ಬೆಳ್ತಂಗಡಿ; ದ.ಕ. ಜಿಲ್ಲಾ ಸಂವಿಧಾನ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಬೆಳ್ತಂಗಡಿ ಮಿನಿ ವಿಧಾನ ಸೌದ ಎದುರು ಡಾ. ಬಿ.ಆರ್. ಅಂಬೆಡ್ಕರ್ ಅವರ 131 ನೇ ಜನ್ಮ ದಿನಾಚರಣೆಯನ್ನು ಭಾರತ ಭಾವ್ಯಕ್ಯ ಸಮಾವೇಶದ ಮೂಲಕ ಆಚರಿಸಲಾಯಿತು. ಡಾ. ಅಂಬೇಡ್ಕರ್ ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಗೈಯ್ಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಾಜಿ ಶಾಸಕ ಕೆ ವಸಂತ ಬಂಗೇರ ಮಾತನಾಡಿ ಇಲ್ಲಿ ಹಿಂದು ಮುಸ್ಲಿಂರ ನಡುವೆ ಧರ್ಮ ದ್ವೇ಼ಷ ಬೆಳೆಸಿ ಗಲಭೆಗೆ ಹಚ್ಚಿ ಅಲ್ಲಿ ಜನಪ್ರತಿನಿಧಿಗಳು 40% ಕಮೀಶನ್ ಹೊಡೆಯುತ್ತಾ ಭೃಷ್ಟಾಚಾರ ನಡೆಸುತ್ತಿದ್ದಾರಲ್ಲ ಇದರ ವಿರುದ್ದ ಸಿಡಿದೇಳಬೆಕಾದರೆ ನಮ್ಮೊಳಗಿನ ಸೌಹಾರ್ದತೆಯಿಂದ ಮಾತ್ರ ಸಾದ್ಯ ವಾಗಲಿದೆ. ರಾಜ್ಯದಲ್ಲಿ ಈಗಿನ ಸರಕಾರ ಬದಲಾಗುತ್ತದೆ ಈ ಬಿಜೆಪಿ ಸರಕಾರದ ಎಲ್ಲಾ ಮಂತ್ರಿಗಳು ಜೈಲು ಸೇರಲಿರುವುದು ನಿಶ್ಚಯ ಎಂದರು.
ಕಾರ್ಯಕ್ರಮದ ಅಧ್ಯಕ್ಷ ತೆಯನ್ನು ವಹಿಸಿದ ಹಿರಿಯ ಕಾರ್ಮಿಕ ಮುಖಂಡ ಬಿ.ಎಂ ಭಟ್ ಮಾತನಾಡಿ ಅಂಬೇಡ್ಕರ್ ಜಯಂತಿಯನ್ನು ಅಂಬೇಡ್ಕರ್ ಅವರ ಕನಸಿನ ಭಾರತವನ್ನಾಗಿ ರೂಪಿಸಲು ಪ್ರತಿಜ್ಞೆಗೈಯುವ ಮೂಲಕ ಆಚರಿಸಬೇಕಾಗಿದೆ.
ಅವರ ಕನಸಿನ ಬಾರತ ವೈವಿದ್ಯತೆಯಲಿ ಏಕತೆಯನ್ನು ಸಾರುವ, ಭಾರತ ಬಾವೈಕ್ಯ ಮೆರೆಯುವಂತೆ ಮಾಡುವುದೇ ಆಗಿದೆ. ಅಧಿಕಾರ ಹೀನರ ಮೇಲೆತ್ತಲು, ಸಮಾನತೆ ತರಲು ಸಾಮಾಜಿಕ ನ್ಯಾಯ ಒದಗಿಸಲು ಹಕ್ಕು ಸವಲತ್ತುಗಳ ಸ್ಥಾಪಿಸಲು ಡಾ. ಬಿ.ಆರ್ ಅಂಬೇಡ್ಕರ್ ಅವರ ದೂರದರ್ಶಿತ್ವ, ಚಿಂತನೆ, ಬದುಕಿನ ಅನುಭವ, ಯೋಜನೆಗಳು ಭಾರತದ ಸಂವಿಧಾನದಲ್ಲಿ ಸಮ್ಮಿಲನಗೊಂಡಿರುವುದು ಕೆಲವರಿಗೆ ಸಹಿಸಲಾರದಾಗಿದ್ದರೂ ಬಹು ಸಂಖ್ಯಾತ ಭಾರತೀಯರಿಗೆ ಬದುಕು ನೀಡಿದೆ. ಸಂವಿಧಾನ ಪಿತಾಮಹ ಅಂಬೇಡ್ಕರ್ ಅವರ ಕೊಡುಗೆ ಮಹಿಳೆಯರೂ ಸೇರಿದಂತೆ ಎಲ್ಲಾ ಅಧಿಕಾರ ಹೀನರ ಪರವಾಗಿ ಇದ್ದು, ಅವರ ಬದುಕನ್ನು ಸ್ವಾರ್ಥಕ್ಕಾಗಿ ಬಳಸದೆ ಎಲ್ಲವನ್ನೂ ಸಾಮಾಜಿಕ ನ್ಯಾಯಕ್ಕಾಗಿ ಮುಡಿಪಾಗಿಟ್ಟರು ಎಂದರು.
ಮಾಜಿ ಸಚಿವ ಗಂಗಾಧರ ಗೌಡ ಮಾತನಾಡಿ ಭ್ರಷ್ಟಾಚಾರದ ಈ ಸರಕಾರದ ವಿರುದ್ದ ಹೋರಾಟ ನಡೆಸಲು ಮೊದಲು ನಮ್ಮೊಳಗಿನ ಸೌಹಾರ್ದತೆ ಅಗತ್ಯ. ಆರ್.ಎಸ್ ಎಸ್ ಅಂದು ಭೂಮಾಲಕರ ಪರ ನಿಂತು ರೈತರಿಗೆ ಭೂಮಿ ಸಿಗದಂತೆ ತಡೆಯುತ್ತಿದ್ದರೂ, ಕಮ್ಯೂನಿಸ್ಟರು ಹೋರಾಡುತ್ತಿದ್ದರು. ದೇವರಾಜ ಅರಸು ಸರಕಾರ ರೈತರ ಪರ ಭೂ ಸುಧಾರಣಾ ಕಾನೂನು ತಂದಿತ್ತು. ಆದರೆ ಅವರ ಮಕ್ಕಳು ಇವತ್ತು ಕಾಂಗ್ರೇಸ್ ಏನು ಮಾಡಿದೆ ಎಂದು ಕೇಳುತ್ತಿದ್ದಾರೆ ಇದು ದುರಂತವಾಗಿದೆ ಎಂದರು.
ರೈತ ಸಂಘದ ಮುಖಂಡ ಸುರೇಶ್ ಭಟ್ ಮಾತನಾಡಿ ಭಾರತೀಯರ ನಡುವೆ ಧರ್ಮದ ಹೆಸರಲ್ಲಿ ಹುಳಿ ಹಿಂಡಿ ಪರಸ್ಪರ ಕಚ್ಚಾಡುವಂತೆ ಮಾಡಿ ದೇಶದ ಸಂಪತ್ತನ್ನು ಮಾರಾಟ ಮಾಡುತ್ತಾ, ಉದ್ಯಮಿಗಳ ಲಕ್ಷಾಂತರ ಕೋಟಿ ರೂಗಳ ಸಾಲ ಮನ್ನಾ ಮಾಡುತ್ತಾ ಸರಕಾರ ನಮ್ಮನ್ನು ದೋಚುತ್ತಿದೆ ಎಂದರು.
ಕುಂಡದಬೆಟ್ಟು ಜುಮ್ಮಾ ಮಸೀದಿಯ ಧರ್ಮಗುರು ಹನೀಫ್ ಸಖಾಫಿ, ಸೀಯೋನ್ ಆಶ್ರಮದ ಯು.ಸಿ ಪೌಲೋಸ್ ಮಾತನಾಡಿ ಶುಭ ಹಾರೈಸಿದರು. ಎಲ್ ಮಂಜುನಾಥ್ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಜಯಶ್ರೀ ಸ್ವಾಗತಿಸಿದರು. ಈಶ್ವರಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.