ಮತಾಂತರ ನಿಷೇಧ ಕಾಯ್ದೆ ವಾಪಸ್ ಪಡೆಯುವಂತೆ ಒತ್ತಾಯ: ಸಿಪಿಐ(ಎಂ) ಬೆಳ್ತಂಗಡಿ ತಾಲೂಕು ಸಮಿತಿಯಿಂದ ಪ್ರತಿಭಟನೆ

 

 

 

 

ಬೆಳ್ತಂಗಡಿ: ರಾಜ್ಯದ ಬಿಜೆಪಿ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಮತಾಂತರ ನಿಷೇಧ ಕಾಯ್ದೆ ಸಂವಿಧಾನ ವಿರೋಧಿ. ಇದು ಸಂವಿಧಾನದ ಕಗ್ಗೊಲೆ ‌ಮಾತ್ರವಲ್ಲದೇ ಅತ್ಯಂತ ಅಮಾನವೀಯ ಕಾಯ್ದೆ ಎಂದು ಸಿಪಿಐ(ಎಂ) ಬೆಳ್ತಂಗಡಿ ತಾಲೂಕು ಕಾರ್ಯದರ್ಶಿ , ನ್ಯಾಯವಾದಿ ಶಿವಕುಮಾರ್ ಎಸ್. ಎಂ ಹೇಳಿದರು.
ಅವರು ಬೆಳ್ತಂಗಡಿ ಮಿನಿ ವಿಧಾನಸೌಧದ ಎದುರು ಸಿಪಿಐ(ಎಂ) ಬೆಳ್ತಂಗಡಿ ತಾಲೂಕು ಸಮಿತಿ ನೇತೃತ್ವದಲ್ಲಿ ನಡೆದ ಮತಾಂತರ ನಿಷೇಧ ಕಾಯ್ದೆಯನ್ನು ವಾಪಸ್ ಪಡೆಯಲು ಒತ್ತಾಯಿಸಿ ನಡೆದ ಪ್ರತಿಭಟನೆ ಉದ್ದೇಶಿಸಿ ಮಾತನಾಡುತ್ತಿದ್ದರು.
ಬಿಜೆಪಿ ಸರ್ಕಾರ ಜಾರಿಗೊಳಿಸಿದ ಮತಾಂತರ ನಿಷೇಧ ಕಾಯಿದೆಯು ಸಮಾಜದಲ್ಲಿ ಧರ್ಮ, ಧರ್ಮಗಳ ನಡುವೆ ಅಪನಂಬಿಕೆ ಮೂಡಿಸಿ , ಅಶಾಂತಿ ಸೃಷ್ಟಿಸುವಂತಿದೆ. ಸಂಘಪರಿವಾರ ಈ ಕಾಯ್ದೆಯನ್ನು ದುರುಪಯೋಗ ಮಾಡಿಕೊಂಡು ಅಮಾಯಕರ ಮೇಲೆ ದಾಳಿ , ದೌರ್ಜನ್ಯ ನಡೆಸುವ ಸಾಧ್ಯತೆಯಿದೆ ಎಂದ ಅವರು ರಾಜ್ಯ ಸರ್ಕಾರ ತಕ್ಷಣ ಈ ಕಾಯ್ದೆಯನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಸಿಪಿಐ(ಎಂ) ನಾಯಕ ಶೇಖರ್ ಲಾಯಿಲ ಬುದ್ಧಿಮಾಂದ್ಯರು , ದಲಿತರು ಮತಾಂತರಗೊಂಡರೆ 10 ವರ್ಷ ಜೈಲು ಶಿಕ್ಷೆ ವಿಧಿಸುವ ಕ್ರಮ ಅತ್ಯಂತ ಅವಿವೇಕಿತನದ್ದು. ಇದರ ಪ್ರಕಾರ ದಲಿತರು ಬುದ್ಧಿಮಾಂದ್ಯರಿಗೆ ಸಮ ಎನ್ನುವ ಮೂಲಕ ಇಡೀ ದಲಿತ ಸಮುದಾಯಕ್ಕೆ ಅವಮಾನ ಮಾಡಿದೆ. ರಾಜ್ಯ ಸರ್ಕಾರ ತಕ್ಷಣ ದಲಿತ ಸಮುದಾಯದ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು. ಈ ಕಾಯ್ದೆ ಮನುಸ್ಮೃತಿಯ ಮೂಲ ತತ್ವವನ್ನು RSS ನ ಅಜೆಂಡಾದಂತೆ ರಾಜ್ಯ ಸರ್ಕಾರ ಜಾರಿ ಮಾಡುತ್ತಿದೆ. ಹಿಂದೂ ಧರ್ಮದಲ್ಲಿರುವ ಅಸ್ಪೃಶ್ಯತೆ , ದಬ್ಬಾಳಿಕೆ , ದೌರ್ಜನ್ಯವನ್ನು ತೊಡೆದುಹಾಕಲು ಕಠಿಣ ಕಾಯ್ದೆ , ಕಾನೂನುಗಳನ್ನು ಜಾರಿಗೆ ತರುವ ಬದಲಾಗಿ ಹಿಂದೂ ಧರ್ಮದ ಅಸಮಾನತೆಯನ್ನು ವಿರೋಧಿಸಿ ಸಂವಿಧಾನ ಬದ್ದವಾಗಿ ಇನ್ನೊಂದು ಧರ್ಮವನ್ನು ಸ್ವೀಕರಿಸಿದರೆ ತಪ್ಪು ಹೇಗಾಗುತ್ತದೆ ಎಂದು ಪ್ರಶ್ನಿಸಿದ ಅವರು ದೇಶದ ಸಂವಿಧಾನ ಒಬ್ಬ ವ್ಯಕ್ತಿ ತನ್ನ ಮತ , ಧರ್ಮವನ್ನು ತನಗೆ ತನ್ನ ಇಷ್ಟದಂತೆ ಬದಲಾಯಿಸಲು ಅನುವು ಮಾಡಿಕೊಡುತ್ತದೆ ಎಂಬ ಸಾಮಾನ್ಯ ಜ್ಞಾನ ಇಲ್ಲದವರಂತೆ ಸಂವಿಧಾನದ ಮೇಲೆ ಸವಾರಿ ನಡೆಸುವ ಈ ಕಾಯ್ದೆಯನ್ನು ತಕ್ಷಣ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯ ನೇತೃತ್ವವನ್ನು ಸಿಪಿಐ(ಎಂ) ತಾಲೂಕು ಸಮಿತಿ ಮುಖಂಡರಾದ ವಸಂತ ನಡ , ನ್ಯಾಯವಾದಿ ಸುಕನ್ಯಾ ಹೆಚ್ , ಸುಧಾ ಕೆ ರಾವ್ , ಕೆ.ಜೆ ಜೋಸ್‌‌ ಕಳೆಂಜ , ಬೇಬಿ ಕಳೆಂಜ , ಜಯನ್ ಮುಂಡಾಜೆ , ಡಿವೈಎಫ್ಐ ತಾಲೂಕು ಮುಖಂಡರಾದ ಸುಜೀತ್ ಉಜಿರೆ , ಸಂಜೀವ ಆರ್ ಅತ್ತಾಜೆ , ಸುಹಾಸ್ ಬೆಳ್ತಂಗಡಿ , ಸುದೀಪ್ ಬೆಳ್ತಂಗಡಿ ವಹಿಸಿದ್ದರು.

error: Content is protected !!