ಬೆಳ್ತಂಗಡಿ ಹುಲಿ ಗಣತಿ ಕಾರ್ಯ ಪ್ರಾರಂಭ ಅರಣ್ಯ ಇಲಾಖೆ ಹಾಗೂ ವನ್ಯ ಜೀವಿ ವಿಭಾಗದಿಂದ ಗಣತಿ

 

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನಲ್ಲಿ ಹುಲಿ ಗಣತಿ ಕಾರ್ಯ ಆರಂಭವಾಗಿದೆ.ನಾಲ್ಕು ವರುಷಗಳಿಗೊಮ್ಮೆ ನಡೆಯುವ ಈ ಗಣತಿ ಸುಮಾರು ಒಂದು ವಾರ ತನಕ ನಡೆಯಲಿದೆ.
ಅರಣ್ಯ ಇಲಾಖೆ ಸೂಚನೆಯಂತೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿ ಹಾಗೂ ಸಮೀಪದ ರಕ್ಷಿತಾರಣ್ಯ ಪ್ರದೇಶಗಳಲ್ಲಿ ಅರಣ್ಯ ಇಲಾಖೆ ಹಾಗೂ ವನ್ಯಜೀವಿ ವಿಭಾಗದಿಂದ ಈ ಕಾರ್ಯ ನಡೆಯಲಿದೆ. ಉಪವಲಯ ಅರಣ್ಯಾಧಿಕಾರಿ, ಅರಣ್ಯ ರಕ್ಷಕ,ಅರಣ್ಯ ವೀಕ್ಷಕ ಅಥವಾ ಸ್ಥಳೀಯ ವ್ಯಕ್ತಿ ಸೇರಿರುವ ತಂಡ ಇದ್ದು, ಕಳೆದ ಡಿಸೆಂಬರ್ ನಲ್ಲಿ ಇಲಾಖೆ ವತಿಯಿಂದ ರಚಿಸಲ್ಪಟ್ಟ ಟ್ರಾಂಜಾಕ್ಟ್ ಲೈನ್ ಅಲ್ಲದೆ ಪ್ರತಿದಿನ ಐದು ಕಿಮೀ ವ್ಯಾಪ್ತಿಯಲ್ಲಿ ಒಟ್ಟು ಮೂರು ದಿನಗಳಲ್ಲಿ 15ಕಿಮೀ. ಗಣತಿ ನಡೆಸುತ್ತದೆ.ಬಳಿಕ ಮತ್ತೆ ಮೂರು ದಿನ ಟ್ರಾಂಜಾಕ್ಟ್ ಲೈನ್ ನಿರ್ಮಿಸಿದ ಸ್ಥಳದಲ್ಲಿ ಗಣತಿ ನಡೆಯುತ್ತದೆ. ಗಣತಿಯು ಅರಣ್ಯ ಪ್ರದೇಶ,ಪಟ್ಟಾ ಜಮೀನು,ಸರಕಾರಿ, ಜಮೀನು, ನದಿ,ಹೊಳೆ ಹಳ್ಳ,ಹುಲ್ಲುಗಾವಲು ಇತ್ಯಾದಿ ಸ್ಥಳಗಳಲ್ಲಿ ಸಾಗುತ್ತದೆ. ತಂಡವು ಇಲಾಖೆ ಸೂಚಿಸಿರುವಷ್ಟು ಸ್ಥಳಗಳಲ್ಲಿ ಗಣತಿ ಕಾರ್ಯ ನಡೆಸುತ್ತದೆ. ಬೆಳ್ತಂಗಡಿ ತಾಲೂಕಿನ ಬೆಳ್ತಂಗಡಿ, ನೆರಿಯ, ಉಜಿರೆ,ಮುಂಡಾಜೆ, ಚಿಬಿದ್ರೆ,ಮಚ್ಚಿನ, ಮಡಂತ್ಯಾರು ಸೇರಿದಂತೆ ಹಲವು ವಲಯಗಳಲ್ಲಿ ಬೆಳಿಗ್ಗೆ 6.30ರಿಂದ ಆರಂಭಗೊಳ್ಳುತ್ತದೆ.

ಗಣತಿ ನಡೆಯುವ ರೀತಿ

ಹುಲಿ ಗಣತಿಗೆ ನಿಯೋಜನೆಗೊಂಡಿರುವ ತಂಡವು ನಿಗದಿತ ಸ್ಥಳದಲ್ಲಿ ಮೊದಲು ಸೆಲ್ಫಿ ಫೋಟೋ ಕ್ಲಿಕ್ಕಿಸಿ, ಮೊಬೈಲನ್ನು ಫ್ಲೈಟ್ ಮೋಡ್ ಗೆ ಹಾಕಬೇಕು. ಇಲಾಖೆಯು ನೀಡಿರುವ ‘ಎಂ-ಸ್ಟ್ರಿಪ್’ ಎಂಬ ತಂತ್ರಾಂಶದಲ್ಲಿ ಸಂಬಂಧಪಟ್ಟ ವಿವರಗಳನ್ನು ದಾಖಲಿಸಲು ಆರಂಭಿಸಬೇಕು.ಗಣತಿ ಕಾರ್ಯದಲ್ಲಿ ಹುಲಿಹೆಜ್ಜೆ,ಹುಲಿಯು ಮರಗಳಿಗೆ ಪರಚಿರುವ ಗುರುತುಗಳಿದ್ದರೆ ದಾಖಲಿಸಬೇಕು. ಆ ಪ್ರದೇಶದಲ್ಲಿರುವ ಹುಲಿಗಳ ಮುಖ್ಯ ಆಹಾರವಾದ ಸಸ್ಯಾಹಾರಿ ಹಾಗೂ ಲಘು ಮಾಂಸಹಾರಿ ಪ್ರಾಣಿಗಳು ಇದ್ದರೆ ಅದನ್ನೂ ಗುರುತಿಸಬೇಕು.ಗಣತಿ ವೇಳೆ ಇವುಗಳ ತಿರುಗಾಟದ ಹೆಜ್ಜೆಗುರುತು,ಹಿಕ್ಕೆ ಇನ್ನಿತರ ವಿಚಾರಗಳನ್ನು ಗಮನಿಸಬೇಕು. ಸ್ಥಳದಲ್ಲಿ ಕಂಡುಬರುವ ಪ್ರಾಣಿ, ಪಕ್ಷಿಗಳ ಚಿತ್ರಗಳನ್ನು ಸೆರೆ ಹಿಡಿಯಬೇಕು. ಸಿಬ್ಬಂದಿ ತಿರುಗಾಟ ನಡೆಸಿರುವ ಪ್ರದೇಶವು ತಂತ್ರಾಂಶದಲ್ಲಿ ದಾಖಲಿಸಲ್ಪಡುತ್ತದೆ. ಬಳಿಕ ಇವನ್ನೆಲ್ಲ ತಂತ್ರಾಂಶದಲ್ಲಿ ಕ್ರೋಢೀಕರಿಸಿಬಾಕದಿನದ ಸಮಗ್ರ ಮಾಹಿತಿಯನ್ನು ಮೇಲಾಧಿಕಾರಿಗಳಿಗೆ ಕಳುಹಿಸಿಕೊಡಬೇಕು. ಮೇಲಾಧಿಕಾರಿಗಳು ಇದರ ಸಂಪೂರ್ಣ ಪರಿಶೀಲನೆ ನಡೆಸುತ್ತಾರೆ.

 

ಹುಲಿಗಳು ಎಲ್ಲಿರುತ್ತವೆ?

ಹೆಚ್ಚಾಗಿ ಹುಲಿಗಳು ಜನ,ವಾಹನ ಸಂಚಾರ ಇಲ್ಲದ ಎತ್ತರದ ಪ್ರದೇಶ ದಟ್ಟಾರಣ್ಯಗಳಲ್ಲಿ ವಾಸಿಸುತ್ತವೆ.ಆದರೂ ಹುಲಿಗಳಿಗೆ ಮುಖ್ಯ ಆಹಾರವಾದ ಜಿಂಕೆ, ಕಡವೆ,ಕಾಡುಹಂದಿ, ಮುಳ್ಳುಹಂದಿ ಮುಂತಾದ ಪ್ರಾಣಿಗಳು ಓಡಾಡುವ ಜಾಗಗಳಲ್ಲೂ ಕಂಡುಬರುತ್ತದೆ. ಇಂತಹ ಪ್ರಾಣಿಗಳು ಕಂಡುಬರುವ ಪ್ರದೇಶಗಳಲ್ಲಿ ಮಾತ್ರ ಹುಲಿ ಹಾಗೂ ಚಿರತೆಗಳು ಜೀವಿಸಲು ಸಾಧ್ಯ. ಇದಕ್ಕಾಗಿ ಪ್ರದೇಶದ ಇತರ ಪ್ರಾಣಿಗಳ ಮಾಹಿತಿಯನ್ನು ಕಲೆ ಹಾಕಲಾಗುತ್ತದೆ. ಬೆಳ್ತಂಗಡಿ ತಾಲೂಕಿನ ಹೆಚ್ಚಿನ ಅರಣ್ಯಪ್ರದೇಶದಲ್ಲಿ ಹುಲಿಗಳು ತಿನ್ನುವ ಪ್ರಾಣಿಗಳು ವಾಸಿಸುತ್ತವೆ.

ಕಾಡಾನೆಗಳ ಭೀತಿ

ಬೆಳ್ತಂಗಡಿ ತಾಲೂಕಿನಲ್ಲಿ ಹುಲಿಗಣತಿ ನಡೆಯುತ್ತಿರುವ ಹೆಚ್ಚಿನ ಸ್ಥಳಗಳು ಕಾಡಾನೆಗಳು ತಿರುಗಾಡುವ ಪ್ರದೇಶಗಳಾಗಿವೆ. ಮುಂಡಾಜೆ,ನೆರಿಯ, ಚಾರ್ಮಾಡಿ,ಚಿಬಿದ್ರೆ, ಕಡಿರುದ್ಯಾವರ, ಮಲವಂತಿಗೆ, ಮಿತ್ತಬಾಗಿಲು, ಗ್ರಾಮಗಳಲ್ಲಿ ಕಾಡಾನೆಗಳ ತಿರುಗಾಟ ನಿತ್ಯ ನಿರಂತರವಾಗಿದೆ . ಇಂತಹ ಸ್ಥಳಗಳಲ್ಲಿ ಯಾವುದೇ ಹೆಚ್ಚಿನ ರಕ್ಷಣಾ ಆಯುಧಗಳಿಲ್ಲದೆ ತಂಡವು ತಿರುಗಾಟ ನಡೆಸಬೇಕಾಗಿದೆ. ಕೆಲವು ತಂಡಗಳಿಗೆ ಕಾಡಾನೆಗಳು ತಿರುಗಾಟ ನಡೆಸಿರುವ ಅನೇಕ ಕುರುಹುಗಳು ಕಂಡುಬಂದಿವೆ. ಇದರಿಂದ ಪ್ರತಿ ತಂಡವು ಭೀತಿಯ ವಾತಾವರಣದಲ್ಲಿ ಗಣತಿ ನಡೆಸುವುದು ಅನಿವಾರ್ಯವಾಗಿದೆ.

error: Content is protected !!