ಕುಡಿಯಲು ಹನಿ ನೀರೂ ಇಲ್ಲ”, ಇದು ತಣ್ಣೀರುಪಂತ ಜನರ‌ ಕಣ್ಣೀರ ಕಥೆ: ಕುಡಿವ ನೀರಿನ ಅಸಮರ್ಪಕ ಯೋಜನೆ, ಕಾಮಗಾರಿಗೆ‌ ₹ 28 ಲಕ್ಷ ಬಿಲ್ ಪಾಸ್!: 7 ವರ್ಷಗಳಿಂದ ಟ್ಯಾಂಕ್ ಸೇರದ ನದಿ ನೀರು, ನಿತ್ಯ ಸಾರ್ವಜನಿಕರ ಪರದಾಟ: ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸ್ಥಳೀಯರು ಗರಂ, ಪ್ರತಿಭಟನೆಗೆ ಸಜ್ಜು

 

 

ಬೆಳ್ತಂಗಡಿ: ಸರ್ಕಾರಗಳು ಜನರಿಗೆ ಮೂಲಭೂತ ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಹಲವಾರು ಯೋಜನೆಗಳನ್ನು ಅನುಷ್ಠಾನಕ್ಕೆ ತಂದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಯೋಜನೆಗಳು ಸಮರ್ಪಕವಾಗಿ ಕಾರ್ಯಗತವಾಗುವುದಿಲ್ಲ. ಕೇವಲ ಕಳಪೆ ಕಾಮಗಾರಿ ನಡೆಸಿ ಬಿಲ್ ಮಂಜೂರುಗೊಳಿಸಿ ಜನರ ತೆರಿಗೆ ಹಣ ಪೋಲು ಮಾಡುತ್ತಿರುವುದು ದುರಂತವೇ ಸರಿ. ಇದಕ್ಕೊಂದು  ಉದಾಹರಣೆ
ಬೆಳ್ತಂಗಡಿ ತಾಲೂಕಿನ ತಣ್ಣೀರುಪಂತ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಗ್ಗ ದೈಪಿಲ ಕುಡಿಯುವ ನೀರಾವರಿ ಯೋಜನೆ. ಈ ಯೋಜನೆ 2014-15 ನೇ ಸಾಲಿನ ಎನ್. ಆರ್. ಡಿ.ಡಬ್ಲ್ಯೂ, ಪಿ.(NRDWP) ಯೋಜನೆಯಲ್ಲಿ ಸುಮಾರು 28 ಲಕ್ಷ ರೂ. ಅನುದಾನದಲ್ಲಿ ನೇತ್ರಾವತಿ ನದಿಯಿಂದ ತಣ್ಣೀರು ಪಂತ ಗ್ರಾಮ ಪಂಚಾಯಿತಿಯ  ಕರಾಯ ಗ್ರಾಮದ ಜನರಿಗೆ ನೀರು ಸರಬರಾಜು ಮಾಡುವ ಯೋಜನೆ  ವಸಂತ ಬಂಗೇರ ಶಾಸಕರಾಗಿದ್ದಾಗ ಮಂಜೂರುಗೊಂಡಿತ್ತು. ನೇತ್ರಾವತಿ ನದಿಯಲ್ಲಿ ಜಾಕ್ ವೆಲ್ ನಿರ್ಮಿಸಿ ಅಲ್ಲಿಂದ ಸುಮಾರು 3 ಕಿ.ಮೀ. ದೂರದ ಮುಗ್ಗ ಎಂಬಲ್ಲಿ ಗುಡ್ಡದ ಮೇಲೆ 50 ಸಾವಿರ ಲೀ. ಸಾಮರ್ಥ್ಯದ ನೀರಿನ ಟ್ಯಾಂಕ್ ನಿರ್ಮಿಸಿ ನೀರು ಸರಬರಾಜು ಮಾಡುವ ಯೋಜನೆ ಇದಾಗಿತ್ತು.

 

ಅದರೆ  ಕಾಮಗಾರಿ ಪೂರ್ಣಗೊಂಡು ಪಂಚಾಯತ್ ಗಮನಕ್ಕೆ ತಂದಾಗ ಪಂಚಾಯತ್ ಆಡಳಿತ ಮಂಡಳಿ ಕಾಮಗಾರಿ ಸರಿಯಾಗಿ ನಡೆದಿಲ್ಲ, ನೀರು ಸರಿಯಾಗಿ ಸರಬರಾಜು ಆಗುತ್ತಿಲ್ಲ ಎಂಬ ಬಗ್ಗೆ ಇಂಜಿನಿಯರ್ ಗಳಿಗೆ ಹೇಳಿದರೂ, ಎಲ್ಲ ಕಾಮಗಾರಿ ಪೂರ್ಣಗೊಂಡಿದೆ ಸಮರ್ಪಕವಾದ ರೀತಿಯಲ್ಲಿ ನೀರು ಸರಬರಾಜು ಆಗುತ್ತಿದೆ ಎಂದು ಗುತ್ತಿಗೆದಾರರಿಗೆ ಬಿಲ್ ಮಂಜೂರು ಮಾಡಲಾಗಿದೆ. ಅದರೆ ಒಂದು ದಿನವೂ ಸರಿಯಾದ ರೀತಿಯಲ್ಲಿ ನೀರು ಸರಬರಾಜಾಗಿಲ್ಲ ಕಾಮಗಾರಿ ಅವೈಜ್ಞಾನಿಕವಾಗಿದೆ  ಕ್ರಮ ಕೈಗೊಳ್ಳಿ  ಎಂದು ಪ್ರತಿ ಗ್ರಾಮ ಸಭೆಯಲ್ಲೂ ಜನರು ಆಕ್ರೋಶ ವ್ಯಕ್ತಪಡಿಸುತಿದ್ದಾರೆ.

 

ಈ ಬಗ್ಗೆ ಪಂಚಾಯತ್ ಸಂಬಂಧಪಟ್ಟ ಇಲಾಖೆಗಳಿಗೆ ಮಾಹಿತಿಗಾಗಿ ಪತ್ರಬರೆದರೂ ಸಮರ್ಪಕವಾದ ಉತ್ತರ ಇನ್ನೂ ಸಿಕ್ಕಿಲ್ಲ .ಇದರ ಮಾಹಿತಿ ಪಡೆದುಕೊಂಡ ಪ್ರಜಾಪ್ರಕಾಶ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ನೇತ್ರಾವತಿ ನದಿಯಲ್ಲಿರುವ ಜಾಕ್ ವೆಲ್ ಗೆ ಅಳವಡಿಸಿದ ಪಂಪ್ , ಪೈಪ್ ಅದೇ ರೀತಿ ಅದಕ್ಕೆ ವಿದ್ಯುತ್ ಸಂಪರ್ಕಕ್ಕಾಗಿ ಅಳವಡಿಸಿದ ಉಪಕರಣಗಳು ಯಾವುದು ಇಲ್ಲ ಕೇವಲ ಸಿಮೆಂಟಿನ ಪಂಪ್ ಶೆಡ್ ಮಾತ್ರ ಕಾಣಸಿಗುತ್ತದೆ ಅಲ್ಲಿಂದ 3 ಕಿಮೀ ದೂರದ ಮುಗ್ಗ ಎಂಬಲ್ಲಿ ಎತ್ತರ ಪ್ರದೇಶದಲ್ಲಿ ಇರುವ ಟ್ಯಾಂಕ್ ಸುತ್ತ ಮುತ್ತ ಗಿಡ ಮರಗಳು ಬೆಳೆದು ಹತ್ತಿರ ಹೋಗದಂತಹ ಸ್ಥಿತಿ ನಿರ್ಮಾಣವಾಗಿದೆ.  ತಣ್ಣೀರು ಪಂತ ಗ್ರಾಮ ಪಂಚಾಯತ್ ಅಧ್ಯಕ್ಷೆ ಫಾತಿಮಾ ಇಶ್ರತ್ ಪ್ರತಿಕ್ರಿಯೆ ನೀಡಿ ಕಳೆದ 7 ವರ್ಷಗಳ ಹಿಂದೆ ನಮ್ಮ ಗ್ರಾಮದ ನೀರಿನ ಸಮಸ್ಯೆಯ ಬಗ್ಗೆ ಸುಮಾರು 28 ಲಕ್ಷ ರೂಪಾಯಿಗಳ ಅನುದಾನದಲ್ಲಿ ನಿರ್ಮಾಣವಾದ ಜಾಕ್ ವೆಲ್ ಹಾಗೂ ನೀರಿನ ಟ್ಯಾಂಕ್ ಅಸಮರ್ಪಕವಾದ ಕಾಮಾಗಾರಿಯಿಂದಾಗಿ ಯಾವುದಕ್ಕೂ ಉಪಯೋಗವಾಗದ ರೀತಿಯಲ್ಲಿ ನಿರ್ಮಾಣವಾಗಿದೆ.

 

 

 

 

ಹಲವಾರು ಬಾರಿ ಗ್ರಾಮಸ್ಥರು ಗ್ರಾಮ ಸಭೆಗಳಲ್ಲಿ ಇದರ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ನಮ್ಮ ಆಡಳಿತ ಅವಧಿಯಲ್ಲಿ ಅಧಿಕಾರಿಗಳಿಗೆ ಪತ್ರದ ಮೂಲಕ ಉತ್ತರ ನೀಡುವಂತೆ ಕೇಳಿಕೊಂಡಿದ್ದೇವೆ ಅದರೆ ಸರಿಯಾದ ಮಾಹಿತಿ ಇನ್ನೂ ನಮಗೆ ನೀಡುತ್ತಿಲ್ಲ ಕಾಮಗಾರಿಯ ಬಿಲ್ಲ್ ಗುತ್ತಿಗೆದಾರರಿಗೆ ಪಾವತಿ ಆಗಿದೆ ಯಾವ ಆಧಾರದಲ್ಲಿ ಬಿಲ್ಲ್ ಮಂಜೂರಾಗಿದೆ ಗೊತ್ತಿಲ್ಲ ಇದಕ್ಕೆ ಅಧಿಕಾರಿಗಳೇ ಉತ್ತರಿಸಬೇಕು ಎಂದಿದ್ದಾರೆ. ಉಪಾಧ್ಯಕ್ಷ ಅಯೂಬ್ ಡಿ.ಕೆ.‌ಮಾತನಾಡಿ ಪಂಚಾಯತ್ ಗಮನಕ್ಕೆ ತಾರದೆ ನಡೆದಂತಹ ಕಾಮಗಾರಿ ಇದಾಗಿದ್ದು ಪೂರ್ಣಗೊಂಡ ಬಳಿಕವಾದರೂ ಗಮನಕ್ಕೆ ತರಬೇಕಾಗಿತ್ತು ಅದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಉಪಯೋಗವಿಲ್ಲದಂತಾಗಿದೆ.

 

 

ಹಲವಾರು ಬಾರಿ ಗ್ರಾಮ ಸಭೆಗಳಲ್ಲಿ ನಮ್ಮನ್ನು ತರಾಟೆಗೆ ತೆಗೆದುಕೊಳ್ಳುತಿದ್ದಾರೆ.ಈ ಕಾರಣದಿಂದ ಗ್ರಾಮ ಸಭೆಗಳಲ್ಲಿ ದೊಡ್ಡ ಗಲಾಟೆಗಳೇ ನಡೆಯುತ್ತಿದೆ. ನಮ್ಮಿಂದ ಜನರಿಗೆ ಸಮರ್ಪಕವಾದ  ಉತ್ತರ ನೀಡಲಾಗುತ್ತಿಲ್ಲ ಜನರ ತೆರಿಗೆಯ ಹಣ ಈ ರೀತಿ ಪೋಲಾಗುತ್ತಿರುವುದು ನಿಜವಾಗಲೂ ಬೇಸರ ಮೂಡಿಸುತ್ತಿದೆ ಅದ್ದರಿಂದ ಇದಕ್ಕೊಂದು ಶಾಶ್ವತ ಪರಿಹಾರ ನೀಡಬೇಕೆಂದು ಸಂಬಂಧಪಟ್ಟವರಲ್ಲಿ ವಿನಂತಿಸಿಕೊಳ್ಳುತಿದ್ದೇನೆ ಎಂದರು.
ಗ್ರಾಮಕ್ಕೆ ಸಮರ್ಪಕವಾಗಿ ನೀರು ಒದಗಿಸಬೇಕು ಜನರ ನೀರಿನ ಭವಣೆ ದೂರ ಆಗಬೇಕು ಎಂಬ ನಿಟ್ಟಿನಲ್ಲಿ ನಿರ್ಮಾಣಗೊಂಡಿರುವ 28 ಲಕ್ಷ ರೂಪಾಯಿಯ ಈ ಯೋಜನೆ ಯಾವುದಕ್ಕೂ ಉಪಯೋಗವಿಲ್ಲದಂತಾಗಿದೆ.‌ಜನರ ತೆರಿಗೆ ಹಣದಿಂದ  ನಿರ್ಮಾಣವಾದ ಈ ಯೋಜನೆಯು ನೆನೆಗುದಿಗೆ ಬೀಳಲು ಅಧಿಕಾರಿಗಳ ಅಸಡ್ಡೆಯೋ ಅಥವಾ ಜನಪ್ರತಿನಿಧಿಗಳ ನಿರ್ಲಕ್ಷ್ಯವೋ ತಿಳಿಯದಾಗಿದೆ.  ಅದ್ದರಿಂದ ಇನ್ನಾದರೂ  ಸಂಬಂಧ ಪಟ್ಟವರು  ಸರಿಯಾದ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕು  ಎಂಬುವುದೇ ಪ್ರಜಾಪ್ರಕಾಶ ನ್ಯೂಸ್ ತಂಡದ ಆಶಯವಾಗಿದೆ.

error: Content is protected !!