ಕೊಕ್ಕಡ ಸೀಮೆ ಮಾಯಿಲಕೋಟೆ ದೈವ ಸನ್ನಿಧಿ ಮೇ 11ರಿಂದ 13 ದೈವಗಳ ಪ್ರತಿಷ್ಠಾ ಮಹೋತ್ಸವ ಮತ್ತು ನೇಮೋತ್ಸವ

 

ಬೆಳ್ತಂಗಡಿ : ಸುಮಾರು ಮೂರು ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿರುವ ತಾಲೂಕಿನ ಕೊಕ್ಕಡ ಸೀಮೆಯ ಮಾಯಿಲಕೋಟೆ ದೈವ ಸನ್ನಿಧಿಯು ಕಾರಣಿಕ ಮೆರೆಯುತ್ತಿರುವ ಕ್ಷೇತ್ರ. ಕದಂಬ ವಂಶದ ಮಯೂರವರ್ಮನ ಆಳ್ವಿಕೆಯ ಕಾಲದಲ್ಲಿ ತುಳುಮಾಯಿಲ ಎಂಬ ವೀರಪುರುಷ ಹತ್ತೂರು ಕಾಣುವ ಕೊಕ್ಕಡದ ಈ ಎತ್ತರದ ಪ್ರದೇಶದಲ್ಲಿ ಕೋಟೆಯನ್ನು ಕಟ್ಟಿ ಅರಸನಾಗಿ ಇಲ್ಲಿ ಆಡಳಿತ ನಡೆಸಿ ದೈವಗಳನ್ನೂ ಆರಾಧಿಸುತ್ತಿದ್ದ ಎಂಬ ಬಗ್ಗೆ ಇತಿಹಾಸವಿದೆ. ಇದೀಗ ಈ ಮಾಯಿಲಕೋಟೆ ಹಾಗೂ ದೈವಗಳ ಸನ್ನಿಧಿಯನ್ನು ಭಕ್ತರ ಸಹಕಾರದಿಂದ ಜೀರ್ಣೋದ್ಧಾರಗೊಳಿಸಿದ್ದು ಮಾಯಿಲಕೋಟೆಯಲ್ಲಿ ಕೋಟೆ ಚಾಮುಂಡಿ, ವರ್ಣರ ಪಂಜುರ್ಲಿ, ಕಲ್ಲುರ್ಟಿ, ಗುಳಿಗ ದೈವಗಳ ಪ್ರತಿಷ್ಠಾ ಮಹೋತ್ಸವ ಮತ್ತು ನೇಮೋತ್ಸವ ಮೇ.11ರಿಂದ ಮೇ.13ರವರೆಗೆ ನಡೆಯಲಿದೆ ಎಂದು ಶಾಸಕ ಹರೀಶ್ ಪೂಂಜಾ ಹೇಳಿದರು.
ಅವರು ಮೇ 02 ಸೋಮವಾರ ಬೆಳ್ತಂಗಡಿ ಮಂಜುನಾಥ ಕಲಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಶ್ರೀಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಆಶೀರ್ವಾದದೊಂದಿಗೆ ಹಾಗೂ ಶ್ರೀಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರ ಮಾರ್ಗದರ್ಶನದೊಂದಿಗೆ ದೈವಗಳ ಸಾನಿಧ್ಯದ ಜೀರ್ಣೋದ್ಧಾರ ಕಾಮಗಾರಿಗಳನ್ನು ನಡೆಸಲಾಗಿದ್ದು ವಾಸ್ತುತಜ್ಞರಾದ ಕೃಷ್ಣಪ್ರಸಾದ ಮುನಿಯಂಗಳ ಮಾರ್ಗದರ್ಶನದಲ್ಲಿ ಸುಮಾರು ಒಂದು ಕೋಟಿ ರೂ. ವೆಚ್ಚದಲ್ಲಿ ಕೋಟೆ ಹಾಗೂ ದೈವಗಳ ಗುಡಿಗಳನ್ನು ಜೀರ್ಣೋದ್ಧಾರಗೊಳಿಸಲಾಗಿದೆ. ಈ ಕ್ಷೇತ್ರದಲ್ಲಿ ರಾಜರ ಕಾಲದಲ್ಲಿದ್ದ ಅವಸಾನಗೊಂಡಿದ್ದ ಕೋಟೆಯೊಂದರ ಪುನರ್ ನಿರ್ಮಾಣದ ಕೆಲಸವನ್ನು ಭಕ್ತರು ಮಾಡಿದ್ದಾರೆ ಎಂಬುದು ಉಲ್ಲೇಖನೀಯ. ಶ್ರೀಕ್ಷೇತ್ರ ಧರ್ಮಸ್ಥಳ, ಸುಬ್ರಹ್ಮಣ್ಯ, ಸೌತಡ್ಕ ಶ್ರೀಮಹಾಗಣಪತಿ ಕ್ಷೇತ್ರ ಹಾಗೂ ಕೊಕ್ಕಡದ ವೈಧ್ಯನಾಥೇಶ್ವರ ದೇವಸ್ಥಾನಕ್ಕೆ ಆಗಮಿಸುವ ಯಾತ್ರಾರ್ಥಿಗಳು, ಭಕ್ತರು ಕೊಕ್ಕಡದ ಕೋಟೆ ಮತ್ತು ಪ್ರಕೃತಿಯ ಸೊಬಗನ್ನು ವೀಕ್ಷಿಸಬಹುದಾಗಿದೆ. ಭಕ್ತರು ವಿವಿಧ ಕಡೆಗಳಿಂದ ಮಾಯಿಲಕೋಟೆ ದೈವ ಸನ್ನಿಧಿಗೆ ಆಗಮಿಸಿ ತಮ್ಮ ಕಷ್ಟಗಳನ್ನು ಪರಿಹರಿಸಿಕೊಂಡ ನಿದರ್ಶನಗಳಿದ್ದು ಮಕ್ಕಳಿಲ್ಲದವರಿಗೆ ಸಂತಾನ ಭಾಗ್ಯ, ವಿವಾಹಾಪೇಕ್ಷಿಗಳಿಗೆ ವಿವಾಹ ಭಾಗ್ಯ, ದೈಹಿಕ, ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಇಲ್ಲಿ ಪರಿಹಾರ ಸಿಕ್ಕಿದೆ ಎಂದರು.

 

 

 

ಮೇ.11ರಂದು ಬೆಳಿಗ್ಗೆ 9ಗಂಟೆಯಿಂದ ಭಜನಾ ಕಾರ್ಯಕ್ರಮ, 10ಗಂಟೆಗೆ ಹಸಿರು ಹೊರಕಾಣಿಕೆ ಸಮರ್ಪಣೆ, ಸಂಜೆ 3ಗಂಟೆಯಿಂದ ಭಜನಾ ಕಾರ್ಯಕ್ರಮ, 7.30ರಿಂದ ಸಾಮೂಹಿಕ ಪ್ರಾರ್ಥನೆ, ಆಚಾರ್ಯವರಣ, ಗೋದಾನ ಪುಣ್ಯಾಹ, ಪ್ರಸಾದ ಶುದ್ಧಿ, ಯಕ್ಷೋಕ್ರಣಹೋಮ, ವಾಸ್ತುಕಲಶ ಪೂಜೆ, ವಾಸ್ತು ಹೋಮ, ವಾಸ್ತು ಬಲಿ, ಕಲಶಾಭಿಷೇಕ, ರಾತ್ರಿ ಪೂಜೆ ನಡೆಯಲಿದೆ.
ಮೇ.12ರಂದು ಬೆಳಿಗ್ಗೆ 7.30ರಿಂದ ತ್ರಿಕಾಲ ಪೂಜೆ, ಗಣಪತಿ ಹೋಮ, ಬಿಂಬ ಶುದ್ಧಿ, ಅನುಜ್ಞಾ ಕಲಶ, ಅನುಜ್ಞಾ ಪೂಜೆ, ಸ್ಥಳ ಶುದ್ಧಿ, ಕುಂಭೇಶ ಕರ್ಕರೀ ಪೂಜೆ, ಶಯ್ಯ ಪೂಜೆ, ಜೇವೋದ್ವಾಸನೆ, 9ಗಂಟೆಯಿಂದ 12ಗಂಟೆಯವರಗೆ ಭಜನಾ ಕಾರ್ಯಕ್ರಮ, ಮಧ್ಯಾಹ್ನ ತ್ರಿಕಾಲ ಪೂಜೆ, ಸಂಜೆ 3ರಿಂದ 7ಗಂಟೆಯವರೆಗೆ ಭಜನಾ ಕಾರ್ಯಕ್ರಮ, ಸಂಜೆ 8.30ಕ್ಕೆ ಹಸಿರು ಹೊರಕಾಣಿಕೆ ಸಮರ್ಪಣೆ, 6ಗಂಟೆಯಿಂದ ಅಧಿವಾಸ ಹೋಮ, ಕಲಶಪೂಜೆ, ಧ್ಯಾನಾಧಿವಾಸ, ತ್ರಿಕಾಲ ಪೂಜೆ ನಡೆಯಲಿದೆ.
ಸಂಜೆ 7ಗಂಟೆಯಿಂದ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು ಆದಿಚುಂಚನಗಿರಿ ಶಾಖಾ ಮಠದ ಶ್ರೀ ಶ್ರೀ ಧರ್ಮಪಾಲನಾಥ ಸ್ವಾಮೀಜಿಯವರು ಹಾಗೂ ಶ್ರೀ ಧಾಮ ಮಾಣಿಲದ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಆಶಿರ್ವಚನ ನೀಡಲಿದ್ದಾರೆ. ಶಾಸಕ ಹರೀಶ್ ಪೂಂಜಾ ಶುಭಾಶಂಸನೆ ಮಾಡಲಿದ್ದು ಮಾಯಿಲಕೋಟೆ ದೈವಸನ್ನಿಧಿಯ ಪ್ರತಿಷ್ಠಾ ಮಹೋತ್ಸವ ಸಮಿತಿ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ , ದ.ಕ ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನೀಲ್ ಕುಮಾರ್, ಸಂಸದ ನಳೀನ್ ಕುಮಾರ್ ಕಟೀಲ್, ಬಂದರು, ಮೀನುಗಾರಿಕೆ, ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್ ಅಂಗಾರ, ವಿಧಾನಪರಿಷತ್ ಸದಸ್ಯರಾದ ಕೆ. ಪ್ರತಾಪ್‌ಸಿಂಹ ನಾಯಕ್, ಕೆ. ಹರೀಶ್ ಕುಮಾರ್, ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಸಂಜೀವ ಮಠಂದೂರು, ಪುತ್ತೂರು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ತುಳು ಸಂಘ ಬರೋಡ ಅಧ್ಯಕ್ಷ ಕೆ. ಶಶಿಧರ ಶೆಟ್ಟಿ ನವಶಕ್ತಿ ಗುರುವಾಯನಕೆರೆ, ಭಾಸ್ಕರ ಗೌಡ ದೇವಸ್ಯ, ಶ್ರೀ ಕ್ಷೇತ್ರ ಧ.ಗ್ರಾ ಯೋಜನೆ (ರಿ.) ಧರ್ಮಸ್ಥಳ ಇದರ ಪ್ರಾದೇಶಿಕ ನಿರ್ದೇಶಕ ಬಿ. ಜಯರಾಮ ನೆಲ್ಲಿತ್ತಾಯ, ಬೆಳ್ತಂಗಡಿ ಬೆಸ್ಟ್ ಫೌಂಡೇಶನ್‌ನ ಅಧ್ಯಕ್ಷ ರಕ್ಷಿತ್ ಶಿವರಾಂ, ಆರಿಕೋಡಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಗುರೂಜಿ, ಸೌತಡ್ಕ ಶ್ರೀಮಹಾಗಣಪತಿ ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ಹರೀಶ್ ರಾವ್, ಮಾಜಿ ಜಿ.ಪಂ ಅಧ್ಯಕ್ಷ ಕೊರಗಪ್ಪ ನಾಯ್ಕ, ಕೊಕ್ಕಡ ಗ್ರಾ.ಪಂ ಅಧ್ಯಕ್ಷ ಯೋಗೀಶ್ ಆಲಂಬಿಲ, ಮಾಯಿಲಕೋಟೆ ದೈವ ಸನ್ನಿಧಿ ಜೀಣೋದ್ಧಾರ ಸಮಿತಿ ಅಧ್ಯಕ್ಷ ರಾಮಕೃಷ್ಣ ದೇವಾಡಿಗ, ಕೋಟೆಮಾಯಿಲ ಸಮುದಾಯ ಸಂಘ (ರಿ.) ಸುಳ್ಯ ಇದರ ಅಧ್ಯಕ್ಷ ಕುಮಾರ್ ಬಳ್ಳಕ ಮೊದಲಾದವರು ಉಪಸ್ಥಿತರಿರಲಿದ್ದಾರೆ.
ಮೇ.13ರಂದು ಕೆ.ವಿ ಪದ್ಮನಾಭ ತಂತ್ರಿ ಎಡಮನೆ, ಅರವತ್ತು ನೀಲೇಶ್ವರ ಕೇರಳ ಇವರ ನೇತೃತ್ವದಲ್ಲಿ ದೈವಗಳ ಪ್ರತಿಷ್ಠಾ ಮಹೋತ್ಸವ, ಬೆಳಿಗ್ಗೆ 7ರಿಂದ ಗಣಹೋಮ, ಪ್ರಸಾದ ಪ್ರತಿಷ್ಠೆ, ಪೀಠ ಪ್ರತಿಷ್ಠೆ, ದೈವಗಳ ಪ್ರತಿಷ್ಠೆ, ಕಲಶಾಭಿಷೇಕ, ತಂಬಿಲ, ಮಹಾಪೂಜೆ, ಪ್ರಸಾದ ವಿತರಣೆ, 9ಗಂಟೆಯಿಂದ ಭಜನಾ ಕಾರ್ಯಕ್ರಮ, ಸಂಜೆ 3ರಿಂದ 4.30ರವರೆಗೆ ಗೀತಸಾಹಿತ್ಯ ಸಂಭ್ರಮ, 4.30ರಿಂದ 7ಗಂಟೆಯವರೆಗೆ ಭಜನಾ ಕಾರ್ಯಕ್ರಮ, ರಾತ್ರಿ 6ರಿಂದ ಕೋಟೆ ಚಾಮುಂಡಿ, ವರ್ಣಾರ ಪಂಜುರ್ಲಿ , ಕಲ್ಲುರ್ಟಿ, ಗುಳಿಗ ದೈವಗಳ ನೇಮೋತ್ಸವ ನಡೆಯಲಿದೆ ಎಂದರು.
ಗೋಷ್ಠಿಯಲ್ಲಿ ಪ್ರತಿಷ್ಠಾ ಮಹೋತ್ಸವ ಸಮಿತಿ ಅಧ್ಯಕ್ಷ ಕುಶಾಲಪ್ಪ ಗೌಡ ಪೂವಾಜೆ, ಪ್ರಧಾನ ಕಾರ್ಯದರ್ಶಿ ಶಾಂತರಾಮ ಎ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಮಕೃಷ್ಣ ದೇವಾಡಿಗ, ಪ್ರಚಾರ- ಮಾಧ್ಯಮ ಸಮಿತಿ ಅಧ್ಯಕ್ಷ ಗಣೇಶ್ ಕುಲಾಯಿ, ಮೊದಲಾದವರು ಉಪಸ್ಥಿತರಿದ್ದರು.

error: Content is protected !!