ಬೆಳ್ತಂಗಡಿ; ರಬ್ಬರ್ ಟ್ಯಾಪಿಂಗ್ ಮಾಡುವ ಕಾರ್ಮಿಕರು ಅವಿಭಜಿತ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಸುಮಾರು 10 ಸಾವಿರ ದಷ್ಟಿದ್ದು ಇವರಿಗೆ ಕೆಲಸದ ಭದ್ರತೆ ಇಲ್ಲ, ಕನಿಷ್ಠ ವೇತನ ವೆಂಬುದಿಲ್ಲ ಅಲ್ಲದೆ ಇತರ ಯಾವುದೇ ಸೌಲಭ್ಯಗಳಿಲ್ಲದೆ ಶೋಷಣೆಗೆ ಒಳಗಾಗಿದ್ದಾರೆ. ಆದ್ದರಿಂದ ಇವರೆಲ್ಲರಿಗೆ ಭದ್ರತೆ ಹಾಗೂ ರಕ್ಷಣೆ ಈ ಉದ್ದೇಶವನ್ನೀಟ್ಟುಕೊಂಡು ಒಂದು ವೃತ್ತಿ ಸಂಘವನ್ನು ಪ್ರಾರಂಭಿಸುವುದು ಸೂಕ್ತವೆಂದು ಮನಗಂಡು ಭಾರತೀಯ ಮಜ್ದೂರ್ ಸಂಘ ಸಂಯೋಜಿತವಾಗಿ ರಬ್ಬರ್ ಟ್ಯಾಪರ್ಸ್ ಮತ್ತು ಕೃಷಿ ಮಜ್ದೂರ್ ಸಂಘವನ್ನು ಈಗಾಗಲೇ ಪ್ರಾರಂಭಿಸಲಾಗಿದ್ದು ಇದರ ಕಚೇರಿ ಉದ್ಘಾಟನೆ ಮತ್ತು ಸದಸ್ಯತ್ವ ಅಭಿಯಾನ ಜ.17 ರಂದು ಚಾಲನೆ ನೀಡಲಿದ್ದೇವೆ ಎಂದು ರಬ್ಬರ್ ಟ್ಯಾಪರ್ಸ್ ಮಜ್ದೂರು ಸಂಘದ ಉಭಯ ಜಿಲ್ಲಾ ಸಮಿತಿ ಅಧ್ಯಕ್ಷ ಸುರೇಶ್ ದಯಾನಂದ್ ಹೇಳಿದರು.ಅವರು ಬೆಳ್ತಂಗಡಿ ಪತ್ರಿಕಾಭವನದಲ್ಲಿ ಬುಧವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದರು.
ಕಳೆದ ಒಂದೂವರೆ ವರ್ಷದಿಂದ ಈ ಸಂಘವು ಕಾರ್ಯಾಚರಿಸುತ್ತಿದೆ.ಈ ವರೆಗೆ ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುವ ಕಾರ್ಮಿಕರ ಪೈಕಿ ತೀರಾ ಕಡು ಬಡತನದಲ್ಲಿದ್ದ 16 ಕುಟುಂಬದ ಅನಾರೋಗ್ಯದ ಸಮಯದಲ್ಲಿ ಸಹಾಯಧನ ನೀಡಿದ್ದೇವೆ. ಹಣವನ್ನು ಸರ್ಕಾರದಿಂದ ಪಡೆಯದೆ ನಮ್ಮ ಸಂಘದ ಜಿಲ್ಲಾ ಸಮಿತಿಯ ಪದಾಧಿಕಾರಿಗಳು, ಸದಸ್ಯರು ದಾನವಾಗಿ ಕೊಟ್ಟದ್ದಾಗಿರುತ್ತದೆ.
ಕಾರ್ಮಿಕರಿಗೆ ಸಂಘದ ಸದಸ್ಯರು ದಾನ ರೂಪದಲ್ಲಿ ಕೊಟ್ಟ ಹಣದಲ್ಲಿ ಮೂರು ತಂಡದ ಸುಮಾರು ಎಪ್ಪತ್ತು ಮಂದಿ ಕಾರ್ಮಿಕರಿಗೆ ರಬ್ಬರ್ ಟ್ಯಾಪಿಂಗ್ ತರಬೇತಿಯನ್ನು ನೀಡಲಾಗಿದೆ. ನೂರಾರು ಸಭೆಗಳನ್ನು ಮಾಡಿ ಕಾರ್ಮಿಕರಿಗೆ ಮಾಹಿತಿ ಕಾರ್ಯಕ್ರಮ, ಸಾಮಾನ್ಯ ಸರ್ಕಾರಿ ಸೌಲಭ್ಯಗಳ ಮಾಹಿತಿ, ಜೀವನ ಮೌಲ್ಯಗಳು ಶಿಸ್ತು ಹೀಗೆ ಹಲವಾರು ಸಮಾಜ ಮುಖಿ ಕೆಲಸಗಳನ್ನು ಮಾಡಿದ್ದೇವೆ.
ಕೋವಿಡ್ ಸಮಯದಲ್ಲಿ ಬೆಳ್ತಂಗಡಿ ತಾಲೂಕಿಗೆ ಸಂಬಂಧಿಸಿದಂತೆ 150 ಆಹಾರ ಕಿಟ್ ಮತ್ತು 300 ಸುರಕ್ಷಾ ಕಿಟ್ ಗಳನ್ನು ರಬ್ಬರ್ ಟ್ಯಾಪಿಂಗ್ ಕೆಲಸ ಮಾಡುವ ಕಾರ್ಮಿಕರಿಗೆ ನೀಡಿದ್ದೇವೆ.
ಟ್ಯಾಪಿಂಗ್ ಕಾರ್ಮಿಕರು ಮತ್ತು ಮಾಲೀಕರ ನಡುವಿನ ಸಂಬಂಧವನ್ನು ಸುಧಾರಣೆ ಮಾಡಲು ಶ್ರಮಿಸಿದೆ ಮುಂದೆಯು ಶ್ರಮಿಸಲಿದ್ದೇವೆ. ಕಾರ್ಮಿಕರಿಗೆ ಸ್ವಂತ ಮನೆ ಇಲ್ಲದಿರುವ ಬಗ್ಗೆ, ಪಡಿತರ ಚೀಟಿ, ಆಧಾರ್ ಕಾರ್ಡ್ ಮುಂತಾದ ದಾಖಲೆ ಪಡೆಯಲು ಆಗುವ ತೊಂದರೆ ಹಾಗೂ ಕುಂದು ಕೊರತೆಗಳ ಬಗ್ಗೆ ಕಾರ್ಮಿಕ ಸಚಿವರಲ್ಲಿ, ಉಸ್ತುವಾರಿ ಸಚಿವರಲ್ಲಿ, ಬೆಳ್ತಂಗಡಿ ಶಾಸಕರಲ್ಲಿ ಮನವಿ ನೀಡಿದ್ದು ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ ಪಡೆಯಲು ರಬ್ಬರ್ ಬೋರ್ಡ್ ನಿಂದ ಅಲ್ಪ ಮೊತ್ತಕ್ಕೆ ದುಬಾರಿ ಖರ್ಚು ಮಾಡುವ ವ್ಯವಸ್ಥೆಯನ್ನು ಬದಲಾಯಿಸಬೇಕು ಎಂದು ಪ್ರಯತ್ನಿಸುತ್ತಿದ್ದೇವೆ.
ಕಾರ್ಮಿಕಲ್ಲಿ ಜಾಗೃತಿ ಮೂಡಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದರು.
ಎರಡು ಜಿಲ್ಲೆಯ ವ್ಯಾಪ್ತಿಗೆ ಬರುವ ತಾಲೂಕುಗಳಾದ ಸುಳ್ಯ, ಪುತ್ತೂರು, ಬೆಳ್ತಂಗಡಿ, ಕಡಬ, ಬಂಟ್ವಾಳ, ಉಡುಪಿ, ಕಾರ್ಕಳ, ಕುಂದಾಪುರ, ಬೈಂದೂರು, ಮೂಡುಬಿದಿರೆ ಮುಂತಾದ ಕಡೆಗಳಲ್ಲಿ ತಾಲೂಕು ಸಮಿತಿಗಳನ್ನು ಮಾಡಿ ತಾಲೂಕು ಸಮಿತಿಗಳಲ್ಲಿ ವಲಯ ಸಮಿತಿಯನ್ನು ಮಾಡಿ ಕಾರ್ಮಿಕರನ್ನು ಸಂಪರ್ಕಿಸಿ ಅವರ ಕಷ್ಟ ನಷ್ಟಕ್ಕೆ ಸ್ಪಂದಿಸುತ್ತಾ ಬಂದಿದ್ದೇವೆ ಎಂದರು.ಜ 17 ರಂದು ನಡೆಯುವ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಹರೀಶ್ ಪೂಂಜ ನೆರವೇರಿಸಲಿದ್ದಾರೆ.
ಅಧ್ಯಕ್ಷತೆಯನ್ನು ರಬ್ಬರ್ ಟ್ಯಾಪರ್ಸ್ ಮತ್ತು ಕೃಷಿ ಮಜ್ದೂರ್ ಸಂಘ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಇದರ ಅಧ್ಯಕ್ಷ ಸುರೇಶ್ ದಯಾನಂದ್ ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಬಿ.ಎಮ್.ಎಸ್ ಮಜ್ದೂರ್ ಸಂಘದ ತಾಲೂಕು ಅಧ್ಯಕ್ಷ ಉದಯ ಬಿ.ಕೆ, ಸರ್ಕಲ್ ಇನ್ಸ್ ಪೆಕ್ಟರ್ ಶಿವಕುಮಾರ್ ಬಿ, ಭಾರತೀಯ ಮಜ್ದೂರ್ ಸಂಘದ ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲಿಯಾನ್ ಕಾನರ್ಪ, ಬೀಡಿ ಮಜ್ದೂರ್ ಸಂಘ ತಾಲೂಕು ಸಮಿತಿ ಗೌರವ ಸಂಚಾಲಕ ಜಿ.ಕೆ.ಶರ್ಮಾ ಕೊಯ್ಯೂರು,
ಶ್ರೀ ಶಂಖಲಿಂಗಂ ಸಮಾಜ ಸೇವಕರು ಮತ್ತು ಮಾಜಿ ಸದಸ್ಯರು ತೊಡಿಕಾನ ಗ್ರಾಂ ಪಂಚಾಯತ್ ಸುಳ್ಯ ಮೊದಲಾದವರು ಭಾಗವಹಿಸಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಎಮ್‌ಎಸ್ ಸಂಘದ ತಾ. ಅಧ್ಯಕ್ಷ, ನ್ಯಾಯವಾದಿ ಉದಯ ಬಿ.ಕೆ, ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲಿಯಾನ್ ಕಾನರ್ಪ, ತಾ.ಸಮಿತಿ ಸದಸ್ಯ ಕುಮಾರನಾಥ ಶೆಟ್ಟಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಭುವನೇಶ್ವರ ಕಾರಿಂಜ, ತಾ.ಕಾರ್ಯದರ್ಶಿ ನಾಗರಾಜ್ ಬದನಾಜೆ ಉಪಸ್ಥಿತರಿದ್ದರು.