ಬೆಂಗಳೂರು: ಹಿಜಬ್-ಕೇಸರಿ ಶಾಲು ವಿವಾದದಿಂದಾಗಿ ಮುಚ್ಚಲಾಗಿದ್ದ ಶಾಲಾ-ಕಾಲೇಜುಗಳನ್ನು ನಾಳೆಯಿಂದಲೇ ಆರಂಭಿಸಬೇಕು. ತೀರ್ಪು ಬರುವವರೆಗೂ ವಿದ್ಯಾರ್ಥಿಗಳು ಹಿಜಬ್- ಕೇಸರಿ ಶಾಲು ಧರಿಸುವಂತಿಲ್ಲ ಎಂದು ಹೈಕೋರ್ಟ್ ಸೂಚಿಸಿದೆ.
ಪ್ರಕರಣದ ಕುರಿತು ಶೀಘ್ರವೇ ತೀರ್ಪು ನೀಡಲಾಗುವುದು. ಅಲ್ಲಿವರೆಗೂ ರಾಜ್ಯದಲ್ಲಿ ಯಥಾಸ್ಥಿತಿ ಕಾಪಾಡಬೇಕು ಎಂದು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ ಮಧ್ಯಂತರ ತೀರ್ಪು ನೀಡಿ ಆದೇಶಿಸಿದ್ದಾರೆ.
ಫೆ.14ರಂದು ಸೋಮವಾರ ಮಧ್ಯಾಹ್ನ 2.30ಕ್ಕೆ ವಿಚಾರಣೆ ಮುಂದೂಡಲಾಗಿದೆ. ಮುಂದಿನ ಆದೇಶದವರೆಗೆ ಯಾವುದೇ ಧಾರ್ಮಿಕ ಗುರುತುಗಳನ್ನು ಶಾಲಾ – ಕಾಲೇಜುಗಳಲ್ಲಿ ಬಳಸುವಂತಿಲ್ಲ. ಕಾಲೇಜು ಆಡಳಿತ ಮಂಡಳಿ ಸೂಚಿಸಿದ ಸಮವಸ್ತ್ರದಲ್ಲೇ ವಿದ್ಯಾರ್ಥಿಗಳು ಶಾಲೆಗೆ ಬರಬೇಕು ಎಂದು ಹೈಕೋರ್ಟ್ ತಿಳಿಸಿದೆ.
ವಿವಾದದ ಕಾರಣಕ್ಕಾಗಿ ಶಾಲೆಗಳನ್ನು ನಿಲ್ಲಿಸಿ, ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅಡ್ಡಿಪಡಿಸುವಂತಿಲ್ಲ. ಪ್ರಕರಣದ ಕುರಿತು ಅಂತಿಮ ತೀರ್ಪು ಬರುವವರೆಗೂ ಶಾಲಾ- ಕಾಲೇಜುಗಳು ನಿರಂತರವಾಗಿ ನಡೆಯಲಿ. ಯಾವುದೇ ವಿದ್ಯಾರ್ಥಿಗಳು ಶಾಲಾ ಆವರಣದಲ್ಲಿ ಹಿಜಬ್- ಕೇಸರಿ ಶಾಲು ಧರಿಸುವಂತಿಲ್ಲ ಎಂದು ಹೈಕೋರ್ಟ್ ಸೂಚಿಸಿದೆ.
ರಾಜ್ಯದಲ್ಲಿ ವಿವಾದವೆಬ್ಬಿಸಿರುವ ಹಿಜಬ್ – ಕೇಸರಿ ಶಾಲು ಪ್ರಕರಣದಲ್ಲಿ ಸರ್ಕಾರದ ಪರ ಪ್ರಭುಲಿಂಗ ನಾವದಗಿ, ಸಂಜಯ್ ಹೆಗಡೆ, ಶಾಲಾ ಸಮಿತಿ ಪರವಾಗಿ ಪೂವಯ್ಯ ಅವರು ವಾದ ಮಂಡಿಸಿದರೆ, ಅರ್ಜಿದಾರರ ಪರವಾಗಿ ದೇವದತ್ತ ಕಾಮತ್, ಮೊಹಮದ್ ತಾಹಿರ್ ವಾದ ಮಂಡಿಸಿದರು.
ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಸ್ತೃತ ಪೀಠದಲ್ಲಿ ವಿಚಾರಣೆ ನಡೆಯುತ್ತಿದ್ದು ನ್ಯಾ.ಖಾಜಿ ಜೈಬುನ್ನೀಸಾ, ನ್ಯಾ.ಕೃಷ್ಣ ಎಸ್ ದೀಕ್ಷಿತ್ ನೇತೃತ್ವದ ತ್ರಿಸದಸ್ಯ ಪೀಠದಲ್ಲಿ ಶಾಲಾ ಕಾಲೇಜುಗಳಲ್ಲಿ ಹಿಜಬ್ ಧರಿಸಲು ಅನುಮತಿ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಲಾಗುತ್ತಿದೆ.
ಫೆ.8, 9 ರಂದು ಎರಡು ದಿನಗಳ ಕಾಲ ಕೃಷ್ಣ ಎಸ್.ದೀಕ್ಷಿತ್ ಅವರಿದ್ದ ಏಕಸದಸ್ಯ ಪೀಠದಿಂದ ಹಿಜಬ್ ಕುರಿತ ಅರ್ಜಿಗಳ ವಿಚಾರಣೆ ನಡೆದ ಬಳಿಕ, ಪ್ರಕರಣ ಧರ್ಮ ಸೂಕ್ಷ್ಮವಾದ ಕಾರಣ ಇದನ್ನು ನ್ಯಾಯಮೂರ್ತಿಗಳು ವಿಸ್ತೃತ ಪೀಠಕ್ಕೆ ವರ್ಗಾಯಿಸಿದ್ದರು. ಇದೀಗ ಮೂವರು ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಹಿಜಾಬ್ ಕುರಿತ ಅರ್ಜಿಗಳ ವಿಚಾರಣೆ ನಡೆಯಿತು.
ಹಿಜಬ್ ವಿವಾದದ ಕಾರಣಕ್ಕಾಗಿ ಶಾಲೆಗಳನ್ನು ಸ್ಥಗಿತಗೊಳಿಸಬಾರದು ಎಂದು ಸರ್ಕಾರದ ವಿರುದ್ಧ ಸಿಜೆ ಬೇಸರ ವ್ಯಕ್ತಪಡಿಸಿ, ಇದಕ್ಕಾಗಿ ಶಿಕ್ಷಣವನ್ನು ಸ್ಥಗಿತ ಮಾಡುವುದು ಸರಿಯಲ್ಲ. ಶಾಲೆಗಳನ್ನು ಬೇಗನೇ ಆರಂಭಿಸಿ. ಹಿಜಾಬ್ ವಿವಾದದ ಕಾರಣಕ್ಕಾಗಿ ಮಕ್ಕಳನ್ನು ಶಿಕ್ಷಣದಿಂದ ದೂರು ಇಡುವುದು ಸರಿಯಲ್ಲ ಎಂದು ಸಿಜೆ ರಿತುರಾಜ್ ಅವಸ್ಥಿ ಹೇಳಿದರು. ಇದನ್ನು ಸರ್ಕಾರದ ಪರ ವಕೀಲರು ಒಪ್ಪಿಕೊಂಡಿದ್ದಾರೆ. ಇದೇ ವೇಳೆ, ಅರ್ಜಿದಾರರ ಪರ ವಕೀಲ ಕಾಮತ್ ಸ್ಕಾರ್ಫ್ ಧಾರ್ಮಿಕ ಆಚರಣೆಯ ಭಾಗ ಅಲ್ಲ ಇದು ಮೂಲಭೂತ ಹಕ್ಕು ಎಂದು ವಾದ ಮಂಡನೆ ಮಾಡಿದರು. ಈ ಸಂಬಂಧ ಮಧ್ಯಂತರ ಆದೇಶಕ್ಕೂ ಒತ್ತಾಯಿಸಿದ್ದರು.