ನೆರಿಯ ₹ 2.40 ಲಕ್ಷ ಮೌಲ್ಯದ ನಗ-ನಗದು ಕಳವು: ಸಂಬಂಧಿಯ ವಿರುದ್ಧ ಪೊಲೀಸ್ ಠಾಣೆಗೆ ದೂರು

 

 

ಬೆಳ್ತಂಗಡಿ : ಸಂಬಂಧಿಕನೇ ಮನೆಯಲ್ಲಿಟ್ಟಿದ್ದ ಹಣ ಹಾಗೂ ಆಭರಣಗಳನ್ನು ಕಳವುಗೈದಿದ್ದಾನೆ ಎಂದು ಆರೋಪಿಸಿ ಪೊಲೀಸ್ ಠಾಣೆಗೆ ದೂರು ನೀಡಿದ ಘಟನೆ ನೆರಿಯದಲ್ಲಿ ನಡೆದಿದೆ.

ಘಟನೆಯ ವಿವರ :
ನೆರಿಯ ಗ್ರಾಮದ ಕುಲೆನಾಡಿ ನಿವಾಸಿ ಸಂಜೀವ ಗೌಡ ಎಂಬವರು ಸುಮಾರು 5 ತಿಂಗಳ ಹಿಂದೆ ಧರ್ಮಸ್ಥಳ ಗ್ರಾಮ ಅಭಿವೃದ್ಧಿ ಯೋಜನೆ ಗುಂಪಿನಿಂದ 2 ಲಕ್ಷದ 47 ಸಾವಿರ ರೂಪಾಯಿ ಸಾಲವನ್ನು ಪಡೆದಿದ್ದು, ಅದರಲ್ಲಿ 65 ಸಾವಿರ ರೂಪಾಯಿಯನ್ನು ತಮ್ಮ ಮನೆಯ ಮಲಗುವ ಕೊಠಡಿಯಲ್ಲಿರುವ ಕಪಾಟಿನಲ್ಲಿ ಇಟ್ಟಿದ್ದರು. ಅದಲ್ಲದೇ ಈ ಹಿಂದೆ ಇಟ್ಟಿದ್ದ 24 ಗ್ರಾಂ ತೂಕದ 1 ಚಿನ್ನದ ನೆಕ್ಲೇಸ್ ಹಾಗೂ 20 ಗ್ರಾಂ ತೂಕದ 1 ಚಿನ್ನದ ಸರವೂ ಅದರಲ್ಲೆ ಇತ್ತು.
ಸಂಜೀವ ಗೌಡರ ಕುಟುಂಬಸ್ಥರಿಗೆ ಹಣದ ಅವಶ್ಯಕತೆ ಇದ್ದ ಕಾರಣ ಮಾ.8 ರಂದು ಕಪಾಟಿನಲ್ಲಿ ಇಟ್ಟಿದ್ದ ಹಣವನ್ನು ತಗೆಯಲು ಹೋದಾಗ ಹಣ ಕಂಡುಬಾರದೇ ಇದ್ದು ಸಂಶಯಗೊಂಡು ಆಭರಣ ಇಟ್ಟಿದ್ದ ಡಬ್ಬಿಯನ್ನು ನೋಡಿದಾಗ ಡಬ್ಬಿಯಲ್ಲಿ ಇಟ್ಟಿದ್ದ ಚಿನ್ನದ ನೆಕ್ಲೇಸ್ ಹಾಗೂ ಚಿನ್ನದ ಸರ ಕೂಡಾ ಕಾಣೆಯಾಗಿತ್ತು. ಈ ಬಗ್ಗೆ ಸಂಜೀವ ಗೌಡರ ಪುತ್ರಿ ಚಂದ್ರಾವತಿ ಎಂಬವರು ತನ್ನ ಬಾವನ ಮಗ  ಸಚಿನ್ ಎಂಬವನು ಆಗಾಗ ಮನೆಗೆ ಬರುತ್ತಿದ್ದು ಆತನು ಕಳವು ಮಾಡಿದ ಸಂಶಯ ಇರುತ್ತದೆ ಎಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸ್ ತನಿಖೆಯ ಬಳಿಕವಷ್ಟೇ ಈ ಪ್ರಕರಣದ ಸತ್ಯಾಸತ್ಯತೆ ಹೊರಬರಬೇಕಾಗಿದೆ.
ಕಳುವಾದ ಚಿನ್ನದ ಅಂದಾಜು ಮೌಲ್ಯ 1 ಲಕ್ಷದ 75 ಸಾವಿರ ರೂಪಾಯಿ ಆಗಿದ್ದು, ಕಳುವಾದ ಹಣ ಹಾಗೂ ಆಭರಣದ ಒಟ್ಟು ಅಂದಾಜು ಮೊತ್ತ 2 ಲಕ್ಷದ 40 ಸಾವಿರ ರೂಪಾಯಿ ಆಗಬಹುದೆಂದು ಅಂದಾಜಿಸಲಾಗಿದೆ.

error: Content is protected !!