ಬೆಳ್ತಂಗಡಿ: ತಾಲೂಕಿನ ಹೃದಯಭಾಗ ಉಜಿರೆ ಪೇಟೆಯಲ್ಲಿ ರಸ್ತೆ ಅಗಲೀಕರಣಗೊಳ್ಳುತ್ತಿದೆ. ವಾಹನ ಸವಾರರನ್ನು ಗೊಂದಲಕ್ಕೀಡು ಮಾಡುತ್ತಿದ್ದ ಉಜಿರೆ ಪೇಟೆಯ ಡಿವೈಡರ್ ಗಳನ್ನು ಆದಿತ್ಯವಾರ ತೆರವುಗೊಳಿಸಲಾಯಿತು.
ಉಜಿರೆ ಮುಖ್ಯಪೇಟೆಯಲ್ಲಿ ಕಳೆದ 13 ವರ್ಷಗಳ ಹಿಂದೆ ಸುಂದರವಾದ ವೃತ್ತ ಇತ್ತು. ಇಲ್ಲಿ ಜನಾರ್ದನ ದೇವಸ್ಥಾನದ ಜಾತ್ರೆಯ ಸಂದರ್ಭ ದೇವರಿಗೆ ವಿಶೇಷ ಪೂಜೆ ಕೂಡ ನಡೆಯುತ್ತಿತ್ತು.ಅಂದಿನ ವೃತ್ತ ವಾಹನ ಸವಾರರಿಗೆ ಹಾಗೂ ಪ್ರಯಾಣಿಕರಿಗೆ ಕೂಡ ಅನುಕೂಲವನ್ನು ನೀಡುತ್ತಿತ್ತು. ನಂತರ ಈ ಸರ್ಕಲ್ ಅನ್ನು ತೆರವುಗೊಳಿಸಿ ಬೆಳ್ತಂಗಡಿ,ಧರ್ಮಸ್ಥಳ,ಚಾರ್ಮಾಡಿ ಮೊದಲಾದ ಕಡೆ ಹೋಗಲು ಡಿವೈಡರ್ ಗಳನ್ನು ಹಾಕಲಾಯಿತು.ಈ ಡಿವೈಡರ್ ಗಳು ತೀರಾ ಅವೈಜ್ಞಾನಿಕವಾಗಿದ್ದು ಸ್ಥಳೀಯ ಹಾಗೂ ಹೊರ ಊರಿನ ವಾಹನ ಸವಾರರಿಗೆ ಗೊಂದಲದ ಗೂಡಾಗಿತ್ತು.ಆಗಾಗ ಅಪಘಾತ, ಪದೇ ಪದೆ ಟ್ರಾಫಿಕ್ ಜಾಮ್,ರಾಂಗ್ ಸೈಡ್ ಚಾಲನೆ,ರಸ್ತೆಯಲ್ಲೇ ನಿಂತು ಜನರನ್ನು ಹತ್ತಿಸುವ ಬಸ್ ಹಾಗೂ ಇತರ ವಾಹನಗಳ ಜತೆಗೆ ಇನ್ನಿತರ ಸಮಸ್ಯೆಗಳಿಂದ ವಾಹನ ಸವಾರರು ಹಾಗೂ ಜನ ಸಾಮಾನ್ಯರು ಹೈರಾಣಾಗುವುದು ಸಾಮಾನ್ಯವಾಗಿತ್ತು. ಟ್ರಾಫಿಕ್ ಪೊಲೀಸರು ಕೂಡ ಈ ಬಗ್ಗೆ ಹೆಚ್ಚಿನ ಗಮನ ನೀಡುತ್ತಿರಲಿಲ್ಲ.
ಬೆಳಿಗ್ಗೆ ಹಾಗೂ ಸಂಜೆ ಜನ ಸಂದಣಿ ಜಾಸ್ತಿ ಇರುವ ಸಮಯ ಇಲ್ಲಿ ಭಾರಿ ಸಮಸ್ಯೆ ಉಂಟಾಗುತ್ತಿತ್ತು.
ಇಲ್ಲಿನ
ಡಿವೈಡರ್ ಗಳಿಂದ ಉಂಟಾಗುತ್ತಿರುವ ಅವ್ಯವಸ್ಥೆಗಳ ಕುರಿತು ಹಲವು ಬಾರಿ ಪತ್ರಿಕೆಗಳಲ್ಲಿ ವರದಿ ಪ್ರಕಟವಾಗಿತ್ತು.
ಡಿವೈಡರ್ ತೆರವು
ಇದೀಗ ವಾಹನ ಸವಾರರ ಅನುಕೂಲಕ್ಕಾಗಿ ಇಲ್ಲಿನ ಡಿವೈಡರ್ ಗಳನ್ನು ತೆರವುಗೊಳಿಸಲಾಗಿದೆ. ಇದರ ಜತೆ ಕಾಲೇಜು ರಸ್ತೆ ಅಭಿವೃದ್ಧಿ ಕಾಮಗಾರಿಯು ಸಾಗುತ್ತಿದೆ. ಡಿವೈಡರ್ ತೆರವಿನಿಂದ ಅನೇಕ ವರ್ಷಗಳಿಂದ ಉಜಿರೆಯಲ್ಲಿ ವಾಹನಗಳನ್ನು ಓಡಿಸಲು ಪರದಾಟ ನಡೆಸುತ್ತಿದ್ದವರು ಒಂದಿಷ್ಟು ನಿಟ್ಟುಸಿರುಬಿಡುವಂತಾಗಿದೆ. ಉಜಿರೆ ಗ್ರಾಪಂ ಉಪಾಧ್ಯಕ್ಷ ರವಿ ಬರೆಮೇಲು,ಪಿಡಿಒ ಪ್ರಕಾಶ ಶೆಟ್ಟಿ ನೊಚ್ಚ, ಉದ್ಯಮಿಗಳಾದ ರವಿ ಚಕ್ಕಿತ್ತಾಯ,ಶ್ರೀನಿವಾಸ ಬೈಪಾಡಿತ್ತಾಯ, ರಘುನಂದನ ಶೆಣೈ ಹಾಗೂ ಸ್ಥಳೀಯರು ಮತ್ತಿತರರು ಕಾಮಗಾರಿಗೆ ಮಾರ್ಗದರ್ಶನ ನೀಡಿದರು.
ಕಾಮಗಾರಿಗೆ ಅನುಕೂಲ
ವೀಕೆಂಡ್ ಕರ್ಫ್ಯೂ ಕಾರಣದಿಂದ ಉಜಿರೆ ಕಾಲೇಜು ರಸ್ತೆಯ ಕಾಮಗಾರಿ ಶನಿವಾರ ಹಾಗೂ ಭಾನುವಾರ ಭರದಿಂದ ಸಾಗಿತು. ಉಜಿರೆಯಲ್ಲಿ ಸದಾ ಜನ,ವಾಹನಗಳ ಸಂದಣಿಯಿಂದ ಕಾಮಗಾರಿಗೆ ಆಗಾಗ ತಡೆ ಉಂಟಾಗುತ್ತಿತ್ತು. ಆದರೆ ಕಳೆದ ಎರಡು ದಿನಗಳಲ್ಲಿ ಯಾವುದೇ ಹೆಚ್ಚಿನ ಅಡೆತಡೆಯಿಲ್ಲದೆ ಕಾಮಗಾರಿ ನಡೆದಿದೆ. ಡಿವೈಡರ್ ತೆರವುಗೊಳಿಸಲು ಕೂಡ ವೀಕೆಂಡ್ ಸಹಕಾರಿಯಾಯಿತು.
“ವಾಹನ ಸವಾರರು, ವರ್ತಕರು ಹಾಗೂ ಜನಸಾಮಾನ್ಯರು ಡಿವೈಡರ್ ತೆರವುಗೊಳಿಸುವ ಕುರಿತು ಪಂಚಾಯಿತಿಗೆ ಸಾಕಷ್ಟು ಮನವಿ ಸಲ್ಲಿಸಿದ್ದಾರೆ.ಇದೀಗ ಡಿವೈಡರ್ ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುಕೂಲವಾಗುವಂತೆ ಸಣ್ಣ ವೃತ್ತ ನಿರ್ಮಿಸಲಾಗುವುದು. ರಾಷ್ಟ್ರೀಯ ಹೆದ್ದಾರಿ ಇಲಾಖೆ ವತಿಯಿಂದ ರಸ್ತೆ ಅಭಿವೃದ್ಧಿ ಸಮಯ ಸುಸಜ್ಜಿತ ಸರ್ಕಲ್ ನಿರ್ಮಾಣಕ್ಕೆ ಮನವಿ ಮಾಡಲಾಗುವುದು ಎಂದು ಉಜಿರೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರವಿಕುಮಾರ್ ಬರಮೇಲು ಪ್ರತಿಕ್ರಿಯಿಸಿದ್ದಾರೆ.