ಲಾಯಿಲ ಕೋಟಿಕಟ್ಟೆ ಸಂಪರ್ಕ ರಸ್ತೆ ಅವೈಜ್ಞಾನಿಕ, ಕಳಪೆ ಕಾಮಗಾರಿ, ಹಣದ ಅವ್ಯವಹಾರ:‌ ರಸ್ತೆ ವೀಕ್ಷಿಸಿ ಮಾಜಿ ಶಾಸಕ ವಸಂತ ಬಂಗೇರ ಆರೋಪ:

 

 

 

ಬೆಳ್ತಂಗಡಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಧಾನ ಮಂತ್ರಿ ಗ್ರಾಮ ಸಡಕ್ ರಸ್ತೆ ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದಿಂದ ಮುಂಡೂರು ಗ್ರಾಮದ ಕೋಟಿಕಟ್ಟೆ ಎಂಬಲ್ಲಿಗೆ ‌ ಸೇತುವೆ ಸಹಿತ ರೂ. 10 ಕೋಟಿಗೂ ಹೆಚ್ಚು ಅನುದಾನದಲ್ಲಿ  ನಿರ್ಮಾಣವಾಗುತ್ತಿದ್ದು, ಇದರ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ಈ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದ್ದು, ಹಣ ದುರುಪಯೋಗ ಮಾಡಲಾಗಿದೆ. ಈ ಕುರಿತು ಶೀಘ್ರದಲ್ಲೇ ಪ್ರಧಾನಿಗೆ ಪತ್ರ ಬರೆಯುವುದಾಗಿ ಮಾಜಿ ಶಾಸಕ ವಸಂತ ಬಂಗೇರ ಹೇಳಿದರು. ಅವರು ಸಾರ್ವಜನಿಕರ ದೂರಿನ ಮೇರೆಗೆ ಫೆ.16ರಂದು ಕಾಂಗ್ರೆಸ್ ನಿಯೋಗದೊಂದಿಗೆ ಭೇಟಿ ನೀಡಿ ಕಾಮಗಾರಿಯನ್ನು ಪರಿಶೀಲಿಸಿ, ವೀಕ್ಷಿಸಿ ಮಾಧ್ಯಮಗಳ ಜೊತೆ ಮಾತನಾಡಿದರು. ‌

 

 

ಕಾಮಗಾರಿ ಸಂಪೂರ್ಣ ಕಳಪೆ ಗುಣಮಟ್ಟದಿಂದ ಕೂಡಿದ್ದು ಹಳೆಯ ರಸ್ತೆಯ ಮೇಲೆಯೇ ಒಂದು ಪದರ ಫೈನಲ್ ಕೋಟ್ ಡಾಮರ್ ಅಳವಡಿಸಲಾಗಿದೆ. ಅದೂ ಕೂಡ ತೀರಾ ಕಳಪೆಯಾಗಿದ್ದು ಡಾಮರು ಕೈಯಲ್ಲೇ ಎದ್ದು ಬರುತಿದೆ. ಡಾಮರ್ ಕೆಳಗೆ ಯಾವುದೇ ರೀತಿಯ ಜಲ್ಲಿ ಹಾಸು ಅಥವಾ ಡಾಮರ್ ಕೋಟಿಂಗ್ ಮಾಡಿಲ್ಲದಿರುವುದು ಕಂಡು ಬಂದಿದೆ. ಅನವಶ್ಯಕವಾಗಿ ತಡೆಗೋಡೆಯನ್ನು ನಿರ್ಮಿಸಿದ್ದು, ಅವೈಜ್ಞಾನಿಕ ಕಾಮಗಾರಿ ನಡೆಸಲಾಗಿದೆ. ಗುಣಮಟ್ಟದ ರಸ್ತೆಯನ್ನು ನಿರ್ಮಿಸುವ ಮೂಲಕ ಹಳ್ಳಿಗಳು ಅಭಿವೃದ್ಧಿ ಪಥದಲ್ಲಿ ಸಾಗಬೇಕು. ಅದರೆ ಈ ರಸ್ತೆಯು ಈಗಲೇ ಎದ್ದು ಹೋಗುತ್ತಿದ್ದು ಇದರ ಭವಿಷ್ಯ ಕೆಲವೇ ತಿಂಗಳು ಇರಬಹುದು. ಈ ಕುರಿತು‌ ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

 

 

 

 

ಸಡಕ್ ರಸ್ತೆಗೆ ಸಂಬಂದಿಸಿದ ಇಂಜಿನಿಯರನ್ನು ಪೋನ್ ಮೂಲಕ ಸಂಪರ್ಕಿಸಿ ತರಾಟೆಗೆ ತೆಗೆದುಕೊಂಡು ಈ ರೀತಿಯ ಕಾಮಗಾರಿ ಮಾಡಲು ಸೂಚಿಸಿದವರು ಯಾರು ಜನರಿಗೆ ಮೋಸ ಮಾಡಿ ರಸ್ತೆ ನಿರ್ಮಿಸಿದರೆ ದೇವರು ಮೆಚ್ಚುವ ಕಾರ್ಯವಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಿಯೋಗದಲ್ಲಿ ಕಾಂಗ್ರೆಸ್ ನಗರ ಬ್ಲಾಕ್ ಅಧ್ಯಕ್ಷ ರಂಜನ್ ಜಿ. ಗೌಡ, ಗ್ರಾಮೀಣ ಬ್ಲಾಕ್ ಅಧ್ಯಕ್ಷ ಶೈಲೇಶ್,ಸಿಪಿಐಎಂ ಮುಖಂಡ ಶೇಖರ್ ಲಾಯಿಲ ಉಪಸ್ಥಿತರಿದ್ದರು.

error: Content is protected !!