ಚಾರ್ಮಾಡಿ ಪರಿಸರದಲ್ಲಿ ಮತ್ತೆ ಕಾಡಾನೆ ದಾಳಿ ದಾಳಿಯಿಂದ ಅಪಾರ ಕೃಷಿ ಹಾನಿ ಕಂಗೆಟ್ಟ ಕೃಷಿಕರು ಸೂಕ್ತ ಕ್ರಮ ಕೈಗೊಳ್ಳಲು ಅರಣ್ಯ ಇಲಾಖೆಗೆ ಸೂಚನೆ

 

 

 

ಬೆಳ್ತಂಗಡಿ:ಚಾರ್ಮಾಡಿ ಗ್ರಾಮದ ಸುತ್ತಮುತ್ತ ನಿರಂತರ ಆನೆ ದಾಳಿಯಿಂದ ಕೃಷಿಕರು ಕಂಗಲಾಗಿದ್ದಾರೆ. ಚಾರ್ಮಾಡಿಯ ಮಠದ ಮಜಲು ಎಂಬಲ್ಲಿ ಅನಂತರಾವ್,ಪ್ರಕಾಶ್ ನಾರಾಯಣ ರಾವ್, ರವೀಂದ್ರ ರಾವ್ ಇವರ ಕೃಷಿ ತೋಟಗಳಿಗೆ ಸೋಮವಾರ ರಾತ್ರಿ ದಾಳಿ ನಡೆಸಿದ ಕಾಡಾನೆಗಳು ಸುಮಾರು 130 ಅಡಕೆ ಮರ,6 ತೆಂಗಿನ ಮರ ಹಾಗೂ ನೂರಾರು ಬಾಳೆಗಿಡಗಳನ್ನು ಧ್ವಂಸಮಾಡಿವೆ.
ಮರಿಯಾನೆ ಸಹಿತ ಆರರಿಂದ ಏಳು ಕಾಡಾನೆಗಳು ತೋಟಕ್ಕೆ ಬಂದಿರುವ ಅನುಮಾನ ವ್ಯಕ್ತವಾಗಿದೆ. ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು ಉಪ ವಲಯ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ.

 

ಈ ವರ್ಷ ಜನವರಿ ಬಳಿಕ ಇವರ ಕೃಷಿ ತೋಟಗಳಿಗೆ ಒಂಟಿಸಲಗ,ಹಿಂಡು ಸಹಿತ 10ಕ್ಕಿಂತ ಅಧಿಕ ಬಾರಿ ಆನೆಗಳು ದಾಳಿ ಇಟ್ಟಿದ್ದು ಒಂದು ಸಾವಿರದಷ್ಟು ಅಡಕೆ ಮರ, 50 ತೆಂಗಿನಮರ,ಅಪಾರ ಪ್ರಮಾಣದ ಬಾಳೆ ಕೃಷಿ ನಾಶವಾಗಿ ಲಕ್ಷಾಂತರ ರೂ.ಮೌಲ್ಯದ ಹಾನಿ ಉಂಟಾಗಿದೆ. ಈ ಪ್ರದೇಶದಲ್ಲಿ ಆನೆ ದಾಳಿ ತಡೆಗಟ್ಟಲು ಕೃಷಿಕರು ಮುಂಜಾಗ್ರತೆ ಕೈಗೊಂಡರೂ ನಿರಂತರ ದಾಳಿ ಮುಂದುವರೆಯುತ್ತಿದೆ. ಅರಣ್ಯ ಇಲಾಖೆ ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಕೃಷಿಕರು ಆಗ್ರಹಿಸಿದ್ದಾರೆ.

error: Content is protected !!