ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ: ಈಶ್ವರಪ್ಪ ರಾಜೀನಾಮೆ ನೀಡುವಂತೆ ಹೈಕಮಾಂಡ್ ಸೂಚನೆ..?

 

 

 

 

ಬೆಂಗಳೂರು: ಉಡುಪಿಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಬೆಳಗಾವಿ ಜಿಲ್ಲೆಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅವರಿಂದ ರಾಜೀನಾಮೆ ಪಡೆಯಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಹೈಕಮಾಂಡ್ ಸಂದೇಶ ರವಾನಿಸಿದೆ ಎನ್ನಲಾಗುತ್ತಿದೆ.
ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ಹೈಕಮಾಂಡ್ ಮಾತುಕತೆ ನಡೆಸಿದ್ದು, ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣ, ಈಶ್ವರಪ್ಪ ವಿರುದ್ಧದ ಆರೋಪ ಸೇರಿ ವಿಸ್ತೃತವಾದ ಮಾಹಿತಿಯನ್ನು ಪಡೆದುಕೊಂಡಿದೆ. ತಡರಾತ್ರಿ ಸಚಿವ ಈಶ್ವರಪ್ಪ ವಿರುದ್ಧ ಎಫ್ಐಆರ್ ದಾಖಲಾಗಿರುವ ಮಾಹಿತಿಯನ್ನೂ ಹೈಕಮಾಂಡ್ ಗೆ ನೀಡಿದ್ದಾರೆ. ಚುನಾವಣಾ ವರ್ಷವಾಗಿರುವ ಕಾರಣ ಮೊದಲು ರಾಜೀನಾಮೆ ಪಡೆಯುವುದು ಒಳಿತು ಎನ್ನುವ ನಿಲುವುಗೆ ಹೈಕಮಾಂಡ್ ಬಂದಿದ್ದು ರಾಜೀನಾಮೆ ಪಡೆಯುವಂತೆ ಸಿಎಂಗೆ ಸೂಚನೆ ನೀಡಲಾಗಿದೆ ಎಂದು ತಿಳಿದುಬಂದಿದೆ.ಇನ್ನು ಎಫ್ಐಆರ್ ದಾಖಲಾದ ನಂತರ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಸೇರಿದಂತೆ ಹೈಕಮಾಂಡ್ ನ ಕೆಲ ನಾಯಕರೊಂದಿಗೆ ದೂರವಾಣಿ ಮೂಲಕ ಸಚಿವ ಈಶ್ವರಪ್ಪ ಮಾತುಕತೆ ನಡೆಸಿದ್ದಾರೆ. ಘಟನೆಯ ಬಗ್ಗೆ ವಿವರ ನೀಡಿದ್ದಾರೆ. ರಾಜೀನಾಮೆ ಕುರಿತು ಹೈಕಮಾಂಡ್ ನಾಯಕರು ಸೂಚನೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಹೈಕಮಾಂಡ್ ಸೂಚನೆಯಿಂದಾಗಿ ಈಶ್ವರಪ್ಪ ಬೆಂಗಳೂರಿಗೆ ಆಗಮಿಸುತ್ತಿದ್ದು, ಮಧ್ಯಾಹ್ನ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಿದ್ದಾರೆ ನಂತರ ರಾಜೀನಾಮೆ ನಿರ್ಧಾರ ಪ್ರಕಟಿಸಲಿದ್ದಾರೆ ಎಂದು ಹೇಳಲಾಗಿದೆ.

error: Content is protected !!