ಶಾಸಕ ಹರೀಶ್ ಪೂಂಜಾರಿಂದ ಧರ್ಮಸ್ಥಳದಲ್ಲಿ ಮಹಾ ಮೃತ್ಯುಂಜಯ ಹೋಮ: ಪ್ರಧಾನಿ ನರೇಂದ್ರ ಮೋದಿ ಆರೋಗ್ಯ ವೃದ್ಧಿ, ದೀರ್ಘಾಯುಷ್ಯ ಪ್ರಾಪ್ತಿಗಾಗಿ ಪ್ರಾರ್ಥನೆ: ವೇ| ನಾಗೇಂದ್ರ ಭಾರದ್ವಾಜ್ ಸುರತ್ಕಲ್ ನೇತೃತ್ವದಲ್ಲಿ ಧಾರ್ಮಿಕ ವಿಧಿ ವಿಧಾನ: ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಆಯೋಜನೆ

 

 

 

ಬೆಳ್ತಂಗಡಿ: ಪ್ರಧಾನಿ ನರೇಂದ್ರ ಮೋದಿಯವರ ಆರೋಗ್ಯ ವೃದ್ದಿ ಮತ್ತು ದೀರ್ಘಾಯುಷ್ಯ ಪ್ರಾಪ್ತಿಗಾಗಿ ಶಾಸಕ ಹರೀಶ್ ಪೂಂಜಾ ಅವರ ವತಿಯಿಂದ ಪ್ರಧಾನ ಪುರೋಹಿತರಾದ ವೇದಮೂರ್ತಿ ನಾಗೇಂದ್ರ ಭಾರದ್ವಾಜ್ ಸುರತ್ಕಲ್ ನೇತೃತ್ವದಲ್ಲಿ ಸೋಮವಾರ ಮಹಾ ಮೃತ್ಯುಂಜಯ ಹೋಮ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ನೆರವೇರಿತು.

 

ಸಪ್ತ ಕುಂಡಗಳಲ್ಲಿ ಹೋಮ:

ಏಳು ಪ್ರದಾನ ಹೋಮಕುಂಡ ರಚಿಸಲಾಗಿತ್ತು. ಸದ್ಯೋಜಾತ ಕುಂಡ, ವಾಮದೇವ ಕುಂಡ, ಅಘೋರ ಕುಂಡ, ತತ್ಪುರಷ ಕುಂಡ, ಈಶಾನ ಕುಂಡ, ತ್ರಯಂಬಕ‌ ಕುಂಡ, ಮೃತ್ಯುಂಜಯ ಕುಂಡ ಹೀಗೆ ಸಪ್ತ ಪ್ರಧಾನ ಹೋಮ ಕುಂಡಗಳಲ್ಲಿ ಹೋಮ ನಡೆಸಿ, ಪ್ರಧಾನ ಕುಂಡದಲ್ಲಿ ಕಲ್ಪೋಕ್ತ ಪೂಜೆ ನಡೆಸಲಾಯಿತು.‌ ಬಳಿಕ
ಮಹಾ ಮೃತ್ಯುಂಜಯ ಹೋಮದ ಕಾರ್ಯದಲ್ಲಿ ಭಾಗಿಯಾಗಿದ್ದ ಹೆಗ್ಗಡೆಯವರು, ಸಚಿವರುಗಳು, ಪಕ್ಷದ ಜವಾಬ್ದಾರಿ ಹೊಂದಿದ ಪ್ರಮುಖರು, ಮೋದಿ ಅಭಿಮಾನಿಗಳು, ಭಕ್ತರ ಹಾಗೂ
ಎಲ್ಲರ ಸಮ್ಮುಖದಲ್ಲಿ ಮಹಾ ಪೂರ್ಣಾಹುತಿ ನಡೆಯಿತು.

 

 

 

 

 

ಪುರೋಹಿತರಾದ ಸುಬ್ರಹ್ಮಣ್ಯ ಕಾರಂತ್, ಸುಧೀರ್ ಮರಾಠೆ ಮಾರ್ಗದರ್ಶನದಲ್ಲಿ ಸುಮಾರು 100ಕ್ಕೂ ಅಧಿಕ‌ ಪುರೋಹಿತರು ಹೋಮದ ಕಾರ್ಯದಲ್ಲಿ ಭಾಗವಹಿಸಿದ್ದರು. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಸಮ್ಮುಖದಲ್ಲಿ ಭಾನುವಾರ ಸಂಜೆ ಸಾಮೂಹಿಕ ಪ್ರಾರ್ಥನೆ, ಪುಣ್ಯಹವಾಚನ, ಯಾಗ ಮಂಟಪ ಶುದ್ದಿ, ಋತ್ವಿಕ್ ವರಣಿ, ವಾಸ್ತು ಬಲಿ, ವಾಸ್ತು ಹೋಮ, ಸ್ಥಳ ಶುದ್ಧಿ, ಕಲಶ ಪ್ರತಿಷ್ಠೆ, ಅರಣಿಯಲ್ಲಿ ಅಗ್ನಿ‌ಜನನ, ಒಂದು ಲಕ್ಷ ಮೃತ್ಯುಂಜಯ ಜಪ ಆರಂಭ, ಶತರುದ್ರ ಪಾರಾಯಣ, ಮಹಾಪೂಜೆ, ಅಷ್ಟವಧಾನ ಸೇವೆ ನಡೆಯಿತು.

 

 

ದೂರವಾಗಬೇಕು ದೋಷ:ವೀರೇಂದ್ರ ಹೆಗ್ಗಡೆ

ಧರ್ಮಾಧಿಕಾರಿ‌ ಡಾ.ಡಿ.‌ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ರಾಷ್ಟ್ರನಾಯಕರಿಗೆ ಯಾವುದೇ ದೋಷವಿದ್ದರೂ ಅದು ದೂರವಾಗಬೇಕೆಂಬ ಉದ್ದೇಶದಿಂದ ರಾಜ್ಯದ ಜನತೆ ಪರವಾಗಿ ಶಾಸಕ ಹರೀಶ್ ಪೂಂಜ ಮಹಾ ಮೃತ್ಯುಂಜಯ ಹೋಮ ನಡೆಸಿದ್ದಾರೆ. ಕಲಿಯುಗದಲ್ಲಿ ವೇದ-ಪಾರಂಗತರು ತೇಜಸ್ವಿಗಳು ಇರುವುದು ಅಪರೂಪ. ವಿಶೇಷ ಋತ್ವಿಜರಿಂದ ಶ್ರೀ ಮಂಜುನಾಥನ ಸನ್ನಿಧಿಯಲ್ಲಿ ನಡೆದ ಈ ಹೋಮ ಎಲ್ಲರಿಗೂ ಶುಭವನ್ನು ತರಲಿದೆ ಎಂದರು.

 

ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ, ನಾಸ್ಟರ್ ಡಾಮಸ್ ಭವಿಷ್ಯ ನುಡಿದಂತೆ ಮೋದಿಯವರು ಭಾರತದ ಸಂಸ್ಕೃತಿಯನ್ನು ಬೆಳಕಿಗೆ ತಂದು ವಿಶ್ವವಿಖ್ಯಾತರಾಗಿದ್ದಾರೆ. ಪಂಜಾಬ್ ನ ಭದ್ರತಾ ವೈಫಲ್ಯದಿಂದ ವಿಶ್ವಕ್ಕೆ ಆಘಾತವಾಗಿದೆ. ವ್ಯವಸ್ಥಿತ ರೂಪದಲ್ಲಿ ಸಂಚನ್ನು ನಡೆಸಲಾಗಿತ್ತು. ಆದರೆ ಅದು ದೈವಶಕ್ತಿಯ ಕೃಪೆಯಿಂದ ವಿಫಲವಾಗಿದೆ. ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ನಡೆದಿರುವ ಮಹಾ ಮೃತ್ಯುಂಜಯ ಹೋಮ ಪ್ರಧಾನಿಯವರಿಗೆ ಇನ್ನಷ್ಟು ಬಲವನ್ನು ನೀಡಲಿದೆ ಎಂದರು.

 

ತಾಲೂಕಿನ ದೇಗುಲಗಳಲ್ಲಿ ಹೋಮ:

ಧರ್ಮಸ್ಥಳದಲ್ಲಿ ನಡೆದ
ಮಹಾ ಮೃತ್ಯುಂಜಯ ಹೋಮಕ್ಕಿಂತ ಮೊದಲು
ತಾಲೂಕಿನ ಸುಮಾರು 25 ಶಿವ ದೇವಾಲಯದಲ್ಲಿ ಮೃತ್ಯುಂಜಯ ಹೋಮ‌ ಮತ್ತು ಪ್ರಾರ್ಥನೆ ನಡೆಸಲಾಗಿತ್ತು.‌
ತಾಲೂಕಿನ ಪ್ರಮುಖ ಶಿವ ದೇವಾಲಯಗಳಾದ ಕುತ್ಯಾರು ಸೋಮನಾಥೇಶ್ವರ, ಮರೋಡಿ ಉಮಾಮಹೇಶ್ವರ, ಕಾಶಿಪಟ್ಣ ಪಂಚಲಿಂಗೇಶ್ವರ, ಗರ್ಡಾಡಿ ನಂದಿಕೇಶ್ವರ, ಶಿರ್ಲಾಲು ಮಹಾಲಿಂಗೇಶ್ವರ, ಮಲ್ಲಿಪ್ಪಾಡಿ ಸದಾಶಿವೇಶ್ವರ, ಓಡಿಲು ಮಹಾಲಿಂಗೇಶ್ವರ, ಅಳದಂಗಡಿ ಸೋಮನಾಥೇಶ್ವರಿ, ನಾವರ ಮಹಾಲಿಂಗೇಶ್ವರ, ಕೇಳ್ಕರ ಮಹಾಲಿಂಗೇಶ್ವರ, ಸುರ್ಯ ಸದಾಶಿವೇಶ್ವರ, ನಿಡಿಗಲ್ ಲೋಕನಾಥೇಶ್ವರ, ಇಂದಬೆಟ್ಟು ಅರ್ಧನಾರೀಶ್ವರ, ಕೂಡಬೆಟ್ಟು ಸದಾಶಿವೇಶ್ವರ, ಕಳೆಂಜ ಸದಾಶಿವೇಶ್ವರ, ರುದ್ರಗಿರಿ ಮೃತ್ಯುಂಜಯ, ಕೋರಿಂಜ ಪಂಚಲಿಂಗೇಶ್ವರ, ಕರಾಯ ಮಹಾಲಿಂಗೇಶ್ವರ, ಕುರಾಯ ಸದಾಶಿವೇಶ್ವರ, ಮಲೆಂಗಲ್ಲು ಉಮಾ ಮಹೇಶ್ವರ, ಪಜಿರಡ್ಕ ಸದಾಶಿವೇಶ್ವರ, ಬಯಲು, ಅಪ್ಪಿಲ ಉಮಾಮಹೇಶ್ವರ, ಚಾರ್ಮಾಡಿ ಪಂಚಲಿಂಗೇಶ್ವರ ಮೊದಲಾದ ಶಿವ ದೇವಾಲಯದಲ್ಲಿ ಆಯಾಯ ದೇವಾಲಯಗಳ ಆಡಳಿತ ಮಂಡಳಿ, ಊರಿನ ಗಣ್ಯರ, ಪ್ರಮುಖರ ಹಾಗೂ ದೇವಾಲಯಗಳ ಅರ್ಚಕರ ನೇತೃತ್ವದಲ್ಲಿ ಮೃತ್ಯುಂಜಯ ಹೋಮ ನಡೆದಿತ್ತು.
ಜ.17ರಂದು ಬೆಳಗ್ಗಿನಿಂದಲೇ ಪುಣ್ಯಹ ವಾಚನ, ಚರ್ತುವೇದ ಪಾರಾಯಣ ಆರಂಭ, ಗೋ ಪೂಜೆ (ಅಶ್ವ ಪೂಜೆ, ಗಜ ಪೂಜೆ), ಆರು ತೆಂಗಿನಕಾಯಿಯ ಗಣಪತಿ ಹೋಮ ನೆರವೇರಿತು.
ಮೃತ್ಯುಂಜಯ ಹೋಮದ ಧಾರ್ಮಿಕ ವಿಧಿ ವಿಧಾನದಲ್ಲಿ ಹರೀಶ್ ಪೂಂಜ‌ ದಂಪತಿ ಭಾಗಿಯಾದರು. ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ.‌ವೀರೇಂದ್ರ ಹೆಗ್ಗಡೆ, ಹೇಮಾವತಿ ವೀ. ಹೆಗ್ಗಡೆ, ಡಿ.‌ಹರ್ಷೇಂದ್ರ ಕುಮಾರ್,
ಸಚಿವರಾದ ಕೆ.ಎಸ್.ಈಶ್ವರಪ್ಪ, ಸಿ.ಸಿ.ಪಾಟೀಲ್, ಶಶಿಕಲಾ ಜೊಲ್ಲೆ, ವಿಧಾನ ಪರಿಷತ್  ಶಾಸಕ ಕೆ. ಪ್ರತಾಪಸಿಂಹ ನಾಯಕ್ , ಪ್ರಮುಖರಾದ ಹರಿಕೃಷ್ಣ ಬಂಟ್ವಾಳ್, ಶಶಿಧರ್ ಶೆಟ್ಟಿ ನವಶಕ್ತಿ ಗುರುವಾಯನಕೆರೆ   ಹಾಗೂ ಬಿಜೆಪಿಯ   ಪ್ರಮುಖರು ಭಾಗವಹಿಸಿದ್ದರು.
ಮೃತ್ಯುಂಜಯ ಹೋಮ ನಡೆದಿದ್ದ ದೇವಾಲಯಗಳ ಆಡಳಿತ ಮೊಕ್ತೇಸರರು, ವ್ಯವಸ್ಥಾಪನಾ ಸಮಿತಿ ಸದಸ್ಯರುಗಳು, ಪ್ರಮುಖರು, ಗ್ರಾ.ಪಂ. ಸದಸ್ಯರುಗಳು, ಪ್ರಧಾನಿ ನರೇಂದ್ರ ಮೋದಿ ಅಭಿಮಾನಿಗಳು, ಭಕ್ತಾದಿಗಳು ಉಪಸ್ಥಿತರಿದ್ದರು.

error: Content is protected !!