ಕೇಂದ್ರ ಆಯ್ಕೆ ಸಮಿತಿ ನಿಲುವು ವಿರೋಧಿಸಿ,‌ ಪರೇಡ್ ನಲ್ಲಿ ಗುರುಗಳ ಸ್ತಬ್ಧಚಿತ್ರ ಪ್ರದರ್ಶನ ಅವಕಾಶಕ್ಕೆ ಒತ್ತಾಯ: ಕೇಂದ್ರ ಸರ್ಕಾರದ ನಿರ್ಧಾರ ಮಹಾನ್ ಸಂತ ನಾರಾಯಣ ಗುರುಗಳಿಗೆ ಮಾಡಿರುವ ಅವಮಾನ ಬೆಳ್ತಂಗಡಿ ಶ್ರೀ ಗುರುನಾರಾಯಣ ಸೇವಾ ಸಂಘ ಸುದ್ದಿಗೋಷ್ಠಿ

 

 

 

ಬೆಳ್ತಂಗಡಿ: ಗಣರಾಜ್ಯೋತ್ಸವ ಪೆರೇಡ್ ಗಾಗಿ ಕೇರಳ ಸರ್ಕಾರ ಸೂಚಿಸಿದ್ದ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ತಿರಸ್ಕರಿಸಿ
ಕೇಂದ್ರ ಸರ್ಕಾರ ಕೈಗೊಂಡಿರುವ ನಿರ್ಧಾರ ಮಹಾನ್ ಸಂತ ನಾರಾಯಣ ಗುರುಗಳಿಗೆ ಮಾಡಿರುವ ಅವಮಾನ
ವಾಗಿದ್ದು ಇದನ್ನು ಬೆಳ್ತಂಗಡಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ, ಯುವ ಬಿಲ್ಲವ ವೇದಿಕೆ, ಮಹಿಳಾ ಬಿಲ್ಲವ ವೇದಿಕೆ, ಬೆಳ್ತಂಗಡಿ ಯುವವಾಹಿನಿ ಘಟಕ ಮತ್ತು ವೇಣೂರು ಯುವವಾಹಿನಿ ಘಟಕಗಳು ಸಂಯುಕ್ತವಾಗಿ ಖಂಡಿಸುತ್ತೇವೆ ಎಂದು ಸಂಘದ ಅಧ್ಯಕ್ಷ ಚಿದಾನಂದ ಪೂಜಾರಿ ಎಲ್ಡಕ್ಕ ಹೇಳಿದರು.
ಅವರು ಶ್ರೀ ಗುರು ನಾರಾಯಣ ಸಭಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
ಸಂಘದ ಮಾಜಿ ಉಪಾಧ್ಯಕ್ಷ ಮನೋಹರ್ ಕುಮಾರ್ ಇಳಂತಿಲ ಮಾತನಾಡಿ, ಅಸ್ಪೃಶ್ಯತೆಯ ಬೆಂಕಿಯಲ್ಲಿ ನಲುಗಿ ಹೋಗಿದ್ದ ಸಮಾಜದ ಧ್ವನಿಯಾಗಿ ನಿಂತು ಜಾತಿ ತಾರತಮ್ಯದ ವಿರುದ್ಧ ಹೋರಾಟ ನಡೆಸಿ ಸಮಾಜದ ಪರಿವರ್ತನೆಗೆ ಕಾರಣರಾದ ಕೋಟ್ಯಂತರ ಜನರಿಂದ ಆರಾಧನೆಗೊಳ್ಳುತ್ತಿರುವವರು ಬ್ರಹ್ಮ ಶ್ರೀ ನಾರಾಯಣಗುರುಗಳು. ಇವರು ಮೂಲತಃ ಕೇರಳದವರು ಎಂಬ ಬಗ್ಗೆ ದಾಖಲೆಗಳಿವೆ. ಶತಮಾನದ ಹಿಂದೆ ನಾರಾಯಣ ಗುರುಗಳು ನಡೆಸಿದ ಸುಧಾರಣೆಗಳ ಬಗ್ಗೆ ದಾಖಲೆಗಳು ಲಭ್ಯವಿದ್ದು ಶೋಷಣೆ, ಜಾತಿಯತೆ, ಅಸಮಾನತೆ ವಿರುದ್ಧ ಸಿಡಿದು ನಿಂತು ಶಿಕ್ಷಣದಿಂದ ವಂಚಿತರಾದ ಕೆಳವರ್ಗದ ಶೈಕ್ಷಣಿಕ ಕ್ರಾಂತಿಗೆ ನಾಂದಿ ಹಾಡಿದವರು. ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂದು ಸಾರಿ ಸಮಾನತೆಯ ಬದುಕಿಗಾಗಿ ಹೋರಾಟ ನಡೆಸಿದಂತಹ ಮಹಾನ್ ವ್ಯಕ್ತಿಗೆ ಕೇಂದ್ರ ಸರ್ಕಾರ ರಚಿಸಿರುವ ಆಯ್ಕೆ ಸಮಿತಿ ಅಪಮಾನ ಮಾಡಿದೆ. ಈ ಕೂಡಲೇ ಕೇಂದ್ರ ಸರ್ಕಾರ ದೇಶದ ಜನತೆಯ ಕ್ಷಮೆಯಾಚಿಸಿ ಗುರುಗಳ ಸ್ತಬ್ಧಚಿತ್ರವನ್ನು ಮೆರವಣಿಗೆಯಲ್ಲಿ ಸೇರಿಸಲು ಕ್ರಮಕೈಗೊಳ್ಳಬೇಕು ಎಂದರು.
ಕೊರೊನ ನೀತಿ ನಿಯಮಗಳು ಇರುವ ಕಾರಣ ಈ ಕುರಿತು ಪ್ರತಿಭಟನೆ ಮಾಡುತ್ತಿಲ್ಲ. ಕೇಂದ್ರ ತನ್ನ ನಿಲುವು ಬದಲಾಯಿಸದಿದ್ದರೆ ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆ ಮಾಡಲಾಗುವುದು. ನಾರಾಯಣ ಗುರುಗಳಿಗೆ ಆಗಿರುವ ಅವಮಾನದ ಕುರಿತು ನಮ್ಮ ಸಂಸದರು, ಶಾಸಕರ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇವೆ. ಅವರೂ ಕೇಂದ್ರದ ಆಯ್ಕೆ ಸಮಿತಿಯ ನಿಲುವನ್ನು ವಿರೋಧಿಸಿ ನಾರಾಯಣ ಗುರುಗಳ ಸ್ತಬ್ಧಚಿತ್ರವನ್ನು ಪೆರೇಡ್ ನಲ್ಲಿ ಆಳವಡಿಸಲು ಅವಕಾಶ ಮಾಡಿ ಕೊಡುತ್ತಾರೆ ಎಂಬ ಭರವಸೆ ಇದೆ ಎಂದರು
ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಶೇಖರ ಬಂಗೇರ, ಕಾರ್ಯದರ್ಶಿ ಜಯ ವಿಕ್ರಮ ಕಲ್ಲಾಪು ಕೋಶಾಧಿಕಾರಿ ಅಭಿನಂದನ್ ಹರೀಶ್, ನಿರ್ದೇಶಕರುಗಳಾದ ಸೂರ್ಯನಾರಾಯಣ ಡಿ.ಕೆ., ದಿನೇಶ್ ಕೋಟ್ಯಾನ್, ಅರುಣೆಂದ್ರ, ಲಕ್ಷ್ಮಣ ಪೂಜಾರಿ, ಯಶೋಧ ಕುತ್ಲೂರು, ಪುಷ್ಪಾವತಿ ನಾವರ, ಪುರುಷೋತ್ತಮ ಧರ್ಮಸ್ಥಳ, ರಮೇಶ್ ಪೂಜಾರಿ ಪಡ್ದಾಯಿಮಜಲು, ಗೋಪಾಲ ಪೂಜಾರಿ ಮಚ್ಚಿನ,
ಯುವ ಬಿಲ್ಲವ ವೇದಿಕೆ ಅಧ್ಯಕ್ಷ ನಿತೀಶ್ ಕೋಟ್ಯಾನ್, ಉಪಾಧ್ಯಕ್ಷ ಹರೀಶ್ ಸುವರ್ಣ ಕನ್ಯಾಡಿ, ಕಾರ್ಯದರ್ಶಿ ಸತೀಶ್ ಪಿ.ಎನ್., ಮಹಿಳಾ ಬಿಲ್ಲವ ವೇದಿಕೆ ಕಾರ್ಯದರ್ಶಿ ಶಾಂಭವಿ ಪಿ ಬಂಗೇರ, ಯುವವಾಹಿನಿ ಬೆಳ್ತಂಗಡಿ ಘಟಕದ ಅಧ್ಯಕ್ಷೆ ಸುಜಾತ ಅಣ್ಣಿ ಪೂಜಾರಿ, ವೇಣೂರು ಘಟಕದ ಅಧ್ಯಕ್ಷ ಯೋಗೀಶ್ ಪೂಜಾರಿ ಬಿಕ್ರೊಟ್ಟು , ವೇಣೂರು ಬಿಲ್ಲವ ಸಂಘದ ಅಧ್ಯಕ್ಷ ಹರೀಶ್ ಕುಮಾರ್ ಪೊಕ್ಕಿ ಇದ್ದರು.

error: Content is protected !!