ಬೆಳ್ತಂಗಡಿ: ಯುದ್ಧ ಬಂದಾಗ ಮಾತ್ರ ದೇವರು ಮತ್ತು ಸೈನಿಕರ ನೆನಪಾಗುತ್ತದೆ ಎಂಬ ಪರಿಸ್ಥಿತಿ ಇತ್ತು. ಸೈನಿಕರನ್ನು ಅಪಮಾನಕರ ರೀತಿಯಲ್ಲಿ ನೋಡುವಂತಹಾ ಪರಿಸ್ಥಿತಿಯೂ ಇತ್ತು. ಇದೀಗ ಈ ಪರಿಸ್ಥಿತಿ ಸಂಪೂರ್ಣ ಬದಲಾಗಿದೆ. ದೇಶದಲ್ಲಿ ಹೊಸ ಅಲೆ ಮೂಡುತ್ತಿದ್ದಂತೆ ಏರ್ ಸ್ಟ್ರೈಕ್ ಮೋದಲಾದ ಸೈನಿಕರ ಸೇವೆಯ ಮೂಲಕ ಸಮಾಜದಲ್ಲಿ ಅವರನ್ನು ನೋಡುತ್ತಿರುವ ರೀತಿಯೂ ಬದಲಾಗುತ್ತಿದೆ. ಸೈನಿಕರೇ ನಿಜವಾದ ನಾಯಕರು ಎಂಬ ಭಾವನೆ ವಿದ್ಯಾರ್ಥಿಗಳ ಮನಸ್ಸಿನಲ್ಲಿಯೂ ಮೂಡುತ್ತಿದೆ. ಹಿಂದೆಯೂ ದೇಶ, ನೆರೆ ರಾಷ್ಟ್ರ ಮೊದಲಾದ ಗಡಿ ಎಲ್ಲೆಗಳನ್ನು ಮೀರಿ ರಕ್ಷಣಾ ಕಾರ್ಯದ ನಡೆಸುವ ಮೂಲಕ ಮಾನವೀಯ ಕಾರ್ಯಗಳನ್ನು ಕಾಪಾಡಿದ ಖ್ಯಾತಿ ನಮ್ಮ ದೇಶದ ಸೈನಿಕರದ್ದಾಗಿದೆ ಎಂದು ಅಂಕಣಕಾರ ಮತ್ತು ಖ್ಯಾತ ವಾಗ್ಮಿ ಆದರ್ಶ ಗೋಖಲೆ ಹೇಳಿದರು.
ಅವರು ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದ ನಮ್ಮೂರ ಜಾತ್ರೆ ಮಹಾರಥೋತ್ಸವ ಅಂಗವಾಗಿ ಸಂತೆಕಟ್ಟೆ ಅಯ್ಯಪ್ಪ ಸ್ವಾಮಿ ದೇವಸ್ಥಾನ ಮುಂಭಾಗ ನವಶಕ್ತಿ ಫ್ರೆಂಡ್ಸ್ ಅರ್ಪಿಸಿ, ಕಾಶಿ ಪ್ಯಾಲೇಸ್ ಉಜಿರೆ ಪಾಯೋಜಕತ್ವದಲ್ಲಿ ಹಮ್ಮಿಕೊಂಡಿದ್ದ “ಯೋಧರಿಗೊಂದು ನಮನ” ಹಾಗೂ “ಗಾನವೈಭವ” ಕಾರ್ಯಕ್ರಮದಲ್ಲಿ ‘ರಾಷ್ಟ್ರೀಯತೆ’ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.
ಭಾರತದ ಸೈನಿಕರು ತಮ್ಮ ಉತ್ಕಟ ದೇಶಪ್ರೇಮದ ಮೂಲಕ ಎಂದಿಗೂ ದೇಶ ಎಂದಿಗೂ ತಲೆ ಬಾಗದಂತೆ ಕಾಪಾಡುತ್ತಿದ್ದಾರೆ. ತಮ್ಮ ಜೀವ ಹೋಗುವ ಸಂದರ್ಭದಲ್ಲೂ ದೇಶದ ರಕ್ಷಣೆ ಕುರಿತು ಚಿಂತಿಸಿದ ಫಲವಾಗಿ ಇಂದು ನಮ್ಮ ದೇಶದ ಜನಸಾಮಾನ್ಯರು, ನಮ್ಮ ದೇಶ ಸುರಕ್ಷಿತವಾಗಿದೆ. ಈ ಮೂಲಕ ನಮಗೆ ದೇಶ ಪ್ರೇಮದ ಕುರಿತು ಪ್ರೇರಣೆ ನೀಡುತ್ತಿದ್ದಾರೆ. ಆದರೆ ದುರದೃಷ್ಟವಶಾತ್ ದೇಶದಲ್ಲೇ ಇರುವ ವಿಭಜನಾತ್ಮಕ ಶಕ್ತಿಗಳು ರಕ್ಷಣೆ ನೀಡುವವರ ಸುರಕ್ಷತೆಯನ್ನೇ ಕಸಿದುಕೊಳ್ಳಲು ಯತ್ನಿಸುತ್ತಿರುವುದು ಆಘಾತಕಾರಿಯಾಗಿದೆ. ಆದರೂ ಮನೆಮನೆಗಳಲ್ಲಿ ಮಕ್ಕಳಿಗೆ ದೇಶಪ್ರೇಮದ ಅರಿವು ಮೂಡಿಸುವ ಕಾರ್ಯವಾಗಬೇಕಿದೆ ಎಂದರು.
ಮಾಜಿ ಸೈನಿಕ ಉಮೇಶ್ ಬಂಗೇರ ಕುದ್ಪುಲ, ರಮೇಶ್ ಬಂದಾರು ಹಾಗೂ ಸಮಾಜ ಸೇವಕ ನಾಣ್ಯಪ್ಪ ಗೌಡ ಮಚ್ಚಿನ ಅವರ ಪರವಾಗಿ ಪುತ್ರ ಬಾಲಕೃಷ್ಣ ಅವರನ್ನು ಗೌರವಿಸಲಾಯಿತು.
ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಮಾತನಾಡಿ, ರಾಷ್ಟ್ರೀಯತೆಯೇ ಮೇಲು ಎಂಬ ಭಾವನೆಗಿಂತ ವ್ಯಯಕ್ತಿಕ ಪ್ರತಿಷ್ಠೆಗಳ ಮೇಲಾಟವಾಗುತ್ತಿರುವುದು ಬೇಸರದ ಸಂಗತಿ ಎಂದರು.
ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅಧ್ಯಕ್ಷತೆ ವಹಿಸಿದ್ದರು.
, ಉದ್ಯಮಿ ಮತ್ತು ಬರೋಡಾ ತುಳು ಸಂಘದ ಅಧ್ಯಕ್ಷ ಶಶಿಧರ್ ಶೆಟ್ಟಿ, ಲಕ್ಷ್ಮೀ ಗ್ರೂಪ್ ಮಾಲಕರು ಮತ್ತು ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ ಮೋಹನ್ ಕುಮಾರ್,ಬೆಳ್ತಂಗಡಿ ಪಟ್ಟಣ ಪಂಚಾಯತ್ ಅಧ್ಯಕ್ಷೆ ರಜನಿ ಕುಡ್ವ, ಉಪಾಧ್ಯಕ್ಷ ಜಯಾನಂದ ಗೌಡ ಉಪಸ್ಥಿತರಿದ್ದರು.
ವಿಶೇಷ ಕಾರ್ಯಕ್ರಮ:
ಖ್ಯಾತ ಸಂಗೀತ ನಿರ್ದೇಶಕಿ, ಹಿನ್ನೆಲೆ ಗಾಯಕಿ ಮಾನಸ ಹೊಳ್ಳ ಇವರ ಸಾರಥ್ಯದಲ್ಲಿ “ಗಾನ ವೈಭವ” ಕಾರ್ಯಕ್ರಮ ನಡೆಯಲಿದೆ. ಕೋಸ್ಟಲ್ ವುಡ್ ಹಾಗೂ ಸ್ಯಾಂಡಲ್ ವುಡ್ ಖ್ಯಾತ ನಟ ರಾಕ್ ಸ್ಟಾರ್ ರೂಪೇಶ್ ಶೆಟ್ಟಿ ಇವರ ನಿರೂಪಣೆಯಲ್ಲಿ, ಮಜಾ ಟಾಕೀಸ್ ಖ್ಯಾತಿಯ ರೆಮೋ, ಝೀ ಕನ್ನಡದ ಸರಿಗಮಪ ಖ್ಯಾತಿಯ ಶ್ರೀ ಹರ್ಷ, ಎದೆ ತುಂಬಿ ಹಾಡುವೆನು ಖ್ಯಾತಿಯ ಸಂದೇಶ್ ನೀರುಮಾರ್ಗ ಕಲರ್ಸ್ ಕನ್ನಡದ ಕನ್ನಡ ಕೋಗಿಲೆ ಖ್ಯಾತಿಯ ಮಹನ್ಯ ಗುರು ಪಾಟೀಲ ಅವರಿಂದ ಗಾಯನ ಕಾರ್ಯಕ್ರಮ ಮತ್ತು ಝೀ ಕನ್ನಡ ಕಾಮಿಡಿ ಕಿಲಾಡಿ ಖ್ಯಾತಿಯ ಅನೀಶ್ ಪೂಜಾರಿ ವೇಣೂರು, ಕಾಪಿನಡ್ಕ ವಿಶೇಷ ಕಾರ್ಯಕ್ರಮ ನೀಡಲಿದ್ದಾರೆ.
ನವಶಕ್ತಿ ಫ್ರೆಂಡ್ಸ್ ಸದಸ್ಯ ಜಗದೀಶ್ ಕನ್ನಾಜೆ ಸ್ವಾಗತಿಸಿದರು. ವಿ.ಜೆ. ಮನೋಹರ್ ವಾಮಂಜೂರು ನಿರೂಪಿಸಿದರು.