ಸ್ವಾಭಿಮಾನಿಯಾಗಿ ಜೀವನ ನಡೆಸಿದ ಮಹಾನಾಯಕ ಅಂಬೇಡ್ಕರ್ :ಶಾಸಕ ಹರೀಶ್ ಪೂಂಜ ಬೆಳ್ತಂಗಡಿಯಲ್ಲಿ 131 ನೇ ಅಂಬೇಡ್ಕರ್ ಜನ್ಮದಿನಾಚರಣೆ

 

 

 

ಬೆಳ್ತಂಗಡಿ : ಸ್ವಂತಿಕೆಯನ್ನು ಬಿಟ್ಟುಕೊಡದೆ ಸ್ವಾಭಿಮಾನಿಯಾಗಿ ಜೀವನ ನಡೆಸಿದ ವಿಶ್ವ ಕಂಡ ಏಕೈಕ ಮಹಾನಾಯಕ ನಮ್ಮ ದೇಶದ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್‌ರವರು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹೇಳಿದರು.
ಅವರು ಬೆಳ್ತಂಗಡಿ ಶ್ರೀಮಂಜುನಾಥಸ್ವಾಮಿ ಕಲಾಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಸಮಿತಿ ವತಿಯಿಂದ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್‌ರವರ 131ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಂಬೇಡ್ಕರ್‌ರವರು ಹಾಕಿಕೊಟ್ಟಿರುವ ಹಾದಿಯಲ್ಲಿ ನಾವು ಸಾಗಬೇಕು. ಅಂಬೇಡ್ಕರ್‌ರವರು ಎಲ್ಲಾ ಕ್ಷೇತ್ರದಲ್ಲೂ ತನ್ನ ಛಾಪನ್ನು ಮೂಡಿಸಿದ್ದಾರೆ. ತನ್ನ ರಾಜಕೀಯ ಜೀವನ ಕಾಲಘಟ್ಟದಲ್ಲಿ ಅಧಿಕಾರ ವಹಿಸಿಕೊಂಡು ಅತ್ಯದ್ಭುತ ಕಾರ್ಯ ರಾಜಕಾರಣದಲ್ಲಿ ಕೊಟ್ಟಿದ್ದಾರೆ. ದೇಶ ಹಾಗೂ ಸಮಾಜದ ಹಿತದೃಷ್ಟಿಯಿಂದ ಯಾವುದೇ ರಾಜಿ ಮಾಡಿಕೊಳ್ಳದೆ ನೇರವಾಗಿ ನಿಷ್ಠೂರವಾಗಿ ತನ್ನ ಸಮಾಜದ ಏಳಿಗೆಗೋಸ್ಕರ ದುಡಿದ ಮಹಾನ್ ಚೇತನ ಎಂದರು.
ಬೆಳ್ತಂಗಡಿಯ ತಾಲೂಕು ಕ್ರೀಡಾಂಗಣದಲ್ಲಿ ಅಂಬೇಡ್ಕರ್ ಭವನಕ್ಕಾಗಿ 7 ಕೋ.ರೂ. ನೀಲನಕಾಶೆಯನ್ನು ತಯಾರು ಮಾಡಿದ್ದು, ಮೊದಲ ಕಂತು 3 ಕೋ.ರೂ. ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಕೊಟ್ಟಿದ್ದಾರೆ. ಕೆಲವೇ ದಿನದಲ್ಲಿ ಶಿಲನ್ಯಾಸ ಮಾಡಲಾಗುವುದು. ರಾಜ್ಯದಲ್ಲಿ ಅಂಬೇಡ್ಕರ್‌ರವರ ಹೆಸರಿನಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸುವಂತೆ ಸರಕಾರ ಹಾಗೂ ಮುಖ್ಯಮಂತ್ರಿಯವರನ್ನು ಒತ್ತಾಯಿಸುವುದಾಗಿ ತಿಳಿಸಿದರು.
ವಿಶೇಷ ಉಪನ್ಯಾಸ ನೀಡಿದ ಕುದ್ರೋಳಿ ನಾರಾಯಣಗುರು ಕಾಲೇಜಿನ ಉಪನ್ಯಾಸಕ ಕೇಶವ ಬಂಗೇರ ಮಾತನಾಡಿ, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಅವರ ಚಿಂತನೆ ಹಾಗೂ ಜ್ಞಾನದ ಪ್ರಭಾವಿಯನ್ನು ಗುರುತಿಸಿಕೊಂಡು ವಿಶ್ವಸಂಸ್ಥೆ ಎ.14 ರಂದು ವಿಶ್ವ ಜ್ಞಾನ ದಿನ ಎಂದು ಆಚರಣೆ ಮಾಡುತ್ತಿದೆ. ಒಂದು ಸಮುದಾಯಕ್ಕೆ ಸೀಮಿತವಾದ ಚೌಕಟ್ಟಿನಲ್ಲಿ ನೋಡುವ ಪರಿಸ್ಥಿತಿ ದೇಶದಲ್ಲಿ ನಿರ್ಮಾಣವಾದರೆ ಅಂಬೇಡ್ಕರ್‌ರವರ ಬದುಕನ್ನು ಪುನರ್ ಅವಲೋಕನ ಮಾಡಬೇಕು. ಅಂಬೇಡ್ಕರ್ ಅವರು ಈ ದೇಶ ಮಾತ್ರವಲ್ಲ ಜಗತ್ತಿನ ವೈಜಾರಿಕ ಸೈನಿಕ. ಅವರು ಖಡ್ಗ, ಬಂದೂಕು ಹಿಡಿದು ಕೊಂಡಿಲ್ಲ. ಖಡ್ಗಕ್ಕಿಂತ ಹರಿತವಾದ ಲೇಖನಿಯಲ್ಲಿ ಬಂದೂಕಿಗಿಂತ ಶ್ರೇಷ್ಠವಾದ ಬೌಧಿಕತೆಯಲ್ಲಿ ಇಡೀ ದೇಶ ಮಾತ್ರವಲ್ಲ ಪ್ರಪಂಚದ ಗಮನವನ್ನು ಏಕಚಿತ್ತರಾಗಿ 20ನೇ ಶತಮಾನದ ಕೊನೆಯಲ್ಲಿ ಕೊಟ್ಟ ದಾರ್ಶನಿಕ ಸಂತ ಎಂದು ವಿಶ್ವದ ಅಧ್ಯಯನ ಹೇಳುತ್ತಿದೆ. ವಿಶ್ವಕಂಡ ನಾಲ್ಕು ಅದ್ವಿತೀಯ ಮೇಧಾವಿಗಳಲ್ಲಿ ಅಂಬೇಡ್ಕರ್ ಕೂಡಾ ಒಬ್ಬರು. ನಾವೆಲ್ಲ ತಮ್ಮ ಮಕ್ಕಳಿಗೆ ಆಸ್ತಿ ಮಾಡಲು ಚಿಂತನೆ ಮಾಡುತ್ತೇವೆ. ಆದರೆ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿದರೆ ಜಗತ್ತು ನೆನಪಿಟ್ಟುಕೊಳ್ಳಬಹುದು ಎಂಬುದಕ್ಕೆ ಅಂಬೇಡ್ಕರ್‌ರವರೇ ಉದಾಹರಣೆಯಾಗಿದ್ದಾರೆ ಎಂದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಜನಿ ಕುಡ್ವ, ಬೆಳ್ತಂಗಡಿ ತಹಸೀಲ್ದಾರ್ ಮಹೇಶ್ ಜೆ., ವೃತ್ತ ನಿರೀಕ್ಷಕ ಶಿವಕುಮಾರ್, ಪಟ್ಟಣ ಪಂಚಾಯಿತಿ ಸುಧಾಕರ್ ಎಂ.ಹೆಚ್., ಸಮಾಜಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಹೇಮಚಂದ್ರ, ಅಕ್ರಮ-ಸಕ್ರಮ ಸಮಿತಿ ಸದಸ್ಯ ಜಯಂತ್ ಕೋಟ್ಯಾನ್, ದಲಿತ ಸಮುದಾಯದ ಮುಖಂಡ ರಾಘವ ಕಲ್ಮಂಜ, ಪ್ರಾ. ಶಿಕ್ಷಕರ ಸಂಘದ ತಾ.ಅಧ್ಯಕ್ಷ ಜಯರಾಜ್ ಜೈನ್, ಕೊಯ್ಯೂರು ಗ್ರಾ.ಪಂ. ಅಧ್ಯಕ್ಷ ಜಗನ್ನಾಥ್, ಮೇಲಂತಬೆಟ್ಟು ಗ್ರಾಂ.ಪಂ. ಅಧ್ಯಕ್ಷೆ ಹರಿಣಾಕ್ಷಿ, ಮುಂಡಾಜೆ ಗ್ರಾ.ಪಂ. ಅಧ್ಯಕ್ಷೆ ರಜನಿ ಮೊದಲಾದವರು ಉಪಸ್ಥಿತರಿದ್ದರು.
ಪ.ಜಾತಿ-ಪ.ಪಂಗಡದ ಅರ್ಹ ಫಲಾನುಭವಿಗಳಿಗೆ ಕಂದಾಯ ಇಲಾಖೆಯಿಂದ ಹಕ್ಕು ಪತ್ರ, ಸಾಮಾಜಿಕ ಅರಣ್ಯ ಇಲಾಖೆಯಿಂದ 8 ಮಂದಿ ಫಲಾನುಭವಿಗಳಿಗೆ ಸೋಲಾರ್ ಹಾಗೂ ಪಶು ಸಂಗೋಪನಾ ಇಲಾಖೆಯಿಂದ 5 ಮಂದಿಗೆ ಸಹಾಯಧನ ಚೆಕ್ ಹಾಗೂ ಕಿಟ್ ವಿತರಿಸಲಾಯಿತು.
ಕಾರ್ಯಕ್ರಮದ ಮೊದಲಿಗೆ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಭಾವಚಿತ್ರಕ್ಕೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು.
ಬೆಳ್ತಂಗಡಿ ತಾ.ಪಂ. ಇಒ ಕುಸುಮಾಧರ್ ಕೆ. ಸ್ವಾಗತಿಸಿದರು. ಐಟಿಡಿಪಿ ವಿಸ್ತಾರಣಾಧಿಕಾರಿ ಹೇಮಲತಾ ಕಾರ್ಯಕ್ರಮ ನಿರ್ವಹಿಸಿದರು. ತಾಲೂಕು ಕಚೇರಿ ಡಿಟಿ ಶಂಕರ್ ವಿವಿಧ ಇಲಾಖೆಗಳ ಫಲಾನುಭವಿಗಳ ಪಟ್ಟಿ ವಾಚಿಸಿದರು. ತಾ.ಪಂ. ಸಂಯೋಜಕ ಜಯಾನಂದ ಲಾಯಿಲ ವಂದಿಸಿದರು.

error: Content is protected !!