ಮಂಗಳೂರು : ಪ್ರಥಮ ಪಿಯುಸಿ ಮತ್ತು ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಒಂದೇ ದಿನ ಮಾಡುವ ಬಗ್ಗೆ ಸೂಚಿಸಲಾಗಿದ್ದು ದ.ಕ ಜಿಲ್ಲೆಯಲ್ಲಿ ಪ್ರಥಮ ಪಿಯು ಪರೀಕ್ಷೆಯ ವೇಳಾಪಟ್ಟಿಯನ್ನು ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಜಿಲ್ಲಾ ಪಿಯು ಬೋರ್ಡ್ ಬದಲಾಯಿಸಿದೆ.
ಪ್ರಥಮ ಪಿಯು ಪರೀಕ್ಷೆಯನ್ನು ಎಸ್ಎಸ್ಎಲ್ಸಿ ಪರೀಕ್ಷೆಯ ಜೊತೆಯಲ್ಲೇ ನಡೆಸುವಂತೆ ಜಿಲ್ಲಾ ಪಿಯು ಬೋರ್ಡ್ಗೆ ಸೂಚಿಸಲಾಗಿತ್ತು. ಹಾಗೆ ಪರೀಕ್ಷೆ ನಡೆಸುವುದಿದ್ದರೆ ಮಧ್ಯಾಹ್ನದ ಬಳಿಕವೂ ಮಾಡಬೇಕಾಗಿತ್ತು . ಇದರಿಂದ ವಿದ್ಯಾರ್ಥಿಗಳು ಹಲವು ಸಮಸ್ಯೆ ಸಿಲುಕುತ್ತಿದ್ದರು. ಈಗಾಗಲೇ 2 ಸಾವಿರಕ್ಕಿಂತಲೂ ಅಧಿಕ ಪ್ರಥಮ ಪಿಯು ವಿದ್ಯಾರ್ಥಿಗಳು ನೆರೆ ಜಿಲ್ಲೆಯ ಕಾಸರಗೋಡಿನಿಂದ ಪರೀಕ್ಷೆಗೆ ಬರಬೇಕಿತ್ತು. ಮಧ್ಯಾಹ್ನ 2.30ರಿಂದ 5.30ರವರೆಗೆ ಪರೀಕ್ಷೆ ನಡೆದರೆ ಕಾಸರಗೋಡು, ಸುಳ್ಯ ತಾಲೂಕಿನ ಗ್ರಾಮಾಂತರ ಭಾಗದಲ್ಲಿರುವ ವಿದ್ಯಾರ್ಥಿಗಳು ಸೇರಿ ಹಲವು ವಿದ್ಯಾರ್ಥಿಗಳಿಗೆ ಪರೀಕ್ಷೆ ಮುಗಿಸಿ ಮನೆ ಸೇರಲು ತೊಂದರೆಯಾಗುತ್ತಿತ್ತು. ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಂಶುಪಾಲರ ಸಂಘದವರು ಶಿಕ್ಷಣ ಇಲಾಖೆಗೆ ಮನವಿ ಮಾಡಿದ್ದರು.
ಇದೀಗ ಜಿಲ್ಲಾ ಪಿಯು ಇಲಾಖೆಯ ನಿರ್ದೇಶಕರು ಎಸ್ಎಸ್ಎಲ್ಸಿ ಪರೀಕ್ಷೆಯ ಬಿಡುವಿನ ನಡುವೆ ಮಾರ್ಚ್ 29 ರಿಂದ ಏ.13ರ ವರೆಗೆ ಬೆಳಿಗ್ಗೆ 9.30 ರಿಂದ 12.45ರವರೆಗೆ ಪರೀಕ್ಷೆ ನಡೆಸಲು ವೇಳಾಪಟ್ಟಿ ರಚಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯಲಿರುವ ಪಿಯು ಪರೀಕ್ಷಾ ವೇಳಾಪಟ್ಟಿಯನ್ನು ಗಮನಿಸಿರುವ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಇದೇ ರೀತಿಯಲ್ಲಿ ಪರೀಕ್ಷೆಯನ್ನು ಬೆಳಿಗ್ಗೆ ನಡೆಸಲು ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.