ಲಲನೆಯರಿಗಾಗಿ 6 ಕೋಟಿ ಕಳೆದುಕೊಂಡ ಬ್ಯಾಂಕ್ ಮ್ಯಾನೇಜರ್ : ಸಾಲ ಮಾಡಿ ಯುವತಿಯರ ಖಾತೆಗೆ ಹಣ ವರ್ಗಾವಣೆ

 

 

 

ಬೆಂಗಳೂರು: ಸಹೋದ್ಯೋಗಿ ಹೆಸರಿನಲ್ಲಿ‌ 6 ಕೋಟಿ ರೂ ಸಾಲ ಮಾಡಿ ವಂಚನೆ ಎಸಗಿ ಬಂಧನಕ್ಕೊಳಗಾಗಿದ್ದ ಇಂಡಿಯನ್​ ಬ್ಯಾಂಕ್‌ ಮ್ಯಾನೇಜರ್​ನ ವಿಚಾರಣೆ ವೇಳೆ ಹಲವು ಸಂಗತಿಗಳು ಬಯಲಾಗಿವೆ. ಬ್ಯಾಂಕ್​ನ 6 ಕೋಟಿ ರೂಪಾಯಿ ಅವ್ಯವಹಾರದಲ್ಲಿ ಮ್ಯಾನೇಜರ್​ 8 ಮಂದಿ ಅಪರಿಚಿತ ಯುವತಿಯರಿಗೆ ಹಣ ವರ್ಗಾಯಿಸಿದ ಬಗ್ಗೆಯೂ ಬಾಯ್ಬಿಟ್ಟಿದ್ದಾನೆ.

ಪೊಲೀಸರು ವಂಚನೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಡೇಟಿಂಗ್ ಆ್ಯಪ್​ನಲ್ಲಿ ಪರಿಚಯವಾದ 8 ಯುವತಿಯರ ಖಾತೆಗಳಿಗೆ ಅಲ್ಲದೇ, ಇನ್ನೂ 30 ಖಾತೆಗಳಿಗೆ ಹಣ ವರ್ಗಾಯಿಸಿದ ಮಾಹಿತಿ ಬಯಲಾಗಿದೆ.ಹನುಮಂತನಗರದ ಇಂಡಿಯನ್ ಬ್ಯಾಂಕ್ ಶಾಖೆಯಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡ್ತಿದ್ದ ಹರಿಶಂಕರ್​ಗೆ ಹೆಣ್ಮಕ್ಕಳ ಹುಚ್ಚಿತ್ತು. ಹೀಗಾಗಿ ಆತ ಡೇಟಿಂಗ್​ ಆ್ಯಪ್​ನಲ್ಲಿ ಕೆಲ ಸುಂದರಿಯರ ಪರಿಚಯ ಬೆಳೆಸಿಕೊಂಡಿದ್ದ. ಈ ವೇಳೆ ಆತ ಪರಿಚಯವೇ ಇಲ್ಲದ ಡೇಟಿಂಗ್ ಬೆಡಗಿಯರ ಬಣ್ಣಕ್ಕೆ ಮನಸೋತು ತನ್ನ ಬಳಿಯಿದ್ದ 6 ಕೋಟಿ ಹಣವನ್ನು ಕಳೆದುಕೊಂಡಿದ್ದಾನೆ.

ಸಾಲ ಮಾಡಿ ಲಲನೆಯರಿಗೆ ಹಣ ವರ್ಗ:

ಮ್ಯಾನೇಜರ್​ ಹರಿಶಂಕರ್​ ತಾನು ಕೆಲಸ ಮಾಡುವ ಬ್ಯಾಂಕ್​ನಲ್ಲಿಯೇ ಸಾಲ ಮಾಡಿ ಲಲನೆಯರಿಗೆ ಹಣ ವರ್ಗಾವಣೆ ಮಾಡಿದ್ದಾನೆ. ಡೇಟಿಂಗ್ ಆ್ಯಪ್ ಅನ್ನು ನಿರಂತರವಾಗಿ ಬಳಸುತ್ತಿದ್ದ ಈತ ಪರಿಚಯವಾದ ಹುಡುಗಿಯರಿಗೆ ಕೇಳಿದಾಗೆಲ್ಲಾ ಹಣ ಹಾಕಿದ್ದಾನೆ. ಅದೂ ಕೂಡ ತನ್ನ ಸಂಬಳವಲ್ಲದೇ, ಅದೇ ಬ್ಯಾಂಕಿಂದಲೇ ಸಾಲವನ್ನೂ ಪಡೆದಿದ್ದ.ತನಿಖಾ ಸಮಯದಲ್ಲಿ ಪೊಲೀಸರಿಗೆ ಮೊದಮೊದಲು ಓರ್ವ ಯುವತಿಗೆ 12 ಲಕ್ಷ ಹಣ ಹಾಕಿದ್ದು ಗೊತ್ತಾಗಿತ್ತು. ನಂತರ ಅದು 8 ಜನ ಯುವತಿಯರು ಎಂದು ಗೊತ್ತಾಗಿದೆ. ಅಲ್ಲದೇ, 6 ಕೋಟಿ ಹಣ ಈ 8 ಯುವತಿಯರಲ್ಲದೇ, ಇನ್ನೂ 30 ಖಾತೆಗಳಿಗೆ ವರ್ಗವಾಗಿದೆ.

ತಾನು ಕೆಲಸ ಮಾಡ್ತಿದ್ದ ಇಂಡಿಯನ್ ಬ್ಯಾಂಕ್‌ನ ಠೇವಣಿದಾರರಾದ ಅನಿತಾ ಎಂಬಾಕೆಯ ಉಳಿತಾಯ ಖಾತೆಯಲ್ಲಿದ್ದ 1.3 ಕೋಟಿ ರೂಪಾಯಿಯನ್ನು ಆಕೆಗೆ ಗೊತ್ತಿಲ್ಲದಂತೆ 6 ಕೋಟಿಯಷ್ಟು ಓವರ್ ಡ್ರಾಫ್ಟ್ ಮಾಡಿ ಸಾಲವನ್ನು ಪಡೆದಿದ್ದ. 6 ಕೋಟಿಯನ್ನು 8 ಡೇಟಿಂಗ್ ಬೆಡಗಿಯರು ಹೇಳಿದ 30 ವಿವಿಧ ಖಾತೆಗಳಿಗೆ ಹಂತಹಂತವಾಗಿ ವರ್ಗಾಯಿಸಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

error: Content is protected !!