ಬೆಳ್ತಂಗಡಿ: ನಾಡಿನ ಸಮಸ್ತ ಬಂಧುಗಳು ಶ್ರೀ ಭಗವಾನ್ ಮಹಾವೀರರು ಹಾಕಿಕೊಟ್ಟಿರುವ ತಳಹದಿಯಲ್ಲಿ ತಮ್ಮ ಜೀವನವನ್ನು ನಡೆಸುವಂತಹ ಅನಿವಾರ್ಯತೆ ಪ್ರಸ್ತುತ ಸಮಾಜದಲ್ಲಿದೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಹೇಳಿದರು.
ಅವರು ಬೆಳ್ತಂಗಡಿ ಶ್ರೀಮಂಜುನಾಥಸ್ವಾಮಿ ಕಲಾಭವನದಲ್ಲಿ ರಾಷ್ಟ್ರೀಯ ಹಬ್ಬಗಳ ಸಮಿತಿ ವತಿಯಿಂದ ಮಹಾವೀರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ವ್ಯಕ್ತಿಯ ವ್ಯಕ್ತಿತ್ವದ ವಿಕಸನದ ಜತೆಗೆ ಸಮಾಜದ ಏಳಿಗೆಯನ್ನು ಬಯಸಿ ಅಂದು ಮಹಾವೀರರು ಕೊಟ್ಟಿರುವ ಸಂದೇಶ ಇವತ್ತು ಜಗತ್ತಿನ ಪ್ರತಿಯೊಬ್ಬರಿಗೂ ಅನ್ವಯಿಸುವಂತಹ ರೀತಿಯಲ್ಲಿ ವ್ಯಕ್ತಿತ್ವದಲ್ಲಿ ಬದಲಾವಣೆಯನ್ನು ಸಂದೇಶವನ್ನು ಅವರು ಅಂದು ಕಂಡುಕೊಂಡಿದ್ದರು. ಎಲ್ಲಾ ರಾಷ್ಟ್ರೀಯ ಹಬ್ಬಗಳನ್ನು ಒಂದು ಚೌಕಟ್ಟಿನಲ್ಲಿ ಸುವ್ಯವಸ್ಥಿತವಾಗಿ ಮಾಡಿಕೊಂಡು ಬರುತ್ತಿದ್ದೇವೆ. ವ್ಯಕ್ತಿಯ ಅಂತರಾತ್ಮಕ್ಕೆ ಇನ್ನಷ್ಟು ಚಿಂತನೆ ಕೊಡುವ ನಿಟ್ಟಿನಲ್ಲಿ ಮುಂದಿನ ಹತ್ತು ದಿನದೊಳಗೆ ತಾಲೂಕಿನಲ್ಲಿ ದೊಡ್ಡ ಮಟ್ಟದಲ್ಲಿ ಮಹಾವೀರರ ಜಯಂತಿಯನ್ನು ಆಯೋಜನೆ ಮಾಡಲಾಗುವುದು ಎಂದರು.
ಜೈನ ಸಮುದಾಯ ಭವನದ ನಿರ್ಮಾಣಕ್ಕಾಗಿ 50 ಲಕ್ಷ ರೂ. ಸರಕಾರ ನೀಡಿದೆ
ಹಾಗೂ ಬಸದಿಗಳಿಗೆ ಕೂಡಾ ಅನುದಾನ ಸರಕಾರ ನೀಡಿದೆ ಎಂದರು.
ಗೇರುಕಟ್ಟೆ ಸರಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಅಜಿತ್ ಕುಮಾರ್ ಕೊಕ್ರಾಡಿ ಮಾತನಾಡಿ, ಮಹಾವೀರರು ಪಶು ಪಕ್ಷಿಗಳಿಂದ ಹಿಡಿದು ಜಗತ್ತಿನ ಎಲ್ಲರಿಗೂ ಸಂದೇಶ ನೀಡಿದ್ದಾರೆ. ಆಚಾರ ಮತ್ತು ವಿಚಾರ ಎಂಬ ಎರಡು ಧರ್ಮವನ್ನು ಮಾನವನಾಗಿ ಜನಿಸಿದ ಪಾಲಿಸಿಕೊಂಡು ಬರುವಂತೆ ಧರ್ಮೋಪದೇಶ ನೀಡಿದ್ದಾರೆ. ಪಂಚಪಾಪಗಳನ್ನು ಮಾಡಬಾರದು ಎಂದು ಸಂದೇಶ ನೀಡಿದ್ದಾರೆ. ನಾಲ್ಕು ಕಾಷಾಯಗಳನ್ನು ಭೋದಿಸಿದ್ದಾರೆ. ಭಗವಾನ್ ಮಹಾವೀರರಿಗೆ ಮದುವೆ ಆಗಿಲ್ಲ. ಬಾಲ ಬ್ರಹ್ಮಚಾರಿ ಆಗಿದ್ದರು. ಜೈನನಿಗೆ ಜಾತಿ ಇಲ್ಲ. ಭಗವಾನ್ ಮಹಾವೀರರು ಹಾಕಿಕೊಟ್ಟ ಅನುಯಾಯಿಯಲ್ಲಿ ಜಿನ ಧರ್ಮದ ಹಾದಿಯಲ್ಲಿ ನಡೆದರೆ ಮಾತ್ರ ನಾನು ಜೈನ ಆಗಬಲ್ಲೆ. ಅಷ್ಟಮೂಲ ಗುಣಧರ್ಮವನ್ನು ಪಾಲಿಸಬೇಕು, ಅಪ್ಪಟ ಸಸ್ಯಹಾರಿಯಾಗಬೇಕು, ಹತ್ತು ಹಲವು ಅಷ್ಟಮೂಲಗುಣಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಹೋದಾಗ ಮಾತ್ರ ಜೀವನದಲ್ಲಿ ಸಾರ್ಥಕತೆ ಆಗುತ್ತದೆ. ಉತ್ತಮ ಜೀವನಕ್ಕೆ ಮಹಾವೀರರು ಏನೆಲ್ಲ ಹೇಳಿಕೊಟ್ಟಿದ್ದಾರೋ ಅದನ್ನು ಪಾಲಿಸುವವರು ಜೈನರು ಎಂದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷೆ ರಜನಿ ಕುಡ್ವ, ಬೆಳ್ತಂಗಡಿ ತಹಸೀಲ್ದಾರ್ ಮಹೇಶ್ ಜೆ.,
ಬೆಳ್ತಂಗಡಿ ತಾ.ಪಂ. ಇಒ ಕುಸುಮಾಧರ್ ಕೆ., ವೃತ್ತ ನಿರೀಕ್ಷಕ ಶಿವಕುಮಾರ್, ಪ್ರಾ. ಶಿಕ್ಷಕರ ಸಂಘದ ತಾ.ಅಧ್ಯಕ್ಷ ಜಯರಾಜ್ ಜೈನ್ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದ ಮೊದಲಿಗೆ ಭಗವಾನ್ ಮಹಾವೀರರಿಗೆ ಪುಷ್ಪ ನಮನ ಸಲ್ಲಿಸಲಾಯಿತು. ರಾಜ್ಯ ಸರಕಾರಿ ನೌಕರರ ಸಂಘದ ರಾಜ್ಯ ಕಾರ್ಯದರ್ಶಿ ಡಾ. ಜಯಕೀರ್ತಿ ಜೈನ್ ಸ್ವಾಗತಿಸಿದರು. ಐಟಿಡಿಪಿ ವಿಸ್ತಾರಣಾಧಿಕಾರಿ ಹೇಮಲತಾ ಕಾರ್ಯಕ್ರಮ ನಿರ್ವಹಿಸಿದರು. ಪಟ್ಟಣ ಪಂಚಾಯಿತಿ ಸುಧಾಕರ್ ಎಂ.ಹೆಚ್. ವಂದಿಸಿದರು.