ಬೆಳ್ತಂಗಡಿ: ಶತಮಾನದ ಹಿಂದೆ ಜಾತಿ ತಾರತಮ್ಯ ಮತ್ತು ಸಾಮಾಜಿಕ ಅಸಮಾನತೆಯ ವಿರುದ್ಧ ಹೋರಾಟ ನಡೆಸಿ ಹಿಂದುಳಿದ ಸಮುದಾಯದ ಏಳಿಗೆಗಾಗಿ ದುಡಿದ ಜಗತ್ತಿನ ಮಹಾನ್ ಸಂತ ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ಥಬ್ದ ಚಿತ್ರವನ್ನು ಗಣರಾಜ್ಯೋತ್ಸವ ಪರೇಡ್‍ಗೆ ಸೂಚಿಸಿದ್ದ ಕೇರಳ ಸರಕಾರದ ಪ್ರಸ್ತಾವನೆಯನ್ನು ತಿರಸ್ಕರಿಸುವ ಮೂಲಕ ಕೇಂದ್ರ ಸರಕಾರ ನಾರಾಯಣ ಗುರುಗಳಿಗೆ ಅವಮಾನ ಮಾಡಿದೆ ಎಂದು ಮಾಜಿ ಶಾಸಕ ವಸಂತ ಬಂಗೇರ ಪತ್ರಿಕಾ ಹೇಳಿಕೆ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎನ್ನುವ ತತ್ವವನ್ನು ಜಗತ್ತಿಗೆ ಸಾರಿದ ಮಹಾನ್ ಸಂತ ಬ್ರಹ್ಮಶ್ರೀ ನಾರಾಯಣಗುರುಗಳಿಗೆ ಈ ರೀತಿ ಅವಮಾನ ಮಾಡುವುದು ಅಕ್ಷಮ್ಯ ಅಪರಾಧವಾಗಿದ್ದು ಕೇಂದ್ರ ಸರಕಾರ ತಕ್ಷಣ ಈ ನಿರ್ಧಾರದಿಂದ ಹಿಂದೆ ಸರಿದು, ನಾರಾಯಣ ಗುರುಗಳ ಟ್ಯಾಬ್ಲೊಗೆ ಅವಕಾಶ ಮಾಡಿಕೊಡಬೇಕು. ಇಲ್ಲವಾದಲ್ಲಿ ತೀವ್ರ ಹೋರಾಟ ಎದುರಿಸಬೇಕಾದಿತು. ಈ ವಿಚಾರದಲ್ಲಿ ರಾಜ್ಯಬಿ.ಜೆ.ಪಿ ಅಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲು ಹಾಗೂ ದ.ಕ ಜಿಲ್ಲೆಯ ಮಂತ್ರಿಗಳು ಮತ್ತು ಶಾಸಕರು ತುಟಿ ಬಿಚ್ಚದೆ ಇರುವುದು ಆಶ್ಚರ್ಯದ ಸಂಗತಿಯಾಗಿದೆ. ಇವರಿಗೆ ಪ್ರಧಾನಿ ಮೋದಿ ವಿರುದ್ಧ ತುಟಿ ಬಿಚ್ಚುವ ಧೈರ್ಯವೂ ಇಲ್ಲವಾಗಿದೆ ಎಂದು ಹೇಳಿಕೆ ನೀಡಿದ್ದಾರೆ.