ಬೆಳ್ತಂಗಡಿ: ದ.ಕ. ಜಿಲ್ಲೆಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಾಶ್ ನೆಟಾಲ್ಕರ್ ಕುಂದಾಪುರ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕ್ಲಿಫರ್ಡ್ ಲೋಬೋ ಹಾಗೂ ಉಡುಪಿ ಅರಣ್ಯ ಸಂಚಾರಿ ದಳ ವಲಯಾರಣ್ಯಾಧಿಕಾರಿ ಸಂಧ್ಯಾ ಅವರ ಮೇಲೆ ಬೆಳ್ತಂಗಡಿ ತಾಲೂಕು ಕಲ್ಮಂಜ ಗ್ರಾಮದ ಐತ ಎಂಬವರು ಜಾತಿನಿಂದನೆ ಪ್ರಕರಣ ದಾಖಲಿಸಿದ್ದಾರೆ.
40 ವರ್ಷಗಳಿಂದ ಸ್ವಾಧೀನ ಹೊಂದಿರುವ ಭೂಮಿಯಲ್ಲಿ ಅಡಕೆ ಕೃಷಿ ಮಾಡುವ ಉದ್ದೇಶದಿಂದ ಡಿ.9ರಂದು ಮರಗಳನ್ನು ಕಡಿದು ಹೊರಗಡೆ ದಾಸ್ತಾನು ಮಾಡುತ್ತಿದ್ದ ಸಂದರ್ಭ ಅರಣ್ಯ ಇಲಾಖೆಯ ಅಧಿಕಾರಿಗಳು ಮರಗಳನ್ನು ಕಾನೂನು ರೀತಿಯಲ್ಲಿ ವಶ ಪಡಿಸಿಕೊಂಡಿದ್ದಾರೆ. ಡಿ.10ರಂದು ಯಾವುದೇ ನೋಟೀಸು ನೀಡದೆ ಅರಣ್ಯ ಇಲಾಖೆಯ ಅಧಿಕಾರಿಗಳು ತನ್ನ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ ತಾಯಿ ಹಾಗೂ ತನ್ನನ್ನು ವಿಚಾರಿಸಿ ಹೆಚ್ಚಿನ ಪ್ರಕರಣಗಳನ್ನು ದಾಖಲಿಸುವುದಾಗಿ ತಿಳಿಸಿ, ರೂ. 5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದು ತನ್ನ ಬಳಿ ಇಷ್ಟು ದೊಡ್ಡ ಮೊತ್ತ ನೀಡಲು ಅನುಕೂಲವಿಲ್ಲವೆಂದು ತಿಳಿಸಿದಾಗ ಜಾತಿ ನಿಂದನೆ ಮಾಡಿ ಮರಗಳನ್ನು ಡಿಪೋಗೆ ಸಾಗಾಟ ಮಾಡಿರುತ್ತಾರೆ ಎಂದು ಐತ ಅವರು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.