ಬೆಳ್ತಂಗಡಿ:ಒಂದೇ ಜಾತಿ, ಒಂದೇ ಮತ, ಒಬ್ಬನೇ ದೇವರು ಎಂಬ ಮಹಾನ್ ಸಂದೇಶವನ್ನು ಸಾರಿದ ಜಗತ್ತಿನ ಶ್ರೇಷ್ಠ ಮಾನವತಾವಾದಿಗಳಲ್ಲೊಬ್ಬರಾದ ಪೂಜ್ಯ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ದ ಚಿತ್ರವನ್ನು ಗಣರಾಜ್ಯೋತ್ಸವ ಪರೇಡ್ ನಲ್ಲಿ ಭಾಗವಹಿಸಲು ಅವಕಾಶ ನಿರಾಕರಿಸಿದ ಕೇಂದ್ರ ಸರ್ಕಾರದ ನಡೆಯನ್ನು ವಿರೋಧಿಸಿ ಬೃಹತ್ ಸ್ವಾಭಿಮಾನಿ ನಡಿಗೆಯನ್ನು ಆಯೋಜಿಸಲಾಗಿದೆ. ಎಂದು ಗುರುನಾರಾಯಣ ಸೇವಾ ಸಂಘದ ಅಧ್ಯಕ್ಷ ಚಿದಾನಂದ ಪೂಜಾರಿ ಎಲ್ದಕ್ಕ , ಹಾಗೂ ಗೌರವಾಧ್ಯಕ್ಷ ವಸಂತ ಬಂಗೇರ ಹೇಳಿದರು. ಅವರು ಬೆಳ್ತಂಗಡಿ ಗುರುನಾರಾಯಣ ಸಭಾಭವನದಲ್ಲಿ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದರು.
ಜನವರಿ 26 ಬೆಳಿಗ್ಗೆ 9:30 ಕ್ಕೆ ಬೆಳ್ತಂಗಡಿ ಕುತ್ಯಾರು ಸೋಮನಾಥೇಶ್ವರ ದೇವಸ್ಥಾನದಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ದ ಚಿತ್ರದ ಮೆರವಣಿಗೆಯೊಂದಿಗೆ ಕಾಲ್ನಡಿಗೆ ಜಾಥವು ಬೆಳ್ತಂಗಡಿ ಗುರುನಾರಾಯಣ ಸಭಾಭವನದ ವರೆಗೆ ಸಾಗಿ ಗುರುನಾರಾಯಣ ಸಭಾಭವನದಲ್ಲಿರುವ ಗುರು ನಾರಾಯಣ ಮಂದಿರದಲ್ಲಿ ಗುರುಗಳಿಗೆ ವಿಶೇಷ ಪೂಜೆಯೊಂದಿಗೆ ಸಮಾಪನಗೊಳ್ಳಲಿದೆ. ನಂತರ ಸ್ತಬ್ದ ಚಿತ್ರದೊಂದಿಗೆ ಬೆಳ್ತಂಗಡಿಯಿಂದ ಕುದ್ರೋಳಿ ಗೋಕರ್ಣನಾಥೇಶ್ವರ ಕ್ಷೇತ್ರದಲ್ಲಿ ಕೇಂದ್ರದ ಮಾಜಿ ಸಚಿವರು, ಗೋಕರ್ಣನಾಥ ಕ್ಷೇತ್ರದ ನವೀಕರಣದ ರೂವಾರಿ ಬಿ. ಜನಾರ್ಧನ ಪೂಜಾರಿಯವರ ನೇತೃತ್ವದಲ್ಲಿ ನಡೆಯುವ ಸ್ವಾಭಿಮಾನಿ ಜಾಥದಲ್ಲಿ ಭಾಗವಹಿಸಲಿದೆ .
ಅಂದು ದೇವಸ್ಥಾನ ಪ್ರವೇಶ ನಿರಾಕರಿಸಿದ ಸಂದರ್ಭದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳು ಧಮನಿತ ಜನರ ಸ್ವಾಭಿಮಾನದ ಪ್ರತೀಕವಾಗಿ ಬೇರೆಯೇ ದೇವಸ್ಥಾನ ಸ್ಥಾಪಿಸಿದಂತೆ ಇಂದು ಕೇಂದ್ರ ಸರಕಾರ ಅವರ ಸ್ತಬ್ದ ಚಿತ್ರದ ಮೆರವಣಿಗೆಗೆ ಅವಕಾಶ ನೀಡದೇ ಇರುವ ಕ್ರಮವನ್ನು ವಿರೋಧಿಸಿ ಶಾಂತಿಯುತ ಪ್ರತಿರೋಧ ವ್ಯಕ್ತಪಡಿಸುವ ಸಲುವಾಗಿ ಸ್ವಾಭಿಮಾನದ ನಡಿಗೆ ಮೂಲಕ ಗುರುಗಳ ಸಂದೇಶವನ್ನು ವ್ಯಾಪಕವಾಗಿ ಪಸರಿಸಲು ನಿರ್ಧರಿಸಲಾಗಿದೆ. ಅದುದರಿಂದ ಗುರುನಾರಾಯಣ ಸ್ವಾಮಿ ಸೇವಾ ಸಂಘ (ರಿ) ,ಬೆಳ್ತಂಗಡಿ ಇದರ ನೇತೃತ್ವದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳನ್ನು ಕುಲಗುರು ಎಂದು ಆರಾಧಿಸಿಕೊಂಡು ಬರುತ್ತಿರುವ ಎಲ್ಲಾ ಸ್ವಾಭಿಮಾನಿ ಬಿಲ್ಲವರು, ನಾರಾಯಣ ಗುರುಗಳ ಭಕ್ತರು, ಅನುಯಾಯಿಗಳು ಮತ್ತು ಸಮಾನ ಮನಸ್ಕ ಸಂಘಟನೆಗಳು ಹಾಗೂ ಪಕ್ಷಾತೀತವಾಗಿ ನಡೆಯುವ ಈ ಕಾಲ್ನಡಿಗೆ ಜಾಥದಲ್ಲಿ ತಾಲೂಕಿನ ಎಲ್ಲಾ ರಾಜಕೀಯ ಪಕ್ಷಗಳು ವಿವಿಧ ಜಾತಿ ಸಂಘಟನೆಗಳು ಭಾಗವಹಿಸಿ ಜಾಥವನ್ನು ಬೆಂಬಲಿಸುವಂತೆ ವಿನಂತಿಸಿದರು.ಈ ಸಂದರ್ಭದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಅಧ್ಯಕ್ಷರುಗಳಾದ ಪಿತಾಂಬರ ಹೆರಾಜೆ, ಭಗೀರಥ ಜಿ.,ಜಯರಾಮ ಬಂಗೇರ, ಕಾರ್ಯದರ್ಶಿ ಜಯವಿಕ್ರಮ ಕಲ್ಲಾಪು ಉಪಸ್ಥಿತರಿದ್ದರು.