾ ಸುಬ್ರಹ್ಮಣ್ಯ ಮತ್ತು ತಂಡದಿಂದ ಕುಂಚ-ಗಾನ-ನೃತ್ಯ ವೈಭವ ಪ್ರದರ್ಶಿಲ್ಪಟ್ಟಿತು.
ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ನಿರ್ದೇಶಕ ಡಾ. ಐ. ಶಶಿಕಾಂತ್ ಜೈನ್ ಸ್ವಾಗತಿಸಿದರು. ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಬಿ. ಸೀತಾರಾಮ ತೋಳ್ಪಾಡಿತ್ತಾಯ ಧನ್ಯವಾದವನ್ನಿತ್ತರು. ಯೋಗ ಸಂಘಟಕ ಚೆನ್ನಕೇಶವ ವಿಜೇತರ ಪಟ್ಟಿ ವಾಚಿಸಿದರು. ಕಾರ್ಕಳದ ಗಣೇಶ್ ಕಾರ್ಯಕ್ರಮ ನಿರ್ವಹಿಸಿದರು.
ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯಡಿ 1993ರಿಂದ 2021ರವರೆಗೆ ಅಂದರೆ 27 ವರ್ಷಗಳಲ್ಲಿ ನೈತಿಕ ಮೌಲ್ಯಾಧಾರಿತ ಪುಸ್ತಕಗಳು ಪ್ರಕಟಗೊಂಡಿದೆ. 21,16,00,000 ಪ್ರತಿಗಳು ದ.ಕ., ಉಡುಪಿ, ಉತ್ತರ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ಶಾಲೆಗಳಿಗೆ ವಿತರಣೆಯಾಗಿದೆ. ಇದೀಗ 2022ರಲ್ಲಿ 28ನೇ ವರ್ಷದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗಾಗಿ ’ಜ್ಞಾನ ವಿಕಾಸ’ ಮತ್ತು ಪ್ರೌಢ ಶಾಲಾ ವಿದ್ಯಾರ್ಥಿಗಳಿಗಾಗಿ ’ಜ್ಞಾನ ಪ್ರಕಾಶ’ ನೈತಿಕ ಮೌಲ್ಯಾಧಾರಿತ ಒಂದು ಲಕ್ಷ ಪುಸ್ತಕಗಳ ಲೋಕಾರ್ಪಣೆ ಮಾಡಲಾಯಿತು.
ಕಳೆದ 18 ವರ್ಷಗಳಿಂದ ರಾಜ್ಯ ಮಟ್ಟದ ಅಂಚೆ-ಕುಂಚ ಚಿತ್ರಕಲಾ ಸ್ಪರ್ಧೆಗಳು ನಡೆದಿದ್ದು, 2,22,718 ಸ್ಪರ್ಧಾರ್ಥಿಗಳು ಭಾಗವಹಿಸಿದ್ದಾರೆ. 2021-22ನೇ ವರ್ಷದಲ್ಲಿ ’ಕುಡಿತದ ಕೆಡುಕು’ ವಿಷಯಾಧಾರಿತ ಅಂಚೆ-ಕುಂಚ ಸ್ಪರ್ಧೆಯಲ್ಲಿ 15,200 ಮಂದಿ ಸ್ಪರ್ಧಾರ್ಥಿಗಳು ಭಾಗವಹಿಸಿದ್ದರು. ಪ್ರಾಥಮಿಕ, ಪ್ರೌಢ, ಕಾಲೇಜು ಹಾಗೂ ಸಾರ್ವಜನಿಕ ಒಟ್ಟು 4 ವಿಭಾಗಗಳಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನಗಳಲ್ಲದೆ ಪ್ರತಿ ವಿಭಾಗಗಳಿಂದ 25 ಪ್ರೋತ್ಸಾಹಕರ ಬಹುಮಾನ ನೀಡಲಾಗಿದೆ. ಈ ವರೆಗೆ ಒಟ್ಟು 2,37,938 ಸ್ಪರ್ಧಿಗಳು ರಾಜ್ಯಮಟ್ಟದಲ್ಲಿ ಭಾಗವಹಿಸಿದ್ದಾರೆ.
19ನೇ ರಾಜ್ಯ ಮಟ್ಟದ ಅಂಚೆ-ಕುಂಚ ಸ್ಪರ್ಧೆಯ ವಿಜೇತರು
ಪ್ರಾಥಮಿಕ ಶಾಲಾ ವಿಭಾಗ: ಉರ್ವ ಕೆನರಾ ಹಿ.ಪ್ರಾ.
ಅನ್ವಿತ್ ಹರೀಶ್(ಪ್ರ)., ಸುಳ್ಯ ರೋಟರಿ ಆಂಗ್ಲ ಮಾಧ್ಯಮ ಶಾಲೆಯ ಸಾನ್ವಿ ಅಟ್ಟೂರು(ದ್ವಿ)., ಸಕಲೇಶಪುರ ಜಿ.ಎಸ್.ಎಸ್. ಪಬ್ಲಿಕ್ ಶಾಲೆಯ ಮೋಶ್ರಿತ್ ಎಸ್.(ತೃ).
ಪ್ರೌಢ ಶಾಲಾ ವಿಭಾಗ : ಉಡುಪಿ ವಿದ್ಯೋದಯ ಪಬ್ಲಿಕ್ ಸ್ಕೂಲ್ ಕೆ. ಪ್ರತೀಷ್ಠಾ ಶೇಟ್(ಪ್ರ)., ಕಟಪಾಡಿ ಎಸ್.ವಿ.ಎಸ್. ಆಂಗ್ಲ ಮಾಧ್ಯಮಾ ಶಾಲೆಯ ಸಂದೀಪ್ ಆರ್.ಪೈ(ದ್ವಿ)., ಕಾರ್ಕಳ ಬೆಳ್ಮಣ್ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲೆಯ ಶರಣ್ಯ ತಂತ್ರಿ(ತೃ).
ಕಾಲೇಜು ವಿಭಾಗ: ಅಳಿಕೆ ಶ್ರೀ ಸತ್ಯಸಾಯಿ ಪ.ಪೂ. ಕಾಲೇಜಿನ ಅಖಿಲೇಶ್ ನಾಗೇಶ್ ನಾಯ್ಕ್(ಪ್ರ)., ಕಾರವಾರ ಟಾಗೂರ ಸ್ಕೂಲ್ ಆಫ್ ಆರ್ಟ್‌ನ ಲಕ್ಷ್ಮೀಕಾಂತ್ ವಾಸುದೇವ ನಾಯ್ಕ್(ದ್ವಿ), ಅಂಕೋಲಾದ ಪ್ರಸಾದ ಶ್ರೀಧರ ಮೇತ್ರಿ(ತೃ).
ಸಾರ್ವಜನಿಕ ವಿಭಾಗ : ಮಂಗಳೂರು ಕೊಂಚಾಡಿ ಗುರುನಗರದ ಬಿ.ಕೆ. ಮಾಧವ ರಾವ್(ಪ್ರ), ಕಾರ್ಕಳ ಅಜೆಕಾರು ಪ್ರಿಯಾ ಶೆಟ್ಟಿ(ದ್ವಿ), ಹೊಸನಗರ ನಾಗರಕೊಡಿಗೆ ತ್ರಿಣಿವೆಯ ಪೂರ್ಣಿಮಾ ಜಿ.ಎಸ್.(ತೃ).
ವಿಶೇಷ ಪುರಸ್ಕಾರ: ಅಂಕೋಲಾ ಆವರ್ಸಾದ ದಿನೇಶ್ ದೇವರಾಯ ಮೇತ್ರಿ