ಬೆಳ್ತಂಗಡಿ: ತಾಲೂಕಿನ ಕೆಲವೆಡೆ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗುತಿದ್ದು ಆಹಾರ ಹುಡುಕಿಕೊಂಡು ನಾಡಿಗೆ ಕಾಡು ಪ್ರಾಣಿಗಳು ಬರುತ್ತಿರುವುದು ಜನರನ್ನು ನಿದ್ದೆಗೆಡಿಸುತ್ತಿದೆ. ಬಳಂಜ ಗ್ರಾಮದ ಪರಾರಿ ರಾಮಣ್ಣ ಪೂಜಾರಿ ಎಂಬುವರ ಮನೆಯ ಅಂಗಳದಲ್ಲಿ ರಾತ್ರಿ ಚಿರತೆಯೊಂದು ಅಲೆದಾಡುತ್ತಿದ್ದ ದೃಶ್ಯ ಅವರ ಮನೆಯ ಸಿಸಿ ಕ್ಯಾಮರಾದಲ್ಲಿ ಜೂ.11 ರಂದು ಸೆರೆಯಾಗಿದೆ.
ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು ಅರಣ್ಯ ಇಲಾಖೆಯವರು ಇದರ ಸೆರೆಗಾಗಿ ಬೋನ್ ಕಾರ್ಯಾಚರಣೆ ನಡೆಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಈ ಗ್ರಾಮದಲ್ಲಿ ನಾಯಿ, ಬೆಕ್ಕುಗಳು ಕಾಣೆಯಾಗುತ್ತಿದ್ದು ಜನ ಆತಂಕದಲ್ಲಿದ್ದರು. ಇದೀಗ ಮನೆಯಂಗಳಕ್ಕೆ ಚಿರತೆಗಳು ಬರುವುದರಿಂದ ಜನ ಮತ್ತೆ ಆತಂಕಕ್ಕೆ ಒಳಗಾಗಿದ್ದಾರೆ.
ಇದೇ ಜೂನ್ 02 ರಂದು ಸುಲ್ಕೇರಿ ಸಮೀಪ ನಾವರ ಗ್ರಾಮದಲ್ಲಿ ವಸಂತ ಕೋಟ್ಯಾನ್ ಎಂಬುವರ ಮನೆಯ ಹಿಂಬದಿ ಬಾವಿಗೆ ಚಿರತೆ ಬಿದ್ದಿತ್ತು. ಬಳಿಕ ಕಾರ್ಕಳ ಅರಣ್ಯ ಇಲಾಖೆ ತಂಡ ಕಾರ್ಯಚರಣೆ ನಡೆಸಿ ಸುರಕ್ಷಿತವಾಗಿ ರಕ್ಷಿಸಿದ್ದರು. ಈ ಪ್ರದೇಶದಲ್ಲಿ ಆಗಾಗ ಚಿರತೆಗಳು ಪ್ರತ್ಯಕ್ಷವಾಗುತ್ತಿರುವುದು ಸ್ಥಳೀಯ ಜನರ ಆತಂಕಕ್ಕೆ ಕಾರಣವಾಗಿದೆ. ರಾತ್ರಿ ಹೊತ್ತು ಮನೆಯಿಂದ ಹೊರಬರಲು ಭಯ ಪಡುವುದಲ್ಲದೇ ಸಾಕು ಪ್ರಾಣಿಗಳ ರಕ್ಷಣೆಯ ಬಗ್ಗೆಯೂ ಚಿಂತಕ್ರಾಂತರಾಗಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅಳದಂಗಡಿ ಉಪ ವಲಯ ಅರಣ್ಯಾಧಿಕಾರಿ ಸುರೇಶ್ ಅವರು
ಮನೆಯಂಗಳಕ್ಕೆ ಚಿರತೆ ಬಂದ ದೃಶ್ಯ ಸಿಸಿ ಪತ್ತೆಯಾಗಿದ್ದು ಈ ಬಗ್ಗೆ ಇದರ ಸೆರೆಗಾಗಿ ಬೋನ್ ಅಳವಡಿಕೆ ಮಾಡಿದ್ದೇವೆ. ಬೋನಿನೊಳಗೆ ನಾಯಿಯನ್ನು ಇಡಲಾಗಿದ್ದು ಶೀಘ್ರವಾಗಿ ಸೆರೆ ಹಿಡಿಯಲಾಗುವುದು ಎಂದು ತಿಳಿಸಿದ್ದಾರೆ.